ನಕಲಿ ಅಂಕಪಟ್ಟಿ ನೀಡಿ ಸರಕಾರಿ ಹುದ್ದೆ ಗಿಟ್ಟಿಸಿಕೊಂಡ ಆರೋಪ: 8 ಆರೋಪಿಗಳಿಗೆ 2 ವರ್ಷ ಜೈಲು ಶಿಕ್ಷೆ

Update: 2024-01-07 11:43 GMT

ಚಾಮರಾಜನಗರ: ನಕಲಿ ಅಂಕಪಟ್ಟಿ ಸಲ್ಲಿಸಿ ಗ್ರಾಮ ಲೆಕ್ಕಿಗರ ಉದ್ಯೋಗ ಗಿಟ್ಟಿಸಿಕೊಂಡ ಆರೋಪ ಸಾಬೀತಾದ ಹಿನ್ನೆಲೆ 8 ಮಂದಿ ಆರೋಪಿಗಳಿಗೆ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು 2 ವರ್ಷ ಜೈಲು ಶಿಕ್ಷೆ ವಿಧಿಸಿದೆ.

ಹಿರಿಯ ಸಿವಿಲ್ ನ್ಯಾಯಮೂರ್ತಿ ಹೊನ್ನುಸ್ವಾಮಿ ಅವರು ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ.

ಕೋಲಾರ ತಾಲೂಕಿನ ಸುನೀಲ್ ಕುಮಾರ್ (25), ಅರಸಿಕೆರೆ ತಾಲೂಕಿನ ಸಂತೋಷ್ ಕುಮಾರ್ (29), ಹಾಸನ ತಾಲೂಕಿನ ಎ.ಬಿ ಶಂಕರ್ (39), ಮುಳಬಾಗಿಲು ತಾಲೂಕಿನ ಎಂ. ಷಣ್ಮುಗ (25), ನಾರಾಯಣಸ್ವಾಮಿ (25), ದೇವನಹಳ್ಳಿ ತಾಲೂಕಿನ ಶ್ರೀರಾಮ್ (27), ದೊಡ್ಡಬಳ್ಳಾಪುರ ತಾಲೂಕಿನ ಮುನಿರಾಜು (25), ಹೊಸಕೋಟೆ ತಾಲೂಕಿನ ಎಸ್.ಬಿ‌‌ ಸಿದ್ದಲಿಂಗಯ್ಯ (24) ಶಿಕ್ಷೆಗೊಳಗಾದವರು.

ಪ್ರಕರಣ ಹಿನ್ನೆಲೆ : 2012ರಲ್ಲಿ ಚಾಮರಾಜನಗರ ಜಿಲ್ಲೆಯಲ್ಲಿ ಖಾಲಿ ಇದ್ದ 46 ಗ್ರಾಮ ಲೆಕ್ಕಿಗ ಹುದ್ದೆಯನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸಲಾಗಿತ್ತು. ಆ ಸಂದರ್ಭದಲ್ಲಿ ಈ 8 ಮಂದಿ ಅಪರಾಧಿಗಳು ದಿಲ್ಲಿ ಪಿಯು ಬೋರ್ಡ್ ಹಾಗೂ ಕರ್ನಾಟಕ ಶಿಕ್ಷಣ ಇಲಾಖೆಯ ನಕಲಿ ಅಂಕಪಟ್ಟಿಗಳನ್ನು ಸಲ್ಲಿಸಿ ಉದ್ಯೋಗ ಪಡೆದುಕೊಂಡಿದ್ದರು.

ಬಳಿಕ 2013ರಲ್ಲಿ ಅಂಕಪಟ್ಟಿಗಳ ನೈಜತೆ ಪರಿಶೀಲನೆ ವೇಳೆ ನಕಲಿ ಎಂದು ತಿಳಿದುಬಂದಿತ್ತು. ಈ ಸಂಬಂಧ ಚಾಮರಾಜನಗರ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದರ ಬೆನ್ನಲ್ಲೇ 8 ಮಂದಿಯನ್ನು ಸೇವೆಯಿಂದ ವಜಾ ಮಾಡಲಾಗಿತ್ತು. ಈ ಪ್ರಕರಣದ ವಿಚಾರಣೆಯು ಸಿಜೆಎಂ ನ್ಯಾಯಾಲಯದಲ್ಲಿ ನಡೆದಿತ್ತು. ಇದೀಗ ವಿಚಾರಣೆ ಪೂರ್ಣಗೊಂಡಿದ್ದು, ನಕಲಿ ಅಂಕಪಟ್ಟಿ ಕೊಟ್ಟು ವಂಚಿಸಿರುವುದು ಸಾಬೀತಾದ ಹಿನ್ನೆಲೆ 8 ಮಂದಿಗೆ ಶಿಕ್ಷೆ ವಿಧಿಸಿ ಕೋರ್ಟ್​ ಆದೇಶಿಸಿದೆ. ಸರ್ಕಾರದ ಪರವಾಗಿ ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕ ಎ.ಸಿ‌ ಮಹೇಶ್ ವಾದ ಮಂಡಿಸಿದ್ದರು

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News