ಚಿಕ್ಕಮಗಳೂರು | ಕಾಡಾನೆಗಳ ಹಿಂಡು ಪ್ರತ್ಯಕ್ಷ: ಕೆಲವು ಶಾಲೆಗಳಿಗೆ ರಜೆ ಘೋಷಣೆ

Update: 2024-01-29 07:52 GMT

ಚಿಕ್ಕಮಗಳೂರು: ನಗರದ ಹೊರವಲಯದಲ್ಲಿ ಕಾಡಾನೆ ಹಿಂಡು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಅನೇಕ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.

ಬೇಲೂರು ,ಬಿಕ್ಕೋಡುಗಳಲ್ಲಿ ನಿರಂತರವಾಗಿ ಓಡಾಡಿಕೊಂಡಿದ್ದ ಬೀಟಮ್ಮ ತಂಡದ 25ಕ್ಕೂ ಅಧಿಕ ಆನೆಗಳು ಬೇಲೂರಿನಿಂದ ಕೆ.ಆರ್. ಪೇಟೆಗೆ ಆಗಮಿಸಿ ಸುತ್ತಮುತ್ತಲ ಪ್ರದೇಶಗಳಲ್ಲಿ ಸಂಚರಿಸಿ ಆತಂಕವನ್ನು ಉಂಟು ಮಾಡಿತ್ತು.

ಆನೆಗಳನ್ನು ಓಡಿಸಲು ಅರಣ್ಯ ಇಲಾಖೆ ಹರ ಸಾಹಸ ಪಡುತ್ತಿದ್ದರೂ ಈವರೆಗೂ ಯಶಸ್ವಿಯಾಗಿಲ್ಲ. ದಿನದಿಂದ ದಿನಕ್ಕೆ ತಮ್ಮ ಮಾರ್ಗ ಬದಲಿಸಿ ಜನ ವಸತಿ ಪ್ರದೇಶಗಳತ್ತ ನುಗ್ಗುತ್ತಿದೆ.

ಸೋಮವಾರ ನಗರ ಸಮೀಪದ ಕದ್ರಿಮಿದ್ರಿ ಗ್ರಾಮದ ಸುತ್ತಮುತ್ತಲ ದೇಶದಲ್ಲಿ ಆನೆಗಳ ಹಿಂಡು ಕಾಣಿಸಿಕೊಂಡಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಕದ್ರಿಮಿದ್ರಿ, ರಾಂಪುರ ಕಡೆಗಳಲ್ಲಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.

ಆನೆಗಳ ಹಿಂಡು ಸಂಚರಿಸುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಮುನ್ನೆಚರಿಕೆ ವಹಿಸುವಂತೆ ಅರಣ್ಯ ಇಲಾಖೆ ಸೂಚನೆ ನೀಡಿದ್ದು, ಅಪಾಯಕಾರಿ “ಭೀಮ” ಈ ತಂಡದಲ್ಲಿ ಇರುವುದು ಅರಣ್ಯ ಇಲಾಖೆಗೆ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ. ಸಂಜೆ ಬಳಿಕ ಬೇಲೂರಿನತ್ತ ಆನೆಗಳನ್ನು ಓಡಿಸುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಕಾರ್ಯತಂತ್ರ ಹೆಣೆದಿದೆ.

ಕಾಡಾನೆಗಳ ಹಾವಳಿಯಿಂದಾಗಿ ರೈತರು, ಗ್ರಾಮಸ್ಥರು, ಶಾಲಾ ಮಕ್ಕಳು, ಕಾರ್ಮಿಕರು ಭಯದಿಂದ ಸಂಚಾರ ಮಾಡುವಂತಾಗಿದೆ

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News