ಚಿಕ್ಕಮಗಳೂರು| ವಿದ್ಯುತ್ ತಗುಲಿ ಬಾಲಕ ಮೃತ್ಯು: ವಸತಿ ಶಾಲೆ ಪ್ರಾಂಶುಪಾಲ ಸಹಿತ 8 ಮಂದಿ ಅಮಾನತು

Update: 2024-06-16 07:24 GMT

ಚಿಕ್ಕಮಗಳೂರು: ಜಿಲ್ಲೆಯ ಕುಪ್ಪಾಳು ಗ್ರಾಮದಲ್ಲಿರುವ ವಸತಿ ಶಾಲೆಯ ಆವರಣದಲ್ಲಿದ್ದ ನೇರಳೆ ಹಣ್ಣು ಕೀಳಲು ಹೋಗಿದ್ದ ಶಾಲಾ ಬಾಲಕ ನಿಯಂತ್ರಣ ತಪ್ಪಿ ಮರದಿಂದ ಕೆಳಗೆ ಬೀಳುವ ವೇಳೆ ವಿದ್ಯುತ್ ತಂತಿ ತಗುಲಿ ಮೃತಪಟ್ಟ ಘಟನೆ ಸಂಬಂಧ ವಸತಿ ಶಾಲೆಯ ಪ್ರಾಂಶುಪಾಲ, ನಿಲಯಪಾಲಕ ಸೇರಿದಂತೆ 8ಮಂದಿ ಸಿಬ್ಬಂದಿಯನ್ನು ನಿರ್ಲಕ್ಷ್ಯತನದ ಆರೋಪದ ಮೇರೆಗೆ ಅಮಾನತುಗೊಳಿಸಿ ಕ್ರೈಸ್ ಕಾರ್ಯ ನಿರ್ವಾಹಕ ನಿರ್ದೇಶಕರು ಆದೇಶಿಸಿದ್ದಾರೆ.

ಜಿಲ್ಲೆಯ ಕಡೂರು ತಾಲೂಕಿನ ಕುಪ್ಪಾಳು ಗ್ರಾಮದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಬಾಲಕ ಆಕಾಶ್(13) ಶನಿವಾರ ಶಾಲೆ ಬಿಟ್ಟ ನಂತರ ತನ್ನ ಇಬ್ಬರು ಸಹಪಾಠಿಗಳೊಂದಿಗೆ ವಸತಿ ಶಾಲೆ ಆವರಣದಲ್ಲೇ ಇದ್ದ ನೇರಳೆ ಹಣ್ಣಿನ ಮರ ಏರಿ ಹಣ್ಣು ಕೀಳಲು ಮುಂದಾಗಿದ್ದ. ಮರದಲ್ಲಿ ಹಣ್ಣು ಕೀಳುತ್ತಿದ್ದ ವೇಳೆ ಬಾಲಕ ಆಕಾಶ್ ನಿಯಂತ್ರಣ ತಪ್ಪಿ ಕೆಳಗೆ ಬಿದ್ದಿದ್ದಾನೆ. ಮರದಿಂದ ಬೀಳುತ್ತಿದ್ದ ಸಂದರ್ಭದಲ್ಲಿ ಮರದ ಪಕ್ಕದಲ್ಲೇ ಹಾದು ಹೋಗಿದ್ದ ವಿದ್ಯುತ್ ತಂತಿಯನ್ನು ಬಾಲಕ ಹಿಡಿದುಕೊಂಡಿದ್ದಾನೆ. ಈ ವೇಳೆ ಬಾಲಕನಿಗೆ ವಿದ್ಯುತ್ ಪ್ರವಹಿಸಿ ನಿತ್ರಾಣಗೊಂಡಿದ್ದ.

ಕೂಡಲೇ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾದಗೇ ಬಾಲಕ ಮೃತಪಟ್ಟಿದ್ದ.

ಬಾಲಕನ ಸಾವಿಗೆ ವಸತಿ ಶಾಲೆಯ ಸಿಬ್ಬಂದಿಯ ನಿರ್ಲಕ್ಷ್ಯವೇ ಕಾರಣ ಎಂದು ಬಾಲಕನ ಸಂಬಂಧಿಕರು ಆರೋಪಿಸಿದ್ದ ಹಿನ್ನೆಲೆಯಲ್ಲಿ ಕ್ರೈಸ್ ಕಾರ್ಯ ನಿರ್ವಾಹಕ ನಿರ್ದೇಶಕ ಪ್ರವೀಣ್ ಬಿ ಬಾಗೇವಾಡಿ ಅವರು ಕುಪ್ಪಾಳು ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲ, ನಿಲಯಪಾಲಕ ಸೇರಿದಂತೆ 8 ಮಂದಿ ಸಿಬ್ಬಂದಿಯನ್ನು ಅಮಾನತು ಮಾಡಿ ಆದೇಶಿಸಿದ್ದಾರೆ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News