ಚಾಮರಾಜನಗರ: ಸೋಲಿಗ ಜನಾಂಗದವರಿಂದ ಲಂಚಕ್ಕೆ ಬೇಡಿಕೆ; ಅರಣ್ಯಾಧಿಕಾರಿ ಲೋಕಾಯುಕ್ತ ಬಲೆಗೆ

Update: 2024-09-19 06:16 GMT

ಹನೂರು:   ಮನೆ ನಿರ್ಮಾಣ ಮಾಡಲು ಸೋಲಿಗ ಜನಾಂಗದ ನಿವಾಸಿಗಳಿಂದ ಲಂಚಕ್ಕೆ ಬೇಡಿಕೆಯಿಟ್ಟಿದ್ದ ಪಾಲರ್ ವಲಯ ವ್ಯಾಪ್ತಿಯ ಉಪವಲಯ ಅರಣ್ಯಾಧಿಕಾರಿ ಭೋಜಪ್ಪ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಘಟನೆ ವಿವರ: ಮಲೆ ಮಹದೇಶ್ವರ ವನ್ಯಜೀವಿ ವಲಯದ ವ್ಯಾಪ್ತಿಯ ಪಾಲಾರ್ ವಲಯದ ಉಪವಲಯ ಅರಣ್ಯಾಧಿಕಾರಿಯಾಗಿ ಭೋಜಪ್ಪ ಕರ್ತವ್ಯ ನಿರ್ವಹಿಸುತ್ತಿದ್ದರು. ಪಾಲಾರ್ ಗ್ರಾಮದಲ್ಲಿ ಆದಿವಾಸಿ ಕುಟುಂಬಗಳಿಗೆ 18 ಮನೆ ಮಂಜೂರಾಗಿದ್ದು ಎಲ್ಲಾ ಮನೆಯವರ ಅಡಿಪಾಯ ಕಾಮಗಾರಿ ಪೂರ್ಣಗೊಂಡ ನಂತರ ಸರ್ಕಾರದಿಂದ ಮೊದಲ ಕಂತು ಬಿಡುಗಡೆಯಾಗಿದೆ.

ಈ ವೇಳೆ ಮನೆ ನಿರ್ಮಾಣ ಮಾಡುತ್ತಿರುವ ಆದಿವಾಸಿಗಳನ್ನು ನೀವು ಗೋಡೆ ಕಟ್ಟಬೇಡಿ ಎಂದು ಸುಮಾರು ಒಂದು ತಿಂಗಳುಗಳ ಕಾಲ ಕಾಮಗಾರಿಗೆ ಅವಕಾಶ ಮಾಡಿಕೊಟ್ಟಿಲ್ಲ ಎಂದು ಎನ್ನಲಾಗಿದೆ. ನಂತರ ನಿವಾಸಿಗಳೆಲ್ಲರೂ ಮನೆ ನಿರ್ಮಾಣಕ್ಕೆ ಅವಕಾಶ ಮಾಡಿಕೊಡಿ ಎಂದು ಕೇಳಿಕೊಂಡಾಗ ಪ್ರತಿ ಮನೆಯವರು ಒಂದೊಂದು ಸಾವಿರ ರೂ. ನಂತೆ 18 ಸಾವಿರ ರೂ. ನೀಡಬೇಕೆಂದು ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಈ ಸಂಬಂಧ ಪಾಲಾರ್ ಗ್ರಾಮದ ಫಲಾನುಭವಿ ಮುರುಗೇಶ್ ಅವರು ಲೋಕಾಯುಕ್ತ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಚಾಮರಾಜನಗರ ಲೋಕಾಯುಕ್ತ ಡಿವೈಎಸ್ಪಿ ಮ್ಯಾಥೂಸ್ ರವರ ಮಾರ್ಗದರ್ಶನದಲ್ಲಿ ಇನ್ಸ್ಪೆಕ್ಟರ್ ಗಳಾದ ಲೋಹಿತ್, ಶಶಿಕುಮಾರ್ ದಾಳಿ ನಡೆಸಿ ಲಂಚ ಪಡೆಯುತ್ತಿದ್ದ ಉಪ ವಲಯ ಅರಣ್ಯ ಅಧಿಕಾರಿ ಭೋಜಪ್ಪ ರವರನ್ನು ಬುಧವಾರ ಸಂಜೆ 6 ಗಂಟೆಯ ವೇಳೆ ಹಣದ ಸಮೇತ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ . ಈ ಸಂಬಂಧ ಈಗಾಗಲೇ ಲೋಕಾಯುಕ್ತ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ದಾಳಿಯಲ್ಲಿ ಪೇದೆ ಗೌತಮ್, ಮಹಾಲಿಂಗ ಸ್ವಾಮಿ, ಮಹಾದೇವ ಸ್ವಾಮಿ ಸೇರಿದಂತೆ ಹತ್ತಕ್ಕೂ ಹೆಚ್ಚು ಸಿಬ್ಬಂದಿ ಪಾಲ್ಗೊಂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News