ಚಿಕ್ಕಮಗಳೂರಿನಲ್ಲಿ ಮುಂದುವರಿದ ಉತ್ತಮ ಮಳೆ ; ಕೃಷಿ ಚಟುವಟಿಕೆ ಬಿರುಸು

Update: 2024-06-03 13:47 GMT

ಚಿಕ್ಕಮಗಳೂರು : ಕಾಫಿನಾಡಿನಲ್ಲಿ ಮಳೆ ಮುಂದುವರಿದಿದೆ. ರವಿವಾರ ನಗರ ಸೇರಿದಂತೆ ಮಲೆನಾಡು ಹಾಗೂ ಬಯಲು ಭಾಗದ ಅಲ್ಲಲ್ಲಿ ಸಂಜೆ ವೇಳೆ ಉತ್ತಮ ಮಳೆಯಾಗಿದ್ದು, ಸೋಮವಾರ ಮಧ್ಯಾಹ್ನ ಹಾಗೂ ಸಂಜೆ ಜಿಲ್ಲೆಯಾದ್ಯಂತ ಧಾರಾಕಾರ ಮಳೆ ಸುರಿದಿದೆ. ಜಿಲ್ಲೆಯಲ್ಲಿ ಕಳೆದ 15 ದಿನಗಳಿಂದ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಮಲೆನಾಡು ಹಾಗೂ ಬಯಲು ಭಾಗದಲ್ಲಿ ಕೃಷಿ ಚಟುವಟಿಕೆಗಳು ಗರಿಗೆದರಿದೆ.

ಸೋಮವಾರ ಮಧ್ಯಾಹ್ನ ಚಿಕ್ಕಮಗಳೂರು ನಗರದಲ್ಲಿ ಕೆಲ ಹೊತ್ತು ಧಾರಾಕಾರ ಮಳೆಯಾಗಿದ್ದು, ಮಳೆಯಿಂದಾಗಿ ಕೆಲ ಹೊತ್ತು ನಗರದಲ್ಲಿ ವಾಹನ ಸಂಚಾರಕ್ಕೆ ಅಡಚಣೆಯಾಗಿದ್ದಲ್ಲದೇ ಜನಜೀವನವೂ ಅಸ್ತವ್ಯಸ್ತಗೊಂಡಿತ್ತು. ನಂತರ ಬಿಡುವು ನೀಡಿದ್ದ ಮಳೆ ಸಂಜೆ ವೇಳೆ ಮತ್ತೆ ಗುಡುಗ ಸಹಿತ ಆರ್ಭಟಿಸಿತು. ಚಿಕ್ಕಮಗಳೂರು ಸೇರಿದಂತೆ ಜಿಲ್ಲೆಯ ಬಯಲು ಭಾಗದ ಕಡೂರು, ತರೀಕೆರೆ, ಅಜ್ಜಂಪುರ ತಾಲೂಕುಗಳ ವ್ಯಾಪ್ತಿಯಲ್ಲೂ ಸೋಮವಾರ ಉತ್ತಮ ಮಳೆಯಾದ ಬಗ್ಗೆ ವರದಿಯಾಗಿದೆ.

ಇನ್ನು ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಳೆದ 15 ದಿನಗಳಿಂದ ಧಾರಾಕಾರ ಮಳೆಯಾಗುತ್ತಿದ್ದು, ಭಾರೀ ಮಳೆಯಿಂದಾಗಿ ಮಲೆನಾಡಿನ ತುಂಗಾ, ಭದ್ರಾ, ಹೇಮಾವತಿ ನದಿಗಳಲ್ಲಿ ನೀರಿನ ಹರಿವು ಹೆಚ್ಚಾಗಿದೆ. ನದಿಗಳು ಅಪಾಯದ ಮಟ್ಟ ಮೀರಿ ಹರಿಯದಿದ್ದರೂ ಈ ಬಾರಿಯ ಬೇಸಿಗೆಯ ಭಾರೀ ತಾಪಮಾನದಿಂದ ಬದಿದಾಗಿದ್ದ ನದಿಗಳು, ಕೆರೆ, ಹಳ್ಳಕೊಳ್ಳಗಳ ಒಡಲು  ಮಳೆ ನೀರಿನಿಂದಾಗಿ ನಳನಳಿಸಲಾರಂಭಿಸಿವೆ. 

ಜಿಲ್ಲೆಯಾದ್ಯಂತ ಈ ಬಾರಿ ಮುಂಗಾರಿಗೂ ಮುನ್ನ ಉತ್ತಮ ಮಳೆಯಾಗಿರುವ ಹಿನ್ನೆಲೆಯಲ್ಲಿ ಮಲೆನಾಡು ಭಾಗದಲ್ಲಿ ಕಾಫಿ, ಅಡಿಕೆ ತೋಟಗಳಲ್ಲಿ ಕೃಷಿ ಚಟುವಟಿಕೆ ಬಿರುಸುಗೊಂಡಿದೆ. ಕಾಫಿ, ಅಡಿಕೆ ತೋಟಗಳಿಗೆ ನೀರು ಹಾಯಿಸಲು ಪರದಾಡುತ್ತಿದ್ದ ಬೆಳೆಗಾರಿಗೆ ಮಳೆ ಸಂತಸ ನೀಡಿದೆ.

ಕಾಫಿ ತೋಟಗಳಲ್ಲಿ ಚಿಗುರು ತೆಗೆಯುವ, ಗೊಬ್ಬರ ಹಾಕುವ ಕೃಷಿ ಚಟುವಟಿಕೆ ನಡೆಯುತ್ತಿದ್ದರೇ, ಅಡಿಕೆ ತೋಟಗಳಲ್ಲಿ ಅಡಿಕೆ ಬೆಳೆಗೆ ತಗುಲುವ ಕೊಳೆ ರೋಗಕ್ಕೆ  ದ್ರಾವಣ ಸಿಂಪಡಿಸುವ, ಅಡಿಕೆ ಮರಗಳ ಬೇಸಾಯದ ಕೆಲಸ ಚರುಕುಗೊಂಡಿದೆ. ಇನ್ನು ಭತ್ತದ ಗದ್ದೆಗಳನ್ನು ನಾಟಿಗೆ ಹದಗೊಳಿಸುವ ಕೆಲಸವೂ ಮಲೆನಾಡಿನಲ್ಲಿ ಬಿರುಸಿನಿಂದ ನಡೆಯುತ್ತಿದೆ. ಬಯಲು ಭಾಗದಲ್ಲಿ ಈ ಬಾರಿ ಮುಂಗಾರು ಮಳೆ ಕೈಕೊಟ್ಟಿದ್ದರಿಂದ ತರಕಾರಿ ಬೆಳೆಗಳನ್ನು ಬೆಳೆಯಲು ಸಾಧ್ಯವಾಗದ ರೈತರು ಸದ್ಯ ಉತ್ತಮ ಮಳೆ ಕಾರಣದಿಂದ ಹೊಲ, ಜಮೀನುಗಳನ್ನು ಹದಗೊಳಿಸಿ ತರಿಕಾರಿ, ರಾಗಿ, ಜೋಳ ಸೇರಿದಂತೆ ದ್ವಿದಳ ಧಾನ್ಯಗಳ ಬಿತ್ತನೆಗೆ ಮುಂದಾಗಿದ್ದು, ರಸಗೊಬ್ಬರ, ಬಿತ್ತನೆ ಬೀಜಗಳ ಖರೀದಿಯೂ ಭರದಿಂದ ಸಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News