ಚಾಮರಾಜನಗರ: ಚಿನ್ನಾಭರಣ ಕಳ್ಳತನ; ತಮಿಳುನಾಡು ಮೂಲದ ಮಹಿಳೆಯ ಬಂಧನ

Update: 2024-09-12 09:04 GMT

ಚಾಮರಾಜನಗರ:  ನಗರದ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲಿ  ಸುಮಾರು 27 ಲಕ್ಷ ರೂ.ಗೂ ಹೆಚ್ಚು ಮೌಲ್ಯದ ಚಿನ್ನಾಭರಣವನ್ನು ದೋಚಿ ಪರಾರಿಯಾಗಿದ್ದಆರೋಪಿ ಮಹಿಳೆಯನ್ನು ಪತ್ತೆಹಚ್ಚಿ, 432 ಗ್ರಾಂ ಚಿನ್ನಾಭರಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತಾ ತಿಳಿಸಿದ್ದಾರೆ.

ಚಾಮರಾಜನಗರ ಪಟ್ಟಣ ಪೊಲೀಸ್ ಠಾಣೆಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರು,  ಸೆ.1 ರಂದು ಚಾಮರಾಜನಗರ ಮೂಲದ ಪುಷ್ಪಲತಾ ಎಂಬವರು 540 ಗ್ರಾಂ. ಚಿನ್ನಾಭರಣವನ್ನು ತಮ್ಮ ವ್ಯಾನಿಟಿ ಬ್ಯಾಗಿನಲ್ಲಿ ಹಾಕಿ ಕೊಂಡುತಮಿಳುನಾಡಿನ ಸತ್ಯಮಂಗಲಕ್ಕೆ ತೆರಳಲು ನಗರದ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲಿ ಬಸ್ ಹತ್ತಿದ್ದರು. ಈ ಸಂದರ್ಭದಲ್ಲಿ ಬಸ್ ನಲ್ಲಿ ಹೆಚ್ಚು ಜನರಿದ್ದು, ಪುಷ್ಪಲತಾ ಅವರು ಬಸ್ ನಿಂದ ಕೆಳಗಿಳಿದು ಬಂದು ನೋಡಿದಾಗ ವ್ಯಾನಿಟಿ ಬ್ಯಾಗ್ ನಲ್ಲಿದ್ದ ಚಿನ್ನಾಭರಣ ಕಳ್ಳತನವಾಗಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಪುಷ್ಪಲತಾ ಅವರು ಚಾಮರಾಜನಗರ ಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಿದ್ದರು ಎಂದು ಹೇಳಿದರು.

ತಮಿಳುನಾಡಿನ ಲಕ್ಷ್ಮೀ(43) ಬಂಧಿತ ಆರೋಪಿಯಾಗಿದ್ದು, ಈಕೆಯಿಂದ 432 ಗ್ರಾಂ. ಚಿನ್ನಾಭರಣವನ್ನು ವಶಪಡಿಸಿಕೊಂಡು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದರು.

ದೂರು ದಾಖಲಿಸಿಕೊಂಡ ಚಾಮರಾಜನಗರ ಪಟ್ಟಣ ಠಾಣೆಯ ಪೊಲೀಸರು, ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ.ಟಿ.ಕವಿತಾ ಹಾಗೂ ಡಿವೈಎಸ್ಪಿ ಲಕ್ಷ್ಮಯ್ಯ ಅವರ ಮಾರ್ಗದರ್ಶದಲ್ಲಿ ಕಾರ್ಯಾಚರಣೆ ಆರಂಭಿಸಿದರು. ಬಸ್ ನಿಲ್ದಾಣದಲ್ಲಿದ್ದ ಸಿಸಿ ಕ್ಯಾಮರಾವನ್ನು ಪರಿಶೀಲಿಸಿದ ವೇಳೆ ಪುಷ್ಟಲತಾ ರವರ ಬ್ಯಾಗ್ ನಿಂದ ಕಳ್ಳತನ ಮಾಡಿದ ತಮಿಳುನಾಡಿನ ಲಕ್ಷ್ಮೀ ಎಂಬ ಮಹಿಳೆ ಆಟೋವೊಂದರಲ್ಲಿ ತಮಿಳುನಾಡಿನ ತಾಳವಾಡಿ ಕಡೆ ಹೋಗಿರುವ ಮಾಹಿತಿ ಆಧರಿಸಿ ಪೊಲೀಸರು ಮಹಿಳೆಯನ್ನು ಪತ್ತೆಹಚ್ಚಿ ಬಂಧಿಸಿದರು.

ಕಳ್ಳತನ ಪ್ರಕರಣವನ್ನು ಯಶಸ್ವಿಯಾಗಿ ಭೇದಿಸಿದ ಚಾಮರಾಜನಗರ ಪಟ್ಟಣ ಠಾಣೆಯ ಇನ್ಸ್‌ಪೆಕ್ಟರ್ ರಾಜೇಶ್, ಸಬ್ ಇನ್ಸ್ ಪೆಕ್ಟರ್ ಸಿದ್ದರಾಜು, ಸಿಬ್ಬಂದಿ ಮೋಹನ್ ಕುಮಾರ್, ಲೋಕೇಶ್‌, ಮಹದೇವ ನಿಂಗರಾಜು, ರಾಜೇಶ್ವರಿ ಅವರ ಕಾರ್ಯವನ್ನು ಶ್ಲಾಘಿಸಿದರು.

ಸುದ್ದಿಗೋಷ್ಠಿಯಲ್ಲಿ ಡಿವೈಎಸ್ಪಿ ಲಕ್ಷ್ಮಯ್ಯ, ವೃತ್ತ ನಿರೀಕ್ಷಕ ರಾಜೇಶ್ ಇದ್ದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News