"ಹಾಸ್ಟೆಲ್‍ಗಳಲ್ಲಿ ನಕ್ಸಲೀಯರು ತಂಗುತ್ತಾರೆ" | ಸಿ.ಟಿ.ರವಿ ವಿವಾದಾತ್ಮಕ ಹೇಳಿಕೆ : ವಿಡಿಯೋ ವೈರಲ್
ಚಿಕ್ಕಮಗಳೂರು : ನಕ್ಸಲ್ ವಿಕ್ರಂ ಗೌಡ ಎನ್‍ಕೌಂಟರ್ ಬೆನ್ನಲ್ಲೇ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹಾಸ್ಟೆಲ್‍ಗಳ ಬಗ್ಗೆ ತಾಲೂಕು ಪಂಚಾಯತ್ ಕೆಡಿಪಿ ಸಭೆಯಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದು, ಸಿ.ಟಿ.ರವಿ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಅಗಿದೆ.
"ಬಡ ಮಕ್ಕಳ ಶಿಕ್ಷಣಕ್ಕೆ ಅತ್ಯಗತ್ಯವಾಗಿರುವ ಹಾಸ್ಟೆಲ್‍ಗಳಲ್ಲಿ ನಕ್ಸಲೀಯರು ತಂಗುತ್ತಾರೆ. ವಿದ್ಯಾರ್ಥಿಗಳನ್ನು ನಕ್ಸಲ್ ಚಳವಳಿಗೆ ನೇಮಿಸಿಕೊಳ್ಳುತ್ತಾರೆ, ಅವರ ವಿಚಾರಗಳನ್ನು ಹಾಸ್ಟೆಲ್ ಯುವಕರ ತಲೆಗೆ ತುಂಬುತ್ತಾರೆ" ಎಂದು ಸಿ.ಟಿ.ರವಿ ಹೇಳಿದ್ದು, ಇದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಗುರುವಾರ ನಗರದ ಜಿಪಂ ಕಚೇರಿಯ ಸಭಾಂಗಣದಲ್ಲಿ ಚಿಕ್ಕಮಗಳೂರು ತಾಪಂ ಕೆಡಿಪಿ ಸಭೆ ನಡೆದಿದ್ದು, ಈ ಸಭೆಯ ಮಧ್ಯೆ ನಕ್ಸಲ್ ಚಟುವಟಿಕೆ ಮತ್ತೆ ಆರಂಭವಾಗಿರುವುದನ್ನು ಉಲ್ಲೇಖಿಸಿ ಅಧಿಕಾರಿಗಳಿಗೆ ಸೂಚನೆ ನೀಡಿದ ಸಿ.ಟಿ.ರವಿ, "ಹಾಸ್ಟೆಲ್‍ಗಳಲ್ಲಿ ನಕ್ಸಲೀಯರು ತಂಗುತ್ತಾರೆ, ವಿದ್ಯಾರ್ಥಿಗಳ ತಲೆಗೆ ನಕ್ಸಲೀಯರು ವಿಚಾರಗಳನ್ನು ತುಂಬುತ್ತಾರೆ, ಅವರನ್ನು ನಕ್ಸಲ್ ಚಳವಳಿಗೆ ನೇಮಿಸಿಕೊಳ್ಳುತ್ತಾರೆ. ಹಿಂದೆ ಇಂತಹ ಘಟನೆಗಳು ನಡೆದಿವೆ. ಆದ್ದರಿಂದ ಹಾಸ್ಟೆಲ್‍ಗಳಲ್ಲಿ ಇಂತಹ ಚಟುವಟಿಕೆಗೆ ಕಡಿವಾಣ ಹಾಕಬೇಕು, ಹೊರಗಿನವರನ್ನು ಹಾಸ್ಟೆಲ್‍ಗಳಿಗೆ ಬಿಡದಂತೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು. ಇದನ್ನು ಮೀರಿ ಇದಕ್ಕೆ ಅವಕಾಶ ನೀಡದರೆ ಹಾಸ್ಟೆಲ್ ಸಿಬ್ಬಂದಿ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕು" ಎಂದಿದ್ದರು.
ಸಿ.ಟಿ.ರವಿ ಅವರ ಈ ಹೇಳಿಕೆಯ ವಿಡಿಯೋ ಶುಕ್ರವಾರ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿದ್ದು, ಹಾಸ್ಟೆಲ್‍ಗಳ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿರುವ ಸಿ.ಟಿ.ರವಿ ವಿರುದ್ಧ ವ್ಯಾಪಕ ಆಕ್ರೋಶವೂ ವ್ಯಕ್ತವಾಗುತ್ತಿದೆ.