ಚಿಕ್ಕಮಗಳೂರು| ಆಲದಗುಡ್ಡೆ ಗ್ರಾಮ ವ್ಯಾಪ್ತಿಯಲ್ಲಿ ಕಾಡಾನೆಗಳು ಪ್ರತ್ಯಕ್ಷ; ಹಲವು ಗ್ರಾಮಗಳ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ
ಚಿಕ್ಕಮಗಳೂರು: ತಾಲೂಕಿನ ಕೆ.ಆರ್.ಪೇಟೆ ವ್ಯಾಪ್ತಿಯಲ್ಲಿ ಬೀಡು ಬಿಟ್ಟಿದ್ದ ಬೀಟಮ್ಮ ಹೆಸರಿನ ಕಾಡಾನೆಗಳ ಗುಂಪು ಗುರುವಾರ ತಾಲೂಕಿನ ಆಲದಗುಡ್ಡೆ ಗ್ರಾಮ ಸಮೀಪದಲ್ಲಿ ಕಂಡು ಬಂದಿದೆ. ಸಾರ್ವಜನಿಕ ಸುರಕ್ಷತಾ ದೃಷ್ಟಿಯಿಂದ ಈ ಗ್ರಾಮದ ಸುತ್ತಮುತ್ತಲ ಪ್ರದೇಶಗಳಲ್ಲಿ ಫೆ.1ರಂದು ಬೆಳಿಗ್ಗೆಯಿಂದ ಫೆ.2ರವರೆಗೆ ನಿಷೇಧಾಜ್ಞೆ ಜಾರಿಗೊಳಿಸಿ ಕಂದಾಯ ಉಪವಿಭಾಗದ ಉಪವಿಭಾಗೀಯ ದಂಡಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಬೀಟಮ್ಮ ಕಾಡಾನೆಗಳ ತಂಡದಲ್ಲಿ 25ಕ್ಕೂ ಹೆಚ್ಚು ಆನೆಗಳಿದ್ದು, ಈ ಗುಂಪಿನಲ್ಲಿ ಮರಿಯಾನೆಗಳು ಇರುತ್ತವೆ. ಸಾರ್ವಜನಿಕ ಸುರಕ್ಷತಾ ದೃಷ್ಟಿಯಿಂದ ಮುಂಜಾಗ್ರತಾ ಕ್ರಮಕೈಗೊಳ್ಳುವ ಹಿನ್ನೆಲೆಯಲ್ಲಿ ತಾಲೂಕಿನ ವಸ್ತಾರೆ, ಆಲದಗುಡ್ಡೆ, ಅರೇನಹಳ್ಳಿ, ಕೆಸವಿನಮನೆ, ವಳಗೇರಹಳ್ಳಿ, ಮಳಲೂರು, ಕದ್ರಿಮಿದ್ರಿ, ದುಮ್ಮಗೆರೆ, ಆಣೂರು, ದಂಬದಹಳ್ಳಿ, ಮೂಗ್ತಿಹಳ್ಳಿ ಗ್ರಾಮಗಳ ವ್ಯಾಪ್ತಿಯಲ್ಲಿ ಈ ಕಾಡಾನೆಯನ್ನು ಅರಣ್ಯಕ್ಕೆ ಹಿಮ್ಮೆಟ್ಟಿಸಲು ಕಾರ್ಯಾಚರಣೆ ನಡೆಸುವ ಹಿನ್ನೆಲೆಯಲ್ಲಿ ಸಾರ್ವಜನಿಕರ ಶಾಂತಿ, ಸುವ್ಯವಸ್ಥೆ ಹಾಗೂ ಸಂರಕ್ಷಣಾ ದೃಷ್ಟಿಯಿಂದ ವಸ್ತಾರೆ, ಆಲದಗುಡ್ಡೆ, ಅರೇನಹಳ್ಳಿ, ಕೆಸವಿನಮನೆ, ವಳಗೇರಹಳ್ಳಿ, ಮಳಲೂರು, ಕದ್ರಿಮಿದ್ರಿ, ದುಮ್ಮಗೆರೆ, ಆಣೂರು, ದಂಬದಹಳ್ಳಿ, ಮೂಗ್ತಿಹಳ್ಳಿ ಗ್ರಾಮಗಳ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಸಾರ್ವಜನಿಕರು ನಿಷೇಧಾಜ್ಞೆ ಹೊರಡಿಸಿರುವ ಅವಧಿಯಲ್ಲಿ ಗುಂಪಾಗಿ ಸೇರಲು ಅವಕಾಶವಿರುವುದಿಲ್ಲ. ಈ ಗ್ರಾಮಗಳ ವ್ಯಾಪ್ತಿಯ ಶಾಲಾ, ಕಾಲೇಜುಗಳಿಗೆ ರಜೆ ನೀಡಿರುವುದರಿಂದ ವಿದ್ಯಾರ್ಥಿಗಳು ಹಾಗೂ ಶಾಲಾ ಸಿಬ್ಬಂದಿ ಓಡಾಡುವುದನ್ನು ನಿಷೇಧಿಸಿದೆ.