ಚಿಕ್ಕಮಗಳೂರು | ಕೊಂಚ ಬಿಡುವು ನೀಡಿದ ಮಳೆ : ಅಲ್ಲಲ್ಲಿ ಮುಂದುವರಿದ ಅನಾಹುತಗಳು
ಚಿಕ್ಕಮಗಳೂರು : ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಳೆದೊಂದು ವಾರದಿಂದ ಆರ್ಭಟಿಸಿದ್ದ ಮಳೆ ಬುಧವಾರ ಕೊಂಚ ಬಿಡುವು ನೀಡಿದೆ. ಮಳೆಯ ಆರ್ಭಟ ಕೊಂಚ ಕಡಿಮೆಯಾಗಿರುವುದರಿಂದ ಜನತೆ ನಿಟ್ಟುಸಿರು ಬಿಟ್ಟಿದ್ದಾರೆ. ಮಳೆ ಕಡಿಮೆಯಾದರೂ ಅಲ್ಲಲ್ಲಿ ಅವಘಡಗಳು ಮುಂದುವರಿದಿದ್ದು, ಅಲ್ಲಲ್ಲಿ ಭೂ ಕುಸಿತ, ಮನೆಗಳ ಮೇಲೆ ಮರ ಬಿದ್ದು ಹಾನಿ ಸಂಭವಿಸಿರುವ ಘಟನೆಗಳು ಬುಧವಾರವೂ ಮುಂದುವರಿದಿದೆ.
ಶೃಂಗೇರಿ ತಾಲೂಕಿನ ಕಿಗ್ಗಾ, ಕೆರೆಕಟ್ಟೆ ಭಾಗದಲ್ಲಿ ಮಳೆಯಾಗುತ್ತಿದ್ದು, ತುಂಗಾನದಿ ತುಂಬಿ ಹರಿಯುತ್ತಿದೆ. ಮಂಗಳವಾರ ಗಾಂಧಿ ಮೈದಾನದ ಪಾರ್ಕಿಂಗ್ ಜಾಗ ಹಾಗೂ ಅಂಗಡಿ ಮುಂಗಟ್ಟುಗಳಿಗೆ ನುಗ್ಗಿದ್ದ ನೆರೆ ನೀರು ಇಳಿಕೆಯಾಗಿದೆ. ಪ್ಯಾರಲರ್ ರಸ್ತೆಗೆ ಆವರಿಸಿದ್ದ ನೆರೆ ನೀರು ಕೂಡ ಇಳಿಕೆಯಾಗಿದೆ. ದೇವಸ್ಥಾನದ ಮೆಟ್ಟಿಲಿನಲ್ಲಿರುವ ಕಪ್ಪೆ ಶಂಕರ ದೇಗುವ ಮಂಗಳವಾರ ನದಿ ನೀರಿನಲ್ಲಿ ಮುಳುಗಿದ್ದು, ಬುಧವಾರವೂ ಈ ದೇಗುಲ ನದಿ ನೀರಿನಲ್ಲಿ ಮುಳುಗಡೆಯಾಗಿದೆ. ಗುರುಗಳ ಸಂಧ್ಯಾವಂದನೆ ಮಂಟಪ, ಸ್ನಾನಗೃಹದವರೆಗೂ ಪ್ರವಾಹದ ನೀರು ಆವರಿಸಿದ್ದು, ನದಿಪಾತ್ರದಲ್ಲಿನ ತೋಟಗಳು ಜಾಲವೃತಗೊಂಡಿವೆ. ಮಳೆ ಮುಂದುವರಿದರೇ ಮತ್ತಷ್ಟು ಸಮಸ್ಯೆಗಳು, ಅನಾಹುತಗಳು ಸಂಭವಿಸುವ ಆತಂಕ ಎದುರಾಗಿದೆ.
ಶೃಂಗೇರಿ ಭಾಗದಲ್ಲಿ ಧಾರಾಕಾರ ಮಳೆ ಸುರಿದ ಪರಿಣಾಮ ನೆಮ್ಮಾರಿನ ತೂಗು ಸೇತುವೆ ಕುಸಿದಿದೆ. ಐದಾರೂ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆ ಇದಾಗಿದ್ದು, ತೂಗು ಸೇತುವೆ ಕುಸಿದಿದ್ದರಿಂದ ಗ್ರಾಮದಿಂದ ಜನರು ಹೊರ ಬರಲಾರದೆ ಸಂಕಷ್ಟ ಅನುಭವಿಸುತ್ತಿದ್ದಾರೆ. ಸೇತುವೆ ದುರಸ್ತಿ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಅಧಿಕಾರಿಗಳು, ಜನಪ್ರತಿನಿಧಿಳ ನಿರ್ಲಕ್ಷ್ಯಕ್ಕೆ ನಿವಾಸಿಗಳು ಹಿಡಿಶಾಪ ಹಾಕುತ್ತಿದ್ದಾರೆ.
ಮಳೆಯ ಅಬ್ಬರಕ್ಕೆ ಕೊಪ್ಪ ತಾಲೂಕು ಜಯಪುರ ಸಮೀಪದ ಹುತ್ತಿನಗದ್ದೆ ಗ್ರಾಮದಲ್ಲಿ ಸಚಿನ್‍ಗೌಡ ಎಂಬವರ ಮನೆಯ ಹಿಂಭಾಗ ಧರೆ ಕುಸಿದಿದೆ. ಮಳೆ ಹೆಚ್ಚಾದರೇ ಮತ್ತಷ್ಟು ಬೂಮಿ ಕುಸಿಯುವ ಭೀತಿ ಎದುರಾಗಿದೆ. ಮಂಗಳವಾರ ಸುರಿದ ಭಾರಿ ಮಳೆ ಹಾಗೂ ಗಾಳಿಗೆ ಬಾಳೆ ಗ್ರಾಮದ ಕುಡ್ನಲ್ಲಿ ಮಧು ಎಂಬವರಿಗೆ ಸೇರಿದ ಹಸುವಿನ ಮೇಲೆ ಮರಬಿದ್ದು ಹಸು ಮೃತ ಪಟ್ಟಿದೆ.
ಕಳಸ ತಾಲೂಕಿನಾದ್ಯಂತ ಬುಧವಾರ ಬೆಳಗ್ಗೆಯಿಂದ ಮಳೆ ಆರ್ಭಟಿಸಿದ್ದು, ಮಧ್ಯಾಹ್ನದಿಂದ ಸಂಜೆವರೆಗೆ ಮಳೆ ಬಿಡುವು ನೀಡಿತ್ತು. ಸಂಜೆ ವೇಳೆ ಮಳೆ ಮತ್ತೆ ಆರ್ಭಟಿಸಿದ್ದು, ಕಳಸ ಪಟ್ಟಣ ಸಮೀಪದ ಕೈಮರ ಗ್ರಾಮದ ಪುಂಡರೀಕ ಎಂಬವರ ಮನೆಯ ಹಿಂಬದಿಯ ಭೂ ಕುಸಿದಿದೆ. ಮನೆ ಹಿಂಬದಿ ಮಣ್ಣಿನಿಂದ ಮುಚ್ಚಿ ಹೋಗಿದ್ದು, ಮನೆಗೆ ಹಾನಿಯಾಗಿದೆ. ಅಧಿಕಾರಿಗಳು ಸ್ಥಳ ಪರಿಶೀಲಿಸಿ ಪರಿಹಾರ ನೀಡಬೇಕೆಂದು ಕುಟುಂಬಸ್ಥರು ಮನವಿ ಮಾಡಿದ್ದಾರೆ.
ಮಳೆಯ ಆರ್ಭಟಕ್ಕೆ ಅಲ್ಲಲ್ಲಿ ರಸ್ತೆಗಳ ಮೇಲೆ ಮರ ಬಿದ್ದು ರಸ್ತೆ ಸಂಚಾರಕ್ಕೆ ಅಡ್ಡಿಯಾಗಿದೆ. ಅರಣ್ಯ ಇಲಾಖೆ ಹಾಗೂ ಸ್ಥಳೀಯರು ಮರ ತೆರವು ಗೊಳಿಸಿ ವಾಹನ ಸಂಚಾರಕಕ್ಕೆ ಅನುವು ಮಾಡಿಕೊಡುತ್ತಿದ್ದಾರೆ. ವಿದ್ಯುತ್ ಕಂಬಗಳ ಮೇಲೂ ಮರ ಬಿದ್ದು ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್ ಕಣ್ಣಾಮುಚ್ಚಾಲೆ ಆಡುತ್ತಿದೆ. ಎಡಬಿಡದೆ ಸುರಿಯುತ್ತಿದ್ದ ಮಳೆ ಬುಧವಾರ ಕೊಂಚ ಮಟ್ಟಿಗೆ ಬಿಡುವು ನೀಡಿದ್ದು, ಮಲೆನಾಡಿನ ಜನತೆ ನಿಟ್ಟುಸಿರು ಬಿಟ್ಟಿದ್ದಾರೆ. ಜಿಲ್ಲೆಯ ಬಯಲು ಭಾಗದಲ್ಲಿ ಮೋಡ ಕವಿದ ವಾತಾವರಣ ಮುಂದುವರಿದಿದ್ದು, ಆಗಾಗ್ಗೆ ಮಳೆಯಾಗುತ್ತಿದೆ. ನಾಲ್ಕು ದಿನಗಳಿಂದ ಬಯಲುಸೀಮೆ ಭಾಗದಲ್ಲಿ ಸಾಧಾರಣ ಮಳೆಯಾಗಿದೆ.
ಮೂಡಿಗೆರೆಯಲ್ಲಿ ಮುಂದುವರಿದ ಮಳೆ ಅಬ್ಬರ :
ಮೂಡಿಗೆರೆ ತಾಲೂಕಿನಲ್ಲಿ ಬುಧವಾರವೂ ಮಳೆ ಮುಂದುವರಿದಿದ್ದು, ಮಂಗಳವಾರ ಸುರಿದ ಭಾರೀ ಮಳೆಗೆ ಗೋಣಿಬೀಡು ಗ್ರಾಪಂ ವ್ಯಾಪ್ತಿಯ ದೇವರಮಕ್ಕಿ ಹಾಗೂ ಜಿ.ಹೊಸಳ್ಳಿ ಗ್ರಾಮಲ್ಲಿ 6 ಮನೆಗಳು ನೆಲಕ್ಕುರುಳಿವೆ. ಈ ಗ್ರಾಮಗಳಲ್ಲಿ ಸೋಮವಾರ , ಮಂಗಳವಾರ ಒಟ್ಟು 11 ಇಂಚಿನಷ್ಟ ಮಳೆಯಾಗಿದ್ದು, ಬುಧವಾರ ಬೆಳಗ್ಗೆ ಹಾಗೂ ಸಂಜೆ ಧಾರಾಕಾರ ಮಳೆಯಾಗಿದೆ. ಭಾರೀ ಮಳೆಯಿಂದಾಗಿ ತಾಲೂಕಿನಾದ್ಯಂತ ಜನಜೀವನ ಅಸ್ತವ್ಯಸ್ತಗೊಂಡಿದ್ದು, ತಾಲೂಕಿನ ಚಾರ್ಮಾಡಿ ಘಾಟ್ ವ್ಯಾಪ್ತಿಯಲ್ಲಿ ನಿರಂತರ ಮಳೆಯಿಂದಾಗಿ ವಾಹನಗಳ ಸಂಚಾರಕ್ಕೂ ತೊಂದರೆಯಾಗಿದೆ. ತಾಲೂಕಿನಲ್ಲಿ ಹರಿಯುವ ಹೇಮಾವತಿ ನದಿ ತುಂಬಿ ಹರಿಯುತ್ತಿದ್ದು, ನದಿ ಪಾತ್ರದ ತೋಟ, ಗದ್ದೆಗಳಿಗೆ ನದಿಯ ನೆರೆ ನೀರು ನುಗ್ಗಿ ಅಪಾರ ಹಾನಿ ಸಂಭವಿಸಿದೆ.