ಚಾಮರಾಜನಗರ | ಚಿರತೆ ಓಡಿಸಲು ಹಾರಿಸಿದ ಗುಂಡು ತಗುಲಿ ನಾಲ್ವರಿಗೆ ಗಾಯ

Update: 2024-09-20 09:02 GMT

ಚಾಮರಾಜನಗರ : ಚಿರತೆಯನ್ನು ಓಡಿಸಲು ಅರಣ್ಯ ಇಲಾಖೆ ಸಿಬ್ಬಂದಿ ಹಾರಿಸಿದ ಗುಂಡಿನಿಂದ ನಾಲ್ವರು ರೈತರು ಗಾಯಗೊಂಡಿದ್ದರೆ, ಇದೇ ವೇಳೆ ಚಿರತೆಯೂ ಮೃತಪಟ್ಟಿರುವ ಘಟನೆ ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲ್ಲೂಕಿನಲ್ಲಿ ನಡೆಡಿದೆ.

ತಾಲೂಕಿನ ಮದ್ದೂರು ಗ್ರಾಮದಲ್ಲಿ ರೈತರ ಜಮೀನಿನಲ್ಲಿ ಚಿರತೆ ಕಾಣಿಸಿಕೊಂಡಿದೆ. ಈ ಬಗ್ಗೆ ರೈತರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿದ್ದಾರೆ. ಈ ವೇಳೆ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆಯ ಸಿಬ್ಬಂದಿ ಚಿರತೆಯನ್ನು ಓಡಿಸಲು ತಮ್ಮ ಬಂದೂಕಿನಿಂದ ಗುಂಡನ್ನು ಹಾರಿಸಿದ್ದಾರೆ. ಈ ಗುಂಡು ನಾಲ್ವರಿಗೆ ತಗುಲಿದ್ದು, ಅವರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಈ ವೇಳೆ ಚಿರತೆಯೂ ಮೃತಪಟ್ಟಿದ್ದು, ಚಿರತೆ ಹೇಗೆ ಮೃತಪಟ್ಟಿದೆ ಎಂಬುದು ಇನ್ನು ಖಚಿತವಾಗಿಲ್ಲ. ಗಾಯಗೊಂಡ ವ್ಯಕ್ತಿಗಳನ್ನು ಇದೇ ಗ್ರಾಮದ ಶಿವು, ರವಿ, ರಂಗಸ್ವಾಮಿ ಹಾಗೂ ಮೂರ್ತಿ ಎಂದು ಗುರುತಿಸಲಾಗಿದೆ.

ಗಾಯಗೊಂಡ ಈ ನಾಲ್ಕು ರೈತರನ್ನು ಯಳಂದೂರು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆಯನ್ನು ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಕೊಳ್ಳೆಗಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

ಚಿರತೆಯ ಸಾವಿನ ಸುತ್ತ ಅನುಮಾನಗಳ ಹುತ್ತ: ಚಿರತೆಯು ಅರಣ್ಯ ಇಲಾಖೆಯವರು ಹಾರಿಸಿದ ಗುಂಡಿನಿಂದಲೇ ಮೃತಪಟ್ಟಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಆದರೆ ಅರಣ್ಯ ಇಲಾಖೆಯವರು ಇದು ಸಹಜವಾಗಿಯೇ ಮೃತಪಟ್ಟಿದೆ ಎಂದು ಹೇಳುತ್ತಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಉನ್ನತ ಮಟ್ಟದ ಅಧಿಕಾರಿಗಳು ಪರಿಶೀಲನೆ ನಡೆಸಿ ಮುಂದಿನ ಕ್ರಮ ವಹಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News