ಇರಾನ್ ಮಿಲಿಟರಿ ಗುರಿಗಳ ಮೇಲೆ ದಾಳಿ ನಡೆಸಿದ ಇಸ್ರೇಲ್
ಮಧ್ಯಪ್ರಾಚ್ಯ ಸಂಘರ್ಷ ಮತ್ತಷ್ಟು ತೀವ್ರತೆ ಪಡೆದಿದ್ದು, ಸಿರಿಯಾ ಹಾಗೂ ಇರಾನ್ ನ ಮಿಲಿಟರಿ ಗುರಿಗಳ ಮೇಲೆ ದಾಳಿ ನಡೆಸಿದೆ. ದಕ್ಷಿಣ ಹಾಗೂ ಕೇಂದ್ರ ಸಿರಿಯಾದ ಮಿಲಿಟರಿ ನೆಲೆಗಳ ಮೇಲೆ ಇಸ್ರೇಲ್ ದಾಳಿ ನಡೆಸಿದೆ ಎಂದು ಸಿರಿಯಾದ ಸರ್ಕಾರಿ ಮಾಧ್ಯಮಗಳು ವರದಿ ಮಾಡಿವೆ.
ಮುಂಜಾನೆ 2 ಗಂಟೆಯ ಸುಮಾರಿಗೆ ದಕ್ಷಿಣ ಹಾಗೂ ಕೇಂದ್ರ ಸಿರಿಯಾದ ಹಲವು ಮಿಲಿಟರಿ ತಾಣಗಳ ಮೇಲೆ ಇಸ್ರೇಲ್ ದಾಳಿ ನಡೆಸಿದ ಎಂದು ಸರ್ಕಾರಿ ಸ್ವಾಮ್ಯದ ಸನಾ ಸುದ್ದಿಸಂಸ್ಥೆ ಹೇಳಿದೆ. ಇಸ್ರೇಲ್ ದಾಳಿಗೆ ಪ್ರತಿಯಾಗಿ ಸಿರಿಯಾದ ವಾಯು ರಕ್ಷಣಾ ವ್ಯವಸ್ಥೆ ಇಸ್ರೇಲ್ನ ಹಲವು ಕ್ಷಿಪಣಿಗಳನ್ನು ಹೊಡೆದುರುಳಿಸಿದೆ ಮತ್ತು ಹಾನಿಯನ್ನು ಅಧಿಕಾರಿಗಳು ಅಂದಾಜಿಸುತ್ತಿದ್ದಾರೆ ಎಂದು ಸನಾ ಹೇಳಿದೆ.
ಇರಾನ್ ವಿರುದ್ಧವೂ ಏಕಕಾಲಕ್ಕೆ ದಾಳಿ ನಡೆದಿದೆ ಎಂದು ಟೈಮ್ಸ್ ಆಫ್ ಇಸ್ರೇಲ್ ಸ್ಪಷ್ಟಪಡಿಸಿದೆ. ವಾಯುಪಡೆಯ ಮುಖ್ಯಸ್ಥ ಮೇಜರ್ ಜನರಲ್ ಥೋಮರ್ ಬಾರ್ ಜತೆಗೆ ಲೆಫ್ಟಿನೆಂಟ್ ಜನರಲ್ ಹೆರ್ಝಿ ಹಲೇವಿ ಇರಾನ್ ಮೇಲಿನ ದಾಳಿಯ ನೇತೃತ್ವ ವಹಿಸಿದ್ದಾರೆ ಎಂದು ಐಡಿಎಫ್ ಹೇಳಿದೆ.
ಇರಾನ್ ಮೇಳಿನ ದಾಳಿಯನ್ನು ಅಮೆರಿಕದ ರಾಷ್ಟ್ರೀಯ ಭದ್ರತಾ ಮಂಡಳಿ ಸಮರ್ಥಿಸಿಕೊಂಡಿದ್ದು, ಇದು ಸ್ವಯಂ ರಕ್ಷಣೆಯ ಕ್ರಮ ಎಂದು ಹೇಳಿಕೆ ನೀಡಿದೆ. ಟೆಹರಾನ್ ನಡೆಸಿದ ಸಿಡಿತಲೆ ಕ್ಷಿಪಣಿ ದಾಳಿಗೆ ಪ್ರತಿಯಾಗಿ ಈ ದಾಳಿ ನಡೆದಿದೆ ಎಂದು ಶ್ವೇತಭವನ ಸ್ಪಷ್ಟಪಡಿಸಿದೆ. ರಾಷ್ಟ್ರೀಯ ಭದ್ರತಾ ಮಂಡಳಿಯ ವಕ್ತಾರ ಸಿಯಾನ್ ಸವೆಟ್ ಈ ಬಗ್ಗೆ ಹೇಳಿಕೆ ನೀಡಿ, "ಮಿಲಿಟರಿ ನೆಲೆಗಳ ಮೇಲೆ ನಡೆದಿರುವ ನಿಖರ ದಾಳಿಗಳು ಸ್ವಯಂ ರಕ್ಷಣೆಯ ಕ್ರಮ ಹಾಗೂ ಅಕ್ಟೋಬರ್ 1ರಂದು ಇರಾನ್ ನಡೆಸಿದ ಸಿಡಿತಲೆ ಕ್ಷಿಪಣಿ ದಾಳಿಗೆ ಪ್ರತಿದಾಳಿ" ಎಂದು ಸಮರ್ಥಿಸಿಕೊಂಡರು.