ಲೈಂಗಿಕ ದೌರ್ಜನ್ಯ ಆರೋಪ: ಸೂರಜ್‌ ರೇವಣ್ಣ ಬಂಧನ

Update: 2024-06-23 15:54 GMT

ಹಾಸನ : ಯುವಕನ ಮೇಲೆ ಲೈಂಗಿಕ ದೌರ್ಜನ್ಯವೆಸಗಿರುವ ಆರೋಪದಡಿ ವಿಧಾನ ಪರಿಷತ್ತಿನ ಜೆಡಿಎಸ್ ಸದಸ್ಯ ಸೂರಜ್ ರೇವಣ್ಣ ಅವರನ್ನು ಇಲ್ಲಿನ ಹಾಸನ ಜಿಲ್ಲಾ ಸಿಇಎನ್ ಠಾಣೆ ಪೊಲೀಸರು ರವಿವಾರ ಬಂಧಿಸಿದ್ದಾರೆ.

ಜೂ.22ರಂದು ಇಲ್ಲಿನ ಹೊಳೆನರಸೀಪುರ ಗ್ರಾಮಾಂತರ ಠಾಣೆಗೆ ಬಂದ ಸಂತ್ರಸ್ತ ಯುವಕನೋರ್ವ, ಸೂರಜ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಮಾಡಿದ್ದರು. ಅನಂತರ, ಸೂರಜ್ ವಿರುದ್ಧ ಭಾರತೀಯ ದಂಡ ಸಂಹಿತೆ ಕಲಂ 377, 342, 506, 34ರ ಅಡಿ ಪ್ರಕರಣ ದಾಖಲಿಸಲಾಗಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ ದೂರಿಗೆ ಸಾಕ್ಷಿ ನೀಡಲು ಹಾಸನದ ಸೆನ್ ಪೊಲೀಸ್ ಠಾಣೆಗೆ ಸಂಜೆ 7.30ಕ್ಕೆ ಬಂದಿದ್ದ ಸೂರಜ್ ರೇವಣ್ಣನನ್ನು ಹೊಳೆನರಸೀಪುರ ಗ್ರಾಮಾಂತರ ಠಾಣೆ ಪೊಲೀಸರು, ವಿಚಾರಣೆಗೊಳಪಡಿಸಿದರು. ತದ ನಂತರವೂ ರಾತ್ರಿ ಪೂರ್ತಿ ಠಾಣೆಯಲ್ಲಿ ಇರಿಸಿಕೊಂಡು ಹೇಳಿಕೆ ದಾಖಲಿಸಿಕೋಂಡು ಸೂರಜ್ ರೇವಣ್ಣ ಅವರನ್ನು, ಪೊಲೀಸರು ಜೂ.23ರ ರವಿವಾರ ಬೆಳಗ್ಗೆ ಬಂಧಿಸಿದ್ದಾರೆ.

ವೈದ್ಯಕೀಯ ಪರೀಕ್ಷೆ: ಸೂರಜ್ ರೇವಣ್ಣ ಬಂಧನದ ಬಳಿಕ ಬೆಂಗಳೂರಿಗೆ ಕರೆತಂದಿರುವ ಪೊಲೀಸರು ಮೊದಲಿಗೆ ನಗರದ ಬೌರಿಂಗ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದರು. ಆನಂತರ, ಕೋರಮಂಗಲದಲ್ಲಿರುವ ಜನಪ್ರತಿನಿಧಿ ಕೋರ್ಟಿನ ನ್ಯಾಯಾಧೀಶ ಶಿವಕುಮಾರ್ ಅವರ ಮುಂದೆ ಹಾಜರುಪಡಿಸಿದರು.

ಏನಿದು ದೂರು?: ವಿಧಾನ ಪರಿಷತ್ ಸದಸ್ಯ ಡಾ.ಸೂರಜ್ ರೇವಣ್ಣ ಅವರು ತಮ್ಮ ಗನ್ನಿಗಡದ ಫಾರಂ ಹೌಸ್‍ಗೆ ಬರಮಾಡಿಕೊಂಡು ನನ್ನ ಮೇಲೆ ಅಸಹಜ ಲೈಂಗಿಕ ಕ್ರಿಯೆ ನಡೆಸಿದ್ದು ಹಾಗೂ ದೌರ್ಜನ್ಯವನ್ನು ನಡೆಸಿದ್ದಾರೆ. ಹನುಮನಹಳ್ಳಿ ಗ್ರಾಮದ ಶಿವಕುಮಾರ್ ಮತ್ತು ಸೂರಜ್ ರೇವಣ್ಣ ಅವರಿಂದ ತಮಗೆ ಹಾಗೂ ತಮ್ಮ ಕುಟುಂಬಕ್ಕೆ ಜೀವ ಬೆದರಿಕೆ ಇದೆ. ಇವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಹೊಳೆನರಸೀಪುರ ಗ್ರಾಮಾಂತರ ಠಾಣೆಗೆ ಯುವಕ ಲಿಖಿತ ದೂರು ನೀಡಿದ್ದರು.

ಬಳಿಕ ಈ ಬಗ್ಗೆ ಸಂತ್ರಸ್ತ ಬೆಂಗಳೂರಿಗೆ ತೆರಳಿ ಶುಕ್ರವಾರ ರಾಜ್ಯ ಪೊಲೀಸ್ ಮಹಾ ನಿರ್ದೇಶಕರು ಹಾಗೂ ಹಾಸನ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ (ಎಸ್ಪಿ)ಗೆ ದೂರು ಸಲ್ಲಿಸಿದ್ದರು. ಅದನ್ನು ಹೊಳೆನರಸೀಪುರ ಗ್ರಾಮಾಂತರ ಠಾಣೆಗೆ ವರ್ಗಾಯಿಸಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ಹೊಳೆನರಸೀಪುರ ಗ್ರಾಮಾಂತರ ಠಾಣೆಯಲ್ಲಿ ಎಎಸ್ಪಿ ವೆಂಕಟೇಶ್ ನಾಯ್ಡು ಹೇಳಿಕೆ ಪಡೆದರು. ನಂತರ ಪ್ರಕರಣ ದಾಖಲಿಸಲಾಗಿತ್ತು.

ಜನಪ್ರತಿನಿಧಿ ಕೋರ್ಟ್‍ಗೆ ವರ್ಗಾವಣೆ:  ಸೂರಜ್ ರೇವಣ್ಣ ವಿರುದ್ಧ ದಾಖಲಾಗಿರುವ ಪ್ರಕರಣದ ವಿಚಾರಣೆ ಬೆಂಗಳೂರಿನ ಜನಪ್ರತಿನಿಧಿ ಕೋರ್ಟ್‍ಗೆ ವರ್ಗಾವಣೆಕೊಂಡಿದೆ. ಸೂರಜ್ ವಿಧಾನ ಪರಿಷತ್ ಸದಸ್ಯರಾಗಿರುವ ಹಿನ್ನೆಲೆಯಲ್ಲಿ ಪ್ರಕರಣದ ವಿಚಾರಣೆ ಜನಪ್ರತಿನಿಧಿ ಕೋರ್ಟ್‍ನಲ್ಲಿ ನಡೆಯಲಿದೆ ಎಂದು ತನಿಖಾಧಿಕಾರಿವೊಬ್ಬರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News