ಕೋಣೇಗೋಡು ಗ್ರಾಮಕ್ಕೆ ರಸ್ತೆ ಸೌಲಭ್ಯದ ಕೊರತೆ; ಜೋಳಿಗೆಯಲ್ಲಿ ಯುವಕನ ಮೃತದೇಹ ಸಾಗಿಸಿದ ಸಂಬಂಧಿಗಳು
ಚಿಕ್ಕಮಗಳೂರು: ರಸ್ತೆ ಸೌಲಭ್ಯದ ಕೊರತೆಯಿಂದಾಗಿ ಅನಾರೋಗ್ಯದಿಂದ ಮೃತಪಟ್ಟ ಯುವಕನೊಬ್ಬನ ಮೃತದೇಹವನ್ನು ಆತನ ಸಂಬಂಧಿಗಳು ಜೋಳಿಗೆಯಲ್ಲಿ ಕಟ್ಟಿ ಹೊತ್ತು ಸಾಗಿಸಿದ ಘಟನೆ ಜಿಲ್ಲೆಯ ಕಳಸ ತಾಲೂಕಿನ ಸಂಸ್ಥೆ ಗ್ರಾಪಂ ವ್ಯಾಪ್ತಿಯ ಕೋಣೇಗೋಡು ಗ್ರಾಮದಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.
ಅವಿನಾಶ್ (19) ಮೃತ ಯುವಕ. ಅನಾರೋಗ್ಯದಿಂದ ಬಳಲುತ್ತಿದ್ದ ಈತನನ್ನು ಜೋಳಿಗೆಯಲ್ಲಿ ಹೊತ್ತು ಕಾಲು ಸಂಕ ದಾಟಿ ಕಾಲ್ನಡಿಗೆಯಲ್ಲಿ ತೆರಳಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಆಂಬುಲೆನ್ಸ್ ಬಂದರೂ ರಸ್ತೆ ಇಲ್ಲದ ಹಿನ್ನೆಲೆಯಲ್ಲಿ ಊರಿನಿಂದ 1.5 ಕಿ.ಮೀ. ದೂರದಲ್ಲಿ ನಿಲ್ಲಬೇಕಾಗಿದ್ದರಿಂದ ಈತನನ್ನು ಹೊತ್ತುಕೊಂಡೇ ಆಸ್ಪತ್ರೆಗೆ ಸಾಗಿಸಲಾಗಿತ್ತು.
ಚಿಕಿತ್ಸೆಗೆಂದು ರೋಗಿಯನ್ನು ಆಸ್ಪತ್ರೆಗೆ ಕರೆದೊಯ್ಯಲೂ ಮೃತದೇಹ ತರಲೂ ಜೋಳಿಗೆಯೇ ಆಸರೆಯಾಗಿದೆ. ಆಂಬುಲೆನ್ಸ್ ಬಂದರೂ ಹಳ್ಳ ದಾಟಲು ಆಗುವುದಿಲ್ಲ. ಹೀಗಾಗಿ ಜೋಳಿಗೆಯಲ್ಲಿ ಹೊತ್ತುಕೊಂಡೇ ಕಾಲು ಸಂಕ ದಾಟಬೇಕಾಗಿದೆ.
ಅನಾರೋಗ್ಯ ಎದುರಾದರೆ ತಕ್ಷಣವೇ ಚಿಕಿತ್ಸೆಗೆ ಹೋಗಲಾಗದೇ ಪರದಾಡಬೇಕಾದ ಪರಿಸ್ಥಿತಿಯಿದ್ದು, ಗಂಭೀರ ಕಾಯಿಲೆ ಬಂದರೆ ಊರಿನ ಜನ ಒಂದು ಕೈಜೋಡಿಸಿದರೆ ಮಾತ್ರ ಜೀವ ಉಳಿಸಿಕೊಳ್ಳಲು ಸಾಧ್ಯ. ಸುಮಾರು 50ಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿರುವ ಈ ಗ್ರಾಮದಲ್ಲಿ ಜೀವ ಉಳಿಸಿಕೊಳ್ಳಲು ಜನಪ್ರತಿನಿಧಿಗಳು ಸೇತುವೆ, ರಸ್ತೆ ಮಾಡಿ ಕೊಡುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.