ಚಿಕ್ಕಮಗಳೂರು | ಪರಿಶಿಷ್ಟ ಜಾತಿಯ ಉಪಜಾತಿಗಳಿಗೆ ಶೀಘ್ರ ಒಳಮೀಸಲಾತಿ ಕಲ್ಪಿಸಲು ಆಗ್ರಹಿಸಿ ತಮಟೆ ಚಳವಳಿ

Update: 2024-09-12 17:00 GMT

ಚಿಕ್ಕಮಗಳೂರು : ಪರಿಶಿಷ್ಟ ಜಾತಿಯೊಳಗಿನ ಉಪಜಾತಿಗಳಿಗೆ ಒಳಮೀಸಲಾತಿ ಕಲ್ಪಿಸಲು ಸಂವಿಧಾನಬದ್ಧವಾದ ಅಧಿಕಾರ ಇದೆ ಎಂದು ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು ನೀಡಿದ್ದು, ರಾಜ್ಯ ಸರಕಾರ ಈ ತೀರ್ಪನ್ನು ಕೂಡಲೇ ಅನಷ್ಠಾನ ಮಾಡಬೇಕು ಎಂದು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ(ಪ್ರೊ.ಕೃಷ್ಣಪ್ಪ ಬಣ) ಮುಖಂಡರು, ಕಾರ್ಯಕರ್ತರು ಗುರುವಾರ ನಗರದಲ್ಲಿ ತಮಟೆ ಚಳವಳಿ ನಡೆಸಿದರು.

ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಸಮಾವೇಶಗೊಂಡ ದಸಂಸ ಮುಖಂಡರು, ಕಾರ್ಯಕರ್ತರು ನ್ಯಾಯಾಲಯ ತೀರ್ಪು ನೀಡಿದ್ದರೂ ರಾಜ್ಯ ಸರಕಾರ ಪರಿಶಿಷ್ಟಜಾತಿಯ ಉಪಜಾತಿಗಳಿಗೆ ಒಳಮೀಸಲಾತಿ ಕಲ್ಪಿಸಲು ಮೀನಾಮೇಷ ಎಣಿಸುತ್ತಿದೆ ಎಂದು ಆರೋಪಿಸಿ ಸರಕಾರದ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ದಸಂಸ ಮುಖಂಡರು, ಪರಿಶಿಷ್ಟ ಜಾತಿಯೊಳಗಿನ ಉಪಜಾತಿಗಳಿಗೆ ಸಂವಿಧಾನಬದ್ಧವಾಗಿ ಒಳಮೀಸಲಾತಿ ಕಲ್ಪಿಸಲು ಅವಕಾಶವಿದೆ. ರಾಜ್ಯ ಸರಕಾರಗಳು ತಮ್ಮ ಅಧಿಕಾರ ಬಳಸಿ ಒಳಮೀಸಲಾತಿ ಕಲ್ಪಿಸಬಹುದು ಎಂದು ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ. ಇದು ಕಳೆದ 30ವರ್ಷಗಳಿಂದ ಪ್ರೊ.ಕೃಷ್ಣಪ್ಪ ಅವರು ಸ್ಥಾಪಿಸಿರುವ ಕರ್ನಾಟಕ ದಲಿತ ಸಂಘರ್ಷ ಸಮಿತಿ ನಡೆಸಿದ ಹೋರಾಟಕ್ಕೆ ಸಿಕ್ಕ ಜಯವಾಗಿದೆ ಎಂದರು.

ಒಳಮೀಸಲಾತಿ ವಿಚಾರದಲ್ಲಿ ಈ ಹಿಂದೆ ನ್ಯಾಯಾಲಯಗಳು ಪರಸ್ಪರ ವಿರುದ್ಧವಾದ ತೀರ್ಪು ನೀಡಿದ್ದವು. ಸದ್ಯ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶ ಚಂದ್ರಚೂಡ್ ನೇತೃತ್ವದ ಏಳು ನ್ಯಾಯಾಧೀಶರ ಸಂವಿಧಾನಿಕ ಪೀಠವು ಈ ವಿಚಾರದಲ್ಲಿದ್ದ ಗೊಂದಲವನ್ನು ಪರಿಹರಿಸಿದೆ. ಒಳಮೀಸಲಾತಿ ನೀಡುವುದು ಸಂವಿಧಾನ ಕಲ್ಪಿಸಿರುವ ಸಮಾನತೆಯ ಹಕ್ಕನ್ನು ಉಲ್ಲಂಘಿಸುವುದಿಲ್ಲ, ಬದಲಾಗಿ ಈ ಮೀಸಲಾತಿಯು ಸಮಾನತೆಯನ್ನು ಹೆಚ್ಚಿಸಲು ಅತ್ಯಗತ್ಯವಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ ಎಂದ ಮುಖಂಡರು, ಪರಿಶಿಷ್ಟ ಜಾತಿಯ ಸಮುದಾಯಗಳು ಸಮರೂಪದಲ್ಲಿಲ್ಲ ಮತ್ತು ಉಪಜಾತಿಗಳು ಮೀಸಲಾತಿಯ ಪ್ರಯೋಜವನ್ನು ಪಡೆಯಲು ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಪರಿಶಿಷ್ಟ ಜಾತಿಯ ಉಪಜಾತಿಗಳು ಅಭಿವೃದ್ಧಿಯಲ್ಲಿ ಹಿಂದುಳಿದಿವೆ. ಆದ್ದರಿಂದ ಈ ಉಪಜಾತಿಗಳಿಗೆ ಮೀಸಲಾತಿ ಕಲ್ಪಿಸಿದಲ್ಲಿ ಇದುವರೆಗೆ ಮೀಸಲಾತಿಯ ಲಾಭ ಪಡೆಯಲು ಸಾಧ್ಯವಾಗದ ಜಾತಿಗಳಿಗೆ ಪ್ರಯೋಜನ ಆಗಲಿದೆ ಎಂದು ನ್ಯಾಯಾಲಯ ಹೇಳಿದೆ ಎಂದರು.

ಧರಣಿ ಬಳಿಕ ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರಕಾರಕ್ಕೆ ಮುಖಂಡರು ಮನವಿ ಸಲ್ಲಿಸಿದರು. ಧರಣಿಯಲ್ಲಿ ಸಮಿತಿ ಜಿಲ್ಲಾ ಸಂಚಾಲಕ ಎಲ್.ಎಸ್.ಶ್ರೀಕಾಂತ್, ಮಾದಿಗ ಮೀಸಲಾತಿ ಹೋರಾಟ ಸಮಿತಿಯ ಗೋವಿಂದಪ್ಪ, ರಮೇಶ್, ದಸಂಸ ಮುಖಂಡರಾದ ರಾಮು, ಅಣ್ಣಯ್ಯ, ಪವಿತ್ರಾ, ಲಕ್ಷ್ಮಣ್, ಮಂಜಪ್ಪ, ಜನಶಕ್ತಿ ಸಂಘಟನೆಯ ಸಮೀವುಲ್ಲಾ ಧರಣಿ ನೇತೃತ್ವ ವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News