ಬಿಜೆಪಿಯು ಜನರನ್ನು ಮತ್ತೆ ಗುಲಾಮಗಿರಿಗೆ ತಳ್ಳಲು ಹೊರಟಿದೆ: ಡಾ.ಹೆಚ್ ಸಿ ಮಹದೇವಪ್ಪ

Update: 2024-03-29 10:00 GMT

ಕೊಳ್ಳೇಗಾಲ: ಮಾ.29.ನಮ್ಮ ದೇಶದಲ್ಲಿ ಸಂವಿಧಾನ ಪರವಾಗಿ ಸಂವಿಧಾನದ ಆಶಯಗಳನ್ನು ಈಡೇರಿಸುವಂತಹ ಕೆಲಸ ಮಾಡುತ್ತಿರುವ ರಾಷ್ಟ್ರೀಯ ಪಕ್ಷ ಯಾವುದಾದರೂ ಇದ್ದರೆ ಅದು ನಮ್ಮ ಕಾಂಗ್ರೆಸ್ ಪಕ್ಷ ಎಂದು ಸಮಾಜ ಕಲ್ಯಾಣ ಸಚಿವರಾದ ಡಾ.ಹೆಚ್ ಸಿ ಮಹದೇವಪ್ಪ  ಅವರು ಹೇಳಿದ್ದಾರೆ.

ಶುಕ್ರವಾರ ಕೊಳ್ಳೇಗಾಲ ಪಟ್ಟಣದ ನ್ಯಾಷನಲ್ ಸ್ಕೂಲ್ ಮೈದಾನದಲ್ಲಿ  ಏರ್ಪಡಿಸಿದ ಚಾಮರಾಜನಗರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಚುನಾವಣಾ ಪೂರ್ವಸಭೆಯಲ್ಲಿ ಮಾತನಾಡಿದ ಅವರು,  ಈ ಬಾರಿಯ ಲೋಕಸಭಾ ಚುನಾವಣೆಯು ಬಹಳ ಮುಖ್ಯವಾಗಿದೆ. ಬಿಜೆಪಿಯು ಧರ್ಮ ಹಾಗೂ ದೇವರ ಹೆಸರಿನಲ್ಲಿ ರಾಜಕಾರಣ ಮಾಡುತ್ತಿದೆ. ದೇವರ ಹೆಸರಿನಲ್ಲಿ ಜನರಿಗೆ ಭಯ ಹುಟ್ಟಿಸುತ್ತಿದೆ. ರಾಷ್ಟ್ರೀಯ ಸಮಸ್ಯೆಗಳ ಬಗ್ಗೆ ತಲೆಕೆಡಿಸಿಕೊಳ್ಳದ ಬಿಜೆಪಿಯವರು ಸಂವಿಧಾನವನ್ನು ಬದಲಾಯಿಸಲು ಹುನ್ನಾರ ನಡೆಸುತ್ತಿದ್ದಾರೆ. ಆದ್ದರಿಂದ ಜನತೆ ಎಚ್ಚೆತ್ತುಕೊಂಡು ಬಿಜೆಪಿ ಪಕ್ಷವು ಕೇಂದ್ರದಲ್ಲಿ ಮತ್ತೆ ಅಧಿಕಾರಕ್ಕೆ ಬಾರದಂತೆ ನೋಡಿಕೊಳ್ಳಬೇಕೆಂದು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಮುಂದೆ ಮನವಿ ಮಾಡಿದರು.

ಬಿಜೆಪಿ ಪಕ್ಷದವರು ಜನರನ್ನು ಮತ್ತೆ ಗುಲಾಮಗಿರಿಗೆ ತಳ್ಳಲು ಹೊರಟಿದ್ದಾರೆ. ಈ ಕಾರಣಕ್ಕಾಗಿ ಇಂದಿನ ಪ್ರಜ್ಞಾವಂತ ಯುವಕರು ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿಗಳನ್ನೂ ಮನೆಮೆನೆಗೆ ತಿಳಿಸುವ ಕೆಲಸ ಮಾಡಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಡಳಿತವನ್ನು ಜನರಲ್ಲಿ ಮನವರಿಕೆ ಮಾಡುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಲು ಪ್ರತಿಯೊಬ್ಬ ಕಾಂಗ್ರೆಸ್ ಮುಖಂಡರುಗಳು ತಿಳಿಸಬೇಕು ಎಂದು ತಿಳಿಸಿದರು.

ಕರ್ನಾಟಕ ರಾಜ್ಯದ ಪ್ರತಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸಂವಿಧಾನ ಮತ್ತು ಅದರ ಮಹತ್ವವನ್ನು ಪ್ರತಿಯೊಬ್ಬ ನಾಗರಿಕನಿಗೂ ತಿಳಿಸುವ ನಿಟ್ಟಿನಲ್ಲಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಅದ್ಭುತವಾದ ಕಾರ್ಯಕ್ರಮವನ್ನು ನೆರವೇರಿಸಿದ್ದೇವೆ.ಬಹುಜನರ ಹಿತ ಶಕ್ತಿ ಕಾಪಾಡುವ ಪಕ್ಷ ನಮ್ಮದು ಆಗಾಗಿ ದೇಶಕ್ಕೆ ಕಾಂಗ್ರೆಸ್ ಪಕ್ಷದ ಅನಿವಾರ್ಯವಿದೆ. ಬಿಜೆಪಿ ಪಕ್ಷದ ನಾಯಕರು ಸಂವಿಧಾನ ಬದಲಾವಣೆ ಮಾಡಲು 400 ಜನರ ಗೆಲುವಿನ ಅವಶ್ಯಕತೆ ಇದೆ ಬಹಿರಂಗವಾಗಿ ಹೇಳುತ್ತಿದ್ದಾರೆ. ಹಾಗಾಗಿ ಮತದಾರರು ಈ ಬಾರಿ ಯೋಚಿಸಿ ಮತನೀಡಿ ಎಂದರು.

ಚಾಮರಾಜನಗರ ಲೋಕಸಭಾ ಕ್ಷೆತ್ರದಿಂದ ಸುನಿಲ್ ಬೋಸ್ ಅವರು ಸ್ಪರ್ಧೆ ಮಾಡುತ್ತಿದ್ದಾರೆ. ಅವರನ್ನು ಬೆಂಬಲಿಸುವ ಜೊತೆಗೆ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ ಅವರಿಗೆ ಬಲ ತುಂಬಿ ಎಂದು ಹೇಳುತ್ತಾ ತಮ್ಮ ಪುತ್ರನ ಪರ ಕಾಂಗ್ರೆಸ್ ಪಕ್ಷದ ಎಲ್ಲಾ ಕಾರ್ಯಕರ್ತರು ಮತಯಾಚನೆ ಮಾಡಬೇಕು ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News