ʼಯಾವುದೇ ಪುರಾವೆಯಿಲ್ಲʼ: ಭಾರತದ ಪ್ರಧಾನಿ ವಿರುದ್ಧದ ತನ್ನದೇ ದೇಶದ ಪತ್ರಿಕಾ ವರದಿಯನ್ನು ತಳ್ಳಿ ಹಾಕಿದ ಕೆನಡಾ
ಒಟ್ಟಾವಾ: ಕೆನಡಾದಲ್ಲಿ ಖಾಲಿಸ್ಥಾನಿ ಪ್ರತ್ಯೇಕವಾದಿ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಸಂಚಿನ ಬಗ್ಗೆ ಪ್ರಾಧಾನಿ ಮೋದಿಗೆ ತಿಳಿದಿತ್ತು ಎಂದು ಕೆನಡಾದ ಪತ್ರಿಕೆಯೊಂದು ವರದಿ ಮಾಡಿತ್ತು. ಇದೀಗ ತಮ್ಮದೇ ದೇಶದ ಮಾಧ್ಯಮವೊಂದರ ವರದಿಯನ್ನು ಕೆನಡಾ ತಳ್ಳಿ ಹಾಕಿದ್ದು, ಈ ವರದಿಯು ಊಹಾತ್ಮಕವಾಗಿದ್ದು, ಇದಕ್ಕೆ ಯಾವುದೇ ಪುರಾವೆಯಿಲ್ಲ ಎಂದು ಹೇಳಿದೆ.
ಕೆನಡಾದ ಗ್ಲೋಬ್ ಮತ್ತು ಮೇಲ್ ಪತ್ರಿಕೆ(GLOBE AND MAIL NEWSPAPER) ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಸಂಚಿನ ಬಗ್ಗೆ ಮೋದಿಗೆ ತಿಳಿದಿತ್ತು. ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರರು ಮತ್ತು ವಿದೇಶಾಂಗ ವ್ಯವಹಾರಗಳ ಸಚಿವರು ಕೂಡ ಈ ಸಂಚಿನ ಕುಣಿಕೆಯಲ್ಲಿದ್ದಾರೆ ಎಂದು ವರದಿಯನ್ನು ಮಾಡಿತ್ತು. ಈ ವರದಿಯನ್ನು ಭಾರತ ನಿರಾಕರಿಸಿತ್ತು. ಇಂತಹ ಅಸಂಬದ್ಧ ವರದಿಗಳಿಂದ ಭಾರತ ಮತ್ತು ಕೆನಡಾ ನಡುವಿನ ಸಂಬಂಧ ಮತ್ತಷ್ಟು ಹದಗೆಡಲಿದೆ. ಇದು ಪ್ರಧಾನಿಯ ಘನತೆಗೆ ಧಕ್ಕೆ ತರುವ ಪ್ರಯತ್ನವಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಹೇಳಿದ್ದರು.
ವರದಿ ಬಗ್ಗೆ ಪ್ರತಿಕ್ರಿಯಿಸಿದ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಅವರ ರಾಷ್ಟ್ರೀಯ ಭದ್ರತೆ ಮತ್ತು ಗುಪ್ತಚರ ಸಲಹೆಗಾರ ನಥಾಲಿ ಜಿ ಡ್ರೂಯಿನ್, ಕೆನಡಾದ ಮಾಧ್ಯಮ ಸಂಸ್ಥೆಯೊಂದು ಮಾಡಿದ ವರದಿಗೆ ಸಂಬಂಧಿಸಿದ ಯಾವುದೇ ಪುರಾವೆ ನಮ್ಮ ಬಳಿ ಇಲ್ಲ. ಕೆನಡಾದೊಳಗಿನ ಗಂಭೀರ ಕ್ರಿಮಿನಲ್ ಚಟುವಟಿಕೆಗೆ ಪ್ರಧಾನಿ ಮೋದಿ, ವಿದೇಶಾಂಗ ಸಚಿವ ಜೈಶಂಕರ್ ಅಥವಾ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಗೆ ಸಂಬಂಧವಿದೆ ಎಂದು ಕೆನಡಾ ಸರ್ಕಾರವು ಹೇಳಿಲ್ಲ ಅಥವಾ ಈ ಬಗ್ಗೆ ಯಾವುದೇ ಪುರಾವೆಗಳು ನಮ್ಮ ಬಳಿ ಇಲ್ಲ ಎಂದು ಹೇಳಿದ್ದಾರೆ.