ಚಾಮರಾಜನಗರ: ವೈದ್ಯರ ನಿರ್ಲಕ್ಷ್ಯ ಆರೋಪ; ಶಸ್ತ್ರಚಿಕಿತ್ಸೆಗೆ ದಾಖಲಾಗಿದ್ದ ಬಾಲಕ ಸಾವು
ಚಾಮರಾಜನಗರ: ಕೊಳ್ಳೇಗಾಲದ ಖಾಸಗಿ ಆಸ್ಪತ್ರೆಯೊಂದರಲ್ಲಿ ಅಪೆಂಡಿಕ್ಸ್ ಶಸ್ತ್ರ ಚಿಕಿತ್ಸೆಗೊಳಗಾಗಿದ್ದ ಬಾಲಕ ಮೃತಪ ಟ್ಟಿದ್ದು, ಇದಕ್ಕೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಕುಟುಂಬಸ್ಥರು ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿದರು.
ಮೃತ ಬಾಲಕನನ್ನು ಕೊಳ್ಳೇಗಾಲದ ಹಳೇ ಹಂಪಾಪುರ ಗ್ರಾಮದ ನಿವಾಸಿ ದಿ. ರವಿ ಅವರ ಪುತ್ರ ಆರ್.ವಿಜಯ್ (10) ಎಂದು ಗುರುತಿಸಲಾಗಿದೆ. ಹೊಟ್ಟೆನೋವಿನಿಂದ ಬಳಲುತ್ತಿದ್ದ ಬಾಲಕನನ್ನು ತಾಯಿ ಗೌರಿ ಹಾಗೂ ಕುಟುಂಬಸ್ಥರು ಶುಕ್ರವಾರ ಆಸ್ಪತ್ರೆಗೆ ಕರೆತಂದಾಗ ಆತನಿಗೆ ಅಪೆಂಡಿಕ್ಸ್ ಸಮಸ್ಯೆ ಇದ್ದು, ಶಸ್ತ್ರಚಿಕಿತ್ಸೆ ಮಾಡಿಸುವಂತೆ ವೈದ್ಯರು ಸಲಹೆ ನೀಡಿದ್ದರು.
ಶನಿವಾರ ಮಧ್ಯಾಹ್ನ ಶಸ್ತ್ರಚಿಕಿತ್ಸೆ ನಡೆದಿ, ವಿಶ್ರಾಂತಿಗೆಂದು ಮಲಗಿಸಿದ್ದ ಬಾಲಕನಿಗೆ 2ಗಂಟೆ ಕಳೆದರೂ ಯಾವುದೇ ಚಲನವಿಲ್ಲದ ಹಿನ್ನೆಲೆ ಬಾಲಕನ ಉಸಿರಾಟವನ್ನು ಗಮನಿಸಿದ ಕುಟುಂಬಸ್ಥರು ಅನು ಮಾನದಿಂದ ವೈದ್ಯರನ್ನು ಸಮೀಪಿಸಿದಾಗ ಬಾಲಕ ಮೃತ ಪಟ್ಟಿರುವುದಾಗಿ ವೈದ್ಯರು ಖಚಿತಪಡಿಸಿದ್ದಾರೆ.
ಬಾಲಕನ ಸಾವಿಗೆ ವೈದ್ಯರು ಹಾಗೂ ಸಿಬ್ಬಂದಿಯ ನಿರ್ಲಕ್ಷ್ಯ ಕಾರಣವೆಂದು ಕುಟುಂಬಸ್ಥರು ಆರೋಪಿಸಿದ್ದು, ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಗ್ರಾಮಸ್ಥರು ಆಸ್ಪತ್ರೆಯ ಗಾಜುಗಳನ್ನು ಹಾನಿಗೊಳಿಸಿದ್ದಾರೆ.
ಘಟನೆ ಕುರಿತು ಮಾಹಿತಿ ಪಡೆದು ಡಿವೈಎಸ್ಪಿ ಸೋಮೇಗೌಡ' ನೇತೃತ್ವದಲ್ಲಿ ಸ್ಥಳಕ್ಕೆ ಧಾವಿಸಿದ ಪೊಲೀಸರು ಆಸ್ಪತ್ರೆಗೆ ಸೂಕ್ತ ಬಂದೋಬಸ್ತ್ ಕಲ್ಪಿಸಿದ್ದಾರೆ.
ಘಟನೆಗೆ ಸಂಬಂಧಿಸಿ ವೈದ್ಯ, ಆಸ್ಪತ್ರೆಯ ಮುಖ್ಯಸ್ಥ, ಅರಿವಳಿಕೆ ತಜ್ಞವೈದ್ಯ ಸೇರಿದಂತೆ ನರ್ಸ್ ಗಳನ್ನು ಕೂಡಲೇ ಬಂಧಿಸಬೇಕು ಎಂದು ಬಾಲಕನ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಕೊಳ್ಳೇಗಾಲ ಪಟ್ಟಣ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಬಿ.ಕೆ.ಮಹೇಶ್ ಕುಮಾರ್ ಅವ ರಿಗೆ ಮೃತ ಬಾಲಕನ ಕುಟುಂಬದವರು ದೂರು ನೀಡಿದ್ದು, ಪೊಲೀಸರು ವಿಚಾರಣೆ ಕೈಗೊಂಡಿದ್ದಾರೆ.