ನರೇಂದ್ರ ಮೋದಿ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದು, ಪ್ರಜಾಪ್ರಭುತ್ವ ವಿರೋಧಿಯಾಗಿದ್ದಾರೆ : ಸಿಎಂ ಸಿದ್ದರಾಮಯ್ಯ

Update: 2024-04-12 11:08 GMT

ಕೊಳ್ಳೆಗಾಲ: ಪ್ರಧಾನಿ ನರೇಂದ್ರ ಮೋದಿಯವರು ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದು, ಪ್ರಜಾಪ್ರಭುತ್ವದ ವಿರೋಧಿಯಾಗಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನೆಡಸಿದರು.

ಇಂದು ಕೊಳ್ಳೇಗಾಲ ನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಬೋಸ್ ಅವರ ಪರ ಪ್ರಜಾಧ್ವನಿ -02 ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿ ಮಾತನಾಡಿದರು.

"ನರೇಂದ್ರ ಮೋದಿಯವರ ಸರ್ಕಾರದಲ್ಲಿ ಸಂವಿಧಾನ ಸುರಕ್ಷಿತವಾಗಿಲ್ಲ. ನಾವು ಉಳಿಯಬೇಕಾದರೆ ಸಂವಿಧಾನ ಉಳಿಯಲೇಬೇಕು. ಸಂವಿಧಾನ ಉಳಿಯಬೇಕಾದರೆ ಕಾಂಗ್ರೆಸ್ ಗೆ ಮತ ಹಾಕಬೇಕು. ಮುಸಲೋನಿ, ಹಿಟ್ಲರ್ ಸಿದ್ಧಾಂತದಲ್ಲಿ ಬಿಜೆಪಿ ನಂಬಿಕೆಇಟ್ಟಿದೆ"  ಎಂದು ಹೇಳಿದರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಶೇ.43 ರಷ್ಟು ಮತಗಳನ್ನು ಪಡೆದು 136 ಸ್ಥಾನಗಳನ್ನು ಪಡೆದಿದ್ದೇವೆ. ಅಧಿಕಾರದಲ್ಲಿದ್ದ ಪಕ್ಷ ಕೇವಲ 66 ಸ್ಥಾನಗಳನ್ನು ಪಡೆಯಿತು. ಜಾತ್ಯಾತೀತ ಎಂದು ಹೇಳಿಕೊಳ್ಳುವ ಪಕ್ಷ 19 ಸ್ಥಾನಗಳನ್ನು ಪಡೆಯಿತು. ಈಗ ಅವರಿಬ್ಬರಿಗೂ ಈ ಚುನಾವಣೆಯಲ್ಲಿ ಭಯ ಬಂದಿದೆ. ಒಟ್ಟುಗೂಡಿ ಕಾಂಗ್ರಸ್ ಪಕ್ಷವನ್ನು ಎದುರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಯಾವುದೇ ಸಿದ್ಧಾಂತ, ಕಾರ್ಯಕ್ರಮ ಇಲ್ಲದೇ, ಕಾಂಗ್ರೆಸ್ ಸೋಲಿಸಬೇಕು ಎನ್ನುವುದೊಂದೇ ಗುರಿ ಹೊಂದಿದ್ದಾರೆ ಎಂದರು.

ಮೋದಿ ಬಿಟ್ಟರೆ ಬೇರೆ ಚುನಾವಣಾ ವಿಷಯವೇ ಇಲ್ಲ

ಇವರಿಗೆ ಮೋದಿ ಬಿಟ್ಟರೆ ಬೇರೆ ಚುನಾವಣಾ ವಸ್ತುವೇ ಇಲ್ಲ. ಎನ್‍ಡಿಎ ನೇತೃತ್ವದಲ್ಲಿ 10 ವರ್ಷಗಳ ಕಾಲ ಪ್ರಧಾನ ಮಂತ್ರಿಯಾಗಿರುವ ಮೋದಿ 10 ವರ್ಷಗಳಲ್ಲಿ ಏನು ಹೇಳಿದ್ದರು?, ಏನು ಮಾಡಿದ್ದಾರೆ ಎಂದು ಪರಿಶೀಲನೆ ಮಾಡಬೇಕು ಎಂದು ಕರೆ ನೀಡಿದರು.

ವಿದೇಶದಲ್ಲಿರುವ ಕಪ್ಪು ಹಣವನ್ನು ತಂದು ಪ್ರತಿಯೊಬ್ಬರ ಖಾತೆಗೆ 15 ರೂ. ಲಕ್ಷ ರೂ. ಹಾಕುವುದಾಗಿ ಹೇಳಿದ್ದರು. ಹಾಕಿದರೆ? ರೈತರ ಆದಾಯ 5 ವರ್ಷಗಳಲ್ಲಿ ದುಪ್ಪಟ್ಟು ಮಾಡುತ್ತೇನೆ ಎಂದಿದ್ದರು, ಮಾಡಿದರೆ?. ರೈತರು ನೆಮ್ಮದಿಯಾಗಿದ್ದಾರೆಯೇ?. ವರ್ಷಕ್ಕೆ 2 ಕೋಟಿ ಉದ್ಯೋಗಗಳನ್ನು ಸೃಷ್ಟಿಸುವುದಾಗಿ ಹೇಳಿದ್ದರು, ಮಾಡಿದರೆ?. ಈವರೆಗೆ 20 ಕೋಟಿ ಉದ್ಯೋಗಗಳನ್ನು ಸೃಷ್ಟಿಸಬೇಕಿತ್ತು. ಆದರೆ ಈವರೆಗೆ 20 ಲಕ್ಷ ಉದ್ಯೋಗವನ್ನೂ ಸೃಷ್ಟಿಸಲಾಗಿಲ್ಲ ಎಂದು ಟೀಕಿಸಿದರು.

ಜನರನ್ನು ತಲುಪಿದ ಗ್ಯಾರಂಟಿಗಳು

ಶಕ್ತಿ ಯೋಜನೆಯಡಿ ಮಹಿಳೆಯರು ಉಚಿತವಾಗಿ ಬಸ್ಸುಗಳಲ್ಲಿ ಓಡಾಡುತ್ತಿದ್ದಾರೆ. ಚಾಮರಾಜನಗರದ  ಶೇ.98 ಮನೆಗಳಿಗೆ ಉಚಿತ ವಿದ್ಯುತ್ ನೀಡಲಾಗಿದೆ. ಗೃಹಲಕ್ಷ್ಮೀ ಯೋಜನೆಯಡಿ ಮನೆ ಯಜಮಾನಿಗೆ 2000 ರೂ.ಗಳನ್ನು ಕೊಡಲಾಗುತ್ತಿದೆ. ಅನ್ನಭಾಗ್ಯ ಯೋಜನೆಯಡಿ ಅಕ್ಕಿ ಕೊಡಲು ಕೇಂದ್ರ ಸರ್ಕಾರ ಒಪ್ಪದಿದ್ದಾಗ 170 ರೂ.ಗಳನ್ನು ಪ್ರತಿಯೊಬ್ಬರಿಗೂ ನಮ್ಮ ಸರ್ಕಾರ ಕೊಡುತ್ತಿದೆ. ಯುವನಿಧಿ ಯೋಜನೆಯಡಿ ನಿರುದ್ಯೋಗಿ ಪದವೀಧರರಿಗೆ 3000, ನಿರುದ್ಯೋಗಿ ಡಿಪ್ಲೊಮಾ ಹೊಂದಿದವರಿಗೆ ಪ್ರತಿ ತಿಂಗಳು 1500 ರೂ.ಗಳನ್ನು ನೀಡಲಾಗುತ್ತಿದೆ ಎಂದು ವಿವರಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News