ಕಡೂರಿನ ಕನಕರಾಯನಗುಡ್ಡವನ್ನು ಪ್ರವಾಸಿ ತಾಣವಾಗಿಸಲು ಪ್ರಯತ್ನ: ಶಾಸಕ ಆನಂದ್
ಕಡೂರು: ಐತಿಹಾಸಿಕ ಕುರುಹಾದ ಕನಕರಾಯನಗುಡ್ಡ ಪ್ರದೇಶವನ್ನು ಉತ್ತಮ ಪ್ರವಾಸಿ ತಾಣವಾಗಿ ಅಭಿವೃದ್ಧಿ ಪಡಿಸಲಾಗುವುದೆಂದು ಎಂದು ಶಾಸಕ ಕೆ.ಎಸ್. ಅನಂದ್ ಹೇಳಿದರು.
ತಾಲೂಕು ಆಡಳಿತ ಪಟ್ಟಣದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ 537ನೇ ದಾಸಶ್ರೇಷ್ಟ ಕನಕದಾಸರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ದಾರ್ಶನಿಕರು ಮತ್ತು ವಚನಕಾರರ ಜಯಂತಿ ಕಾರ್ಯಕ್ರಮಗಳು ಇತ್ತೀಚಿನ ದಿನಮಾನಗಳಲ್ಲಿ ಸಾಂಕೇತಿಕವಾಗಿ ಆಚರಿಸಲಾಗುತ್ತಿರುವುದು ಮತ್ತು ಅಂತಹ ಸತ್ಪುರುಷರನ್ನು ಜಾತಿಗೆ ಸೀಮಿತಗೊಳಿಸಿರುವುದು ವಿಷಾದನೀಯ ಎಂದರು.
12ನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣನವರ ಜಾತ್ಯತೀತ, ಸಮಸಮಾಜದ ಪರಿಕಲ್ಪನೆಯನ್ನು ಸಾಕಾರಗೊಳಿಸಿದಂತೆ ಕನಕದಾಸರು ತಮ್ಮ ಕೀರ್ತನೆಗಳ ಮೂಲಕ ಸಮಾಜದಲ್ಲಿ ಜಡ್ಡುಗಟ್ಟಿದ್ದ ಮೌಲ್ಯಗಳನ್ನು ಕಿತ್ತೆಸೆದು ಜನಜಾಗೃತಿ ಮೂಡಿಸುವಲ್ಲಿ ಸಫಲತೆ ಕಂಡಿದ್ದರು. ತಿಮ್ಮಪ್ಪನ ದರ್ಶನಕ್ಕೆ ತಿರುಪತಿಗೆ ತೆರಳುವ ಮಾರ್ಗ ಮಧ್ಯೆ ಕಡೂರು ಸಮೀಪದ ಕನಕರಾಯನ ಗುಡ್ಡದಲ್ಲಿ ತಂಗಿದ್ದರೆಂಬ ಇತಿಹಾಸ ಇದೆ. ಹೀಗಾಗಿ ಈ ಪ್ರದೇಶವನ್ನು ಅವರ ನೆನಪಿಗಾಗಿ ಆಧ್ಯಾತ್ಮಿಕ, ಪ್ರವಾಸಿ ತಾಣವಾಗಿ ರೂಪಿಸಿ ಉತ್ತಮ ಸಂಪರ್ಕ ರಸ್ತೆ ನಿರ್ಮಾಣ ಮಾಡಲು ಪ್ರಯತ್ನಸುವುದಾಗಿ ಭರವಸೆ ನೀಡಿದರು.
ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಶರತ್ ಕೃಷ್ಣಮೂರ್ತಿ ಮಾತನಾಡಿ, ಕನಕದಾಸರ ಕೀರ್ತನೆಗಳಲ್ಲಿ ಆಳವಾದ ಅರ್ಥ ಅಡಗಿದೆ, ತಿಳಿಯುತ್ತಾ ಹೋದಂತೆ ಅನೇಕ ಸಾರವನ್ನು ಹೊರಹೊಮ್ಮಿಸುವ ಅವರ ಕೀರ್ತನೆ ಎಂದಿಗೂ ನಾಶವಾಗದು ಎಂದರು.
ಬೀರೂರು ಪುರಸಭೆ ಅಧ್ಯಕ್ಷೆ ವನಿತಾ ಮಧು ಅವರು ಕನಕದಾಸರ ಜೀವನ ಚರಿತ್ರೆ ಮತ್ತು ಅವರು ಕೀರ್ತನೆಯ ಮೂಲಕ ಇಂದಿಗೂ ಪ್ರಸ್ತುತವಾಗಿರುವ ಬಗ್ಗೆ ಅರ್ಥಪೂರ್ಣವಾಗಿ ಮಾತನಾಡಿ, ಕನಕದಾಸರು ಎಲ್ಲಿಯೂ ತಾವು ಕುರುಬ ಜನಾಂಗದವನು ಎಂದು ಹೇಳಿಕೊಂಡಿಲ್ಲ, ಅವರನ್ನು ನಾವೇ ಒಂದು ಜಾತಿಗೆ ಸೇರಿಸುವ ಪ್ರಯತ್ನ ಮಾಡುವುದು ಸಲ್ಲ ಎಂದರು.
ತಹಶೀಲ್ದಾರ್ ಸಿ.ಎಸ್.ಪೂರ್ಣಿಮಾ, ತಾಪಂ ಕಾರ್ಯನಿರ್ವಹಣಾಧಿಕಾರಿ ಪ್ರವೀಣ್, ಪುರಸಭೆ ಅಧ್ಯಕ್ಷ ಬಂಢಾರಿ ಶ್ರೀನಿವಾಸ್, ತಾಲೂಕು ಕುರುಬ ಸಮಾಜದ ಅಧ್ಯಕ್ಷ ಬೋಗಪ್ಪ, ಕರಿಬಡ್ಡೆ ಶ್ರೀನಿವಾಸ್, ಪುರಸಭೆ ಸದಸ್ಯರಾದ ಮೋಹನ್ ಕುಮಾರ್, ಮರುಗುದ್ದಿ ಮನು, ಈರಳ್ಳಿ ರಮೇಶ್, ಮೊಹಮ್ಮದ್ ಯಾಸಿನ್, ಕಂಸಾಗರ ಸೋಮಶೇಖರ್, ಸವಿತಾ ಸತ್ಯನಾರಾಯಣ, ಸವಿತಾ ರಮೇಶ್ ಮತ್ತು ತಾಲೂಕು ಆಡಳಿತದ ಅಧಿಕಾರಿಗಳು ಉಪಸ್ಥಿತರಿದ್ದರು.