ಭಾರತೀಯ ಪ್ರೊಫೆಸರ್ ಅಮೆರಿಕದಲ್ಲಿ ಗುಂಡೇಟಿನಿಂದ ಮೃತ್ಯು

Update: 2024-11-22 03:47 GMT

ಲಕ್ನೋ: ಅಮೆರಿಕದಲ್ಲಿ ನಾಲ್ಕು ದಶಕಗಳಿಂದ ವಾಸವಿದ್ದ ಭಾರತೀಯ ಶಿಕ್ಷಣ ತಜ್ಞ ಅಲ್ಲಿ ಹತ್ಯೆಗೀಡಾಗಿರುವುದು ಅವರ ಹುಟ್ಟೂರು ತುಳಸೀಪುರ ಮಝಾ ಗ್ರಾಮದ ನಿವಾಸಿಗಳನ್ನು ದಿಗ್ಭ್ರಮೆಗೊಳಿಸಿದೆ. ಉತ್ತರ ಪ್ರದೇಶದ ಗೊಂಡಾ ಮೂಲದ ಡಾ.ಶ್ರೀರಾಮ್ ಸಿಂಗ್ (58) ಎಂಬುವವರನ್ನು ಬುಧವಾರ ಜಾರ್ಜಿಯಾ ರಾಜಧಾನಿ ಅಟ್ಲಾಂಟಾದಲ್ಲಿ ಗುಂಡಿಟ್ಟು ಹತ್ಯೆ ಮಾಡಲಾಗಿತ್ತು.

ಅಟ್ಲಾಂಟಾದಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸುವ ಸಲುವಾಗಿ ತೆರಳುತ್ತಿದ್ದಾಗ, ಅಪರಿಚಿತರು ಇವರ ಕಾರಿನ ಮೇಲೆ ಗುಂಡಿನ ದಾಳಿ ನಡೆಸಿದ್ದರು ಎಂದು ತುಳಸೀಪುರ ಮಝಾ ಗ್ರಾಮದ ಮುಖ್ಯಸ್ಥ ಲಾಲ್ಜಿ ಸಿಂಗ್ ಹೇಳಿದ್ದಾರೆ. ಈ ಹತ್ಯೆಯ ಸುದ್ದಿಯನ್ನು ಮಗ ಅಮಿತ್ ಸಿಂಗ್ ಪ್ರಕಟಿಸಿದ್ದಾರೆ. ಲಾಲ್ಜಿ ಸಿಂಗ್ ಮತ್ತು ಡಾ.ಸಿಂಗ್ ಅಟ್ಲಾಂಟಾ ಕೃಷಿ ವಿಶ್ವವಿದ್ಯಾನಿಲಯದಲ್ಲಿ ಪ್ರೊಫೆಸರ್ ಗಳಾಗಿ 1990ರಲ್ಲಿ ಸೇರಿದ್ದರು.

ಕಳೆದ 37 ವರ್ಷಗಳಿಂದ ವಾಸಿಸುತ್ತಿದ್ದ ಅಮೆರಿಕದಲ್ಲಿ ಅವರು ಇತ್ತೀಚೆಗೆ ಸ್ವಂತ ವ್ಯವಹಾರ ಆರಂಭಿಸಿದ್ದರು. ಅಮೆರಿಕಕ್ಕೆ ತೆರಳುವ ಮುನ್ನ ಅವರು ಅಯೋಧ್ಯೆಯ ಕುಮಾರ್ ಗಂಜ್ ಆಚಾರ್ಯ ನರೇಂದ್ರ ದೇವ್ ಕೃಷಿ ವಿಶ್ವವಿದ್ಯಾನಿಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು ಎಂದು ತಮ್ಮ ಶಿವಾಜಿ ಸಿಂಗ್ ಹೇಳಿದ್ದಾರೆ. ಡಾಕ್ಟರೇಟ್ ಪದವಿ ಪಡೆದ ಬಳಿಕ ಅವರು ಅಟ್ಲಾಂಟಾ ಕೃಷಿ ವಿವಿಯಲ್ಲಿ ಪ್ರೊಫೆಸರ್ ಆಗಿ ಸೇರಿದ್ದು, ಕುಟುಂಬದ ಜತೆ ವಾಸವಿದ್ದರು.

ತಮ್ಮ ಸಾಮಾಜಿಕ ಕೌಶಲದಿಂದ ಅಮೆರಿಕದಲ್ಲಿ ಆಳವಾಗಿ ಬೇರೂರಿದ್ದರು. ಎರಡು ವರ್ಷ ಹಿಂದೆ ಅವರು ಉದ್ಯೋಗ ತೊರೆದು ಪಾಲುದಾರಿಕೆ ವ್ಯವಹಾರ ಆರಂಭಿಸಿದ್ದರು. ಅಲ್ಪಾವಧಿಯಲ್ಲೇ ಅವರ ವ್ಯವಹಾರ ವಿಸ್ತರಿಸಲ್ಪಟ್ಟಿತ್ತು. ಒಂದು ಶಾಪಿಂಗ್ ಮಾಲ್ ಜತೆಗೆ ಪೆಟ್ರೋಲ್ ಪಂಪ್ ಹಾಗೂ ಹೋಟೆಲ್ ವ್ಯವಹಾರವನ್ನೂ ಆರಂಭಿಸಿದ್ದರು. ಪಂಜಾಬ್ ಹಾಗೂ ಗುಜರಾತ್ ಮೂಲದವರ ಜತೆ ಸೇರಿ ಹಲವು ವ್ಯವಹಾರಗಳನ್ನು ಆರಂಭಿಸಿದ್ದು, ವ್ಯಾಪಾರದ ಪೈಪೋಟಿಯೇ ಈ ಹತ್ಯೆಗೆ ಕಾರಣವಿರಬೇಕು ಎಂದು ಅವರು ಅನುಮಾನ ವ್ಯಕ್ತಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News