ಚಿಕ್ಕಮಗಳೂರು ಆರೋಗ್ಯ ಇಲಾಖೆ ಹುದ್ದೆ ನೇಮಕಾತಿಯಲ್ಲಿ ಭಾರೀ ಭ್ರಷ್ಟಾಚಾರ ಆರೋಪ: ತನಿಖೆಗೆ ಆಗ್ರಹ

Update: 2024-09-06 18:05 GMT

ರಮೇಶ್ ಕೆಳಗೂರು 

ಚಿಕ್ಕಮಗಳೂರು: ಜಿಲ್ಲೆಯ ಆರೋಗ್ಯ ಇಲಾಖೆಯಲ್ಲಿ ವೈದ್ಯರು, ನರ್ಸ್‌ಗಳು, ತಾಂತ್ರಿಕ ಸಿಬ್ಬಂದಿ ಸೇರಿದಂತೆ ಒಟ್ಟು 61 ಹುದ್ದೆಗಳಿಗೆ ನಡೆದಿರುವ ನೇಮಕಾತಿಯಲ್ಲಿ ಭಾರೀ ಭ್ರಷ್ಟಾಚಾರ ನಡೆದಿದೆ. ನೇಮಕಾತಿ ವೇಳೆ ಮೀಸಲಾತಿ, ಮೆರಿಟ್, ಸೇವಾನುಭವ ಸೇರಿದಂತೆ ಸರಕಾರಿ ಮಾನದಂಡಗಳನ್ನು ಪಾಲಿಸದೆ ಸ್ಥಳೀಯ ಉದ್ಯೋಗಾಕಾಂಕ್ಷಿಗಳಿಗೆ ಅನ್ಯಾಯ ಮಾಡಲಾಗಿದೆ ಸಿಪಿಐ ಪಕ್ಷದ ಮೂಡಿಗೆರೆ ತಾಲೂಕು ಕಾರ್ಯದರ್ಶಿ ರಮೇಶ್ ಕೆಳಗೂರು ಆರೋಪಿಸಿದ್ದಾರೆ.

ಶುಕ್ರವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಅಕ್ರಮ ನೇಮಕಾತಿ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ರಾಷ್ಟ್ರೀಯ ಆರೋಗ್ಯ ಅಭಿಯಾನ ಕಾರ್ಯಕ್ರಮದಡಿಯಲ್ಲಿ 2023ರಲ್ಲಿ ಜಿಲ್ಲೆಯ ಆರೋಗ್ಯ ಇಲಾಖೆಗೆ 61 ಹುದ್ದೆಗಳನ್ನು ಗುತ್ತಿಗೆ ಆಧಾರದಲ್ಲಿ ಭರ್ತಿ ಮಾಡಿಕೊಳ್ಳಲು ಸರಕಾರ ಆದೇಶಿಸಿತ್ತು. ನೇಮಕಾತಿ ವೇಳೆ ಮೀಸಲಾತಿ, ಮೆರಿಟ್, ಸೇವಾ ಅನುಭವ, ರೋಸ್ಟರ್ ಪದ್ಧತಿಯಂತಹ ಮಾನದಂಡಗಳಡಿಯಲ್ಲಿ ಹುದ್ದೆಗಳ ನೇಮಕಾತಿಗೆ ಆದೇಶ ಹೊರಡಿಸಲಾಗಿತ್ತು. ಆದರೆ, ಜಿಲ್ಲೆಯ ಡಿಎಚ್‌ಒ ಡಾ.ಅಶ್ವಥ್ ಬಾಬು ಹಾಗೂ ಆರ್‌ಸಿಎಚ್ ಡಾ.ಮಂಜುನಾಥ್ ಅವರು ಸರಕಾರದ ಮಾನದಂಡಗಳನ್ನು ಪಾಲಿಸದೆ ಹುದ್ದೆಗಳನ್ನು ಹಣಕ್ಕೆ ಮಾರಿಕೊಂಡಿರುವ ಆರೋಪ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ್ದವರಿಂದಲೇ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ನೇಮಕಾತಿ ಬಗ್ಗೆ ಸಮಗ್ರ ತನಿಖೆ ನಡೆಸಿ ಅಕ್ರಮ ಎಸಗಿರುವ ಜಿಲ್ಲಾ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದರು.

ನೇಮಕಾತಿಗೂ ಮುನ್ನ ಆರೋಗ್ಯ ಇಲಾಖೆ ಈ ಸಂಬಂಧ ಸ್ಥಳೀಯ ಪತ್ರಿಕೆಗಳ ಮೂಲಕ ಪತ್ರಿಕಾ ಪ್ರಕಟನೆ, ಜಾಹೀರಾತು ಮೂಲಕ ಅರ್ಜಿ ಆಹ್ವಾನಿಸಬೇಕು ಎಂಬುದು ಸರಕಾರದ ನಿಯಮವಾಗಿದೆ. ಆದರೆ, ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳು ಈ ಬಗ್ಗೆ ಸ್ಥಳೀಯ ಪತ್ರಿಕೆಗಳಿಗೆ ಜಾಹೀರಾತು ನೀಡದೆ ಹೊರ ಜಿಲ್ಲೆಗಳ ಒಂದೆರಡು ಪತ್ರಿಕೆಗಳ ಮೂಲಕ ಅರ್ಜಿ ಆಹ್ವಾನಿಸಿದ್ದಾರೆ. ಈ ಮೂಲಕ ಜಿಲ್ಲೆಯ ಅಭ್ಯರ್ಥಿಗಳಿಗೆ ಅನ್ಯಾಯ ಮಾಡಿದ್ದಾರೆ ಎಂದ ರಮೇಶ್, 61 ಹುದ್ದೆಗಳಿಗೆ 943 ಅರ್ಜಿಗಳು ಬಂದಿದ್ದು, ಹುದ್ದೆಗಳನ್ನು ಹಣಕ್ಕೆ ಮಾರಿಕೊಳ್ಳಲಾಗುತ್ತಿದೆ ಎಂದು ಹುದ್ದೆಯೊಂದಕ್ಕೆ ಅರ್ಜಿ ಸಲ್ಲಿಸಿದ್ದ ವ್ಯಕ್ತಿಯೊಬ್ಬರು ತನ್ನ ಬಳಿ ದೂರು ಹೇಳಿಕೊಂಡಿದ್ದರಿಂದ ತಾನು ಈ ಸಂಬಂಧ ಡಿಎಚ್‌ಒ ಕಚೇರಿಗೆ ಮಾಹಿತಿ ಹಕ್ಕಿನಡಿ ಅರ್ಜಿ ಸಲ್ಲಿಸಿ ಮಾಹಿತಿ ಕೇಳಿದ್ದೆ ಎಂದರು.

ಆದರೆ, ಆರೋಗ್ಯ ಇಲಾಖೆ ಅಧಿಕಾರಿಗಳು ಈ ಮಾಹಿತಿ ನೀಡಲು 4 ತಿಂಗಳಿನಿಂದ ಸತಾಯಿಸಿದ್ದಾರೆ. ಅಲ್ಲದೆ ತಾನು ಕೇಳಿದ ಮಾಹಿತಿ ನೀಡದೆ ಸಂಬಂಧವಿಲ್ಲದ ಮಾಹಿತಿ ನೀಡಿದ್ದಾರೆ. ಸಂಕ್ಷಿಪ್ತವಾಗಿ ನೀಡಬಹುದಾಗಿದ್ದ ಮಾಹಿತಿಯನ್ನು 24 ಸಾವಿರ ರೂ. ಶುಲ್ಕ ಕಟ್ಟಿಸಿಕೊಂಡು 12ಸಾವಿರ ಪುಟಗಳಷ್ಟು ದಾಖಲೆ ಪತ್ರಗಳನ್ನು ನೀಡಿದ್ದಾರೆ. ಅಧಿಕಾರಿಗಳು ನೀಡಿದ ದಾಖಲೆಗಳಲ್ಲಿ ನರ್ಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ್ದವರ ಮಾಹಿತಿ ನೀಡಿದ್ದಾರೆಯೇ ಹೊರತು ವೈದ್ಯರ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ್ದವರ ಬಗ್ಗೆ ಯಾವುದೇ ದಾಖಲೆ ಪತ್ರಗಳನ್ನು ನೀಡಿಲ್ಲ. ಹುದ್ದೆಗಳ ನೇಮಕಾತಿಗೆ ಅನುಸರಿಸಿದ ಮಾನದಂಡಗಳ ಬಗ್ಗೆಯೂ ಮಾಹಿತಿ ನೀಡಿಲ್ಲ. ಈ ಮೂಲಕ ವೈದ್ಯರ ಹುದ್ದೆಗಳ ನೇಮಕಾತಿಯಲ್ಲಿ ನಡೆದಿರುವ ಅಕ್ರಮವನ್ನು ಮುಚ್ಚಿ ಹಾಕಲು ಯತ್ನಿಸಿದ್ದಾರೆ ಎಂದು ಆರೋಪಿಸಿದರು.

ಜಿಲ್ಲಾ ಆರೋಗ್ಯ ಇಲಾಖೆಯವರ ಬಳಿ ತಾನು ಕೇಳಿದ್ದ ಮಾಹಿತಿಯನ್ನು ರಾಷ್ಟ್ರೀಯ ಆರೋಗ್ಯ ಅಭಿಯಾನದ ರಾಜ್ಯ ಘಟಕದಲ್ಲಿ ಮಾಹಿತಿ ಹಕ್ಕಿನಡಿಯೇ ಕೇಳಿದ್ದು, ಅಲ್ಲಿನ ಅಧಿಕಾರಿಗಳು ಕೇವಲ 50ರೂ. ಶುಲ್ಕ ಕಟ್ಟಿಸಿಕೊಂಡು ಮಾಹಿತಿ ನೀಡಿದ್ದಾರೆ. ಚಿಕ್ಕಮಗಳೂರು ಆರೋಗ್ಯ ಇಲಾಖೆಯ ಡಿಎಚ್‌ಒ ಹಾಗೂ ಆರ್‌ಸಿಎಚ್‌ಒ ಅಧಿಕಾರಿಗಳು ಅಕ್ರಮ ಮುಚ್ಚಿ ಹಾಕಲು 24 ಸಾವಿರ ರೂ. ಶುಲ್ಕ ಆಗುತ್ತದೆ ಎಂದು ಹೇಳಿ ತನ್ನನ್ನು ಮಾಹಿತಿ ಕೇಳುವುದರಿಂದ ಹಿಂದೆ ಸರಿಯುವಂತೆ ಮಾಡಿದ್ದಾರೆ ಎಂದು ದೂರಿದ ರಮೇಶ್, ಜಿಲ್ಲಾಡಳಿತ ಹಾಗೂ ರಾಜ್ಯ ಸರಕಾರ ಈ ಅಕ್ರಮ ನೇಮಕಾತಿ ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ರಮೇಶ್ ಒತ್ತಾಯಿಸಿದರು.

ಭೀಮ್ ಆರ್ಮಿ ಸಂಘಟನೆಯ ಜಿಲ್ಲಾ ಗೌರವಾಧ್ಯಕ್ಷ ಹೊನ್ನೇಶ್ ಮಾತನಾಡಿದರು.

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಜಗದೀಶ್ ಚಕ್ರವರ್ತಿ, ರಮೇಶ್, ಸುಜಯ್, ಜಗದೀಶ್, ಚೇತನ್ ಮತ್ತಿತರರು ಉಪಸ್ಥಿತರಿದ್ದರು.

ಅಕ್ರಮ ನೇಮಕಾತಿ ಬಗ್ಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ ಅವರಿಗೆ ದೂರು ನೀಡಿದ್ದೆ. ದೂರಿನ ಮೇರೆಗೆ ಕಟಾರಿಯಾ ಅವರು ತನಿಖೆ ನಡೆಸಲು ಜಿಪಂ ಸಿಇಒ ಅವರಿಗೆ ಆದೇಶಿಸಿ ಪತ್ರ ಬರೆದಿದ್ದಾರೆ. ಆದರೆ, ಜಿಪಂ ಸಿಇಒ ಅವರು ಇದುವರೆಗೂ ತನಿಖೆ ನಡೆಸದೇ ಅಕ್ರಮವನ್ನು ಮುಚ್ಚಿ ಹಾಕಿದ್ದಾರೆ. ಡಿಎಚ್‌ಒ ಹಾಗೂ ಆರ್‌ಸಿಎಚ್ ಅಧಿಕಾರಿ ಆರ್‌ಟಿಐ ಮಾಹಿತಿಯನ್ನೂ ಸಮರ್ಪಕವಾಗಿ ನೀಡದೆ ದಾರಿ ತಪ್ಪಿಸುವ ಕೆಲಸ ಮಾಡಿದ್ದು, ಈ ಬಗ್ಗೆ ರಾಜ್ಯ ಮಾಹಿತಿ ಆಯೋಗದ ನ್ಯಾಯಾಲಯದಲ್ಲಿ ದೂರು ದಾಖಲಿಸಲಾಗಿದೆ.

ರಮೇಶ್ ಕೆಳಗೂರು, ಸಿಪಿಐ ಮೂಡಿಗೆರೆ ತಾಲೂಕು ಕಾರ್ಯದರ್ಶಿ

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News