ಚಿಕ್ಕಮಗಳೂರು | ವಕೀಲರು, ಪೊಲೀಸರ ನಡುವಿನ ಗಲಾಟೆ ಪ್ರಕರಣ : ನ್ಯಾಯಾಲಯಕ್ಕೆ ಚಾರ್ಜ್‍ಶೀಟ್ ಸಲ್ಲಿಸಿದ ಸಿಐಡಿ

Update: 2024-09-11 18:33 GMT
ಸಾಂದರ್ಭಿಕ ಚಿತ್ರ

ಚಿಕ್ಕಮಗಳೂರು : ನಗರದಲ್ಲಿ ವಕೀಲರು ಹಾಗೂ ಪೊಲೀಸರು ನಡುವೆ ನಡೆದ ಗಲಾಟೆ ಪ್ರಕರಣದ ತನಿಖೆ ಕೈಗೊಂಡಿದ್ದ ಸಿಐಡಿ ಅಧಿಕಾರಿಗಳ ತಂಡ 10 ತಿಂಗಳ ಬಳಿಕ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದೆ.

2023, ನ.30ರಂದು ಚಿಕ್ಕಮಗಳೂರು ನಗರದಲ್ಲಿ ಹೆಲ್ಮೆಟ್ ವಿಚಾರಕ್ಕೆ ವಕೀಲ ಪ್ರೀತಮ್ ಎಂಬವರ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದು, ಇದರಿಂದ ಕೆರಳಿದ ವಕೀಲರು ನಗರ ಠಾಣೆಯ ಎದುರು ಜಮಾಯಿಸಿ ಪ್ರತಿಭಟನೆ ನಡೆಸಿದ್ದರು. ವಕೀಲರ ಪ್ರತಿಭಟನೆ ಹಿನ್ನೆಲೆಯಲ್ಲಿ ಓರ್ವ ಪಿಎಸ್ಸೈ ಸೇರಿದಂತೆ 8 ಮಂದಿ ಪೊಲೀಸರ ಮೇಲೆ ಪ್ರಕರಣ ದಾಖಲಾಗಿತ್ತು.

ಇದನ್ನು ಖಂಡಿಸಿ ಪೊಲೀಸರು ಕೆಲಸ ನಿಲ್ಲಿಸಿ ನಗರದ ಹನುಮಂತಪ್ಪ ವೃತ್ತದಲ್ಲಿ ಹೆದ್ದಾರಿ ತಡೆದು ಧರಣಿ ನಡೆಸಿದ್ದರು. ನಂತರ ವಕೀಲರು ಮತ್ತು ಪೊಲೀಸರ ವಿರುದ್ಧ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯ್ಲಲಿ ದೂರು ಪ್ರತಿದೂರು ದಾಖಲಾಗಿತ್ತು. ನಗರದಲ್ಲಿ ವಕೀಲರು ಮತ್ತು ಪೊಲೀಸರ ನಡುವೆ ನಡೆದ ಈ ಸಂಘರ್ಷ ರಾಜ್ಯಮಟ್ಟದಲ್ಲಿ ಸುದ್ದಿಯಾಗಿತ್ತು. ಈ ಗಲಾಟೆ ತಾರಕಕ್ಕೇರುತ್ತಿದ್ದಂತೆ ಎಚ್ಚೆತ್ತ ರಾಜ್ಯ ಸರಕಾರ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿತ್ತು. ಸಿಐಡಿ ಡಿಐಜಿ ವಂಶಿಕೃಷ್ಣ ನೇತೃತ್ವದ ಸಿಐಡಿ ಅಧಿಕಾರಿಗಳ ತಂಡ 10 ತಿಂಗಳುಗಳ ಕಾಲ ತನಿಖೆ ನಡೆಸಿದ್ದು, ಬುಧವಾರ ಸಿಐಡಿ ಡಿವೈಎಸ್ಪಿ ಉಮೇಶ್ ಅವರು ನ್ಯಾಯಾಲಯಕ್ಕೆ ಎರಡೂ ಪ್ರಕರಣಗಳ ಸಂಬಂಧ ಪ್ರತ್ಯೇಕ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದಾರೆಂದು ತಿಳಿದು ಬಂದಿದೆ.

ವಕೀಲ ಪ್ರೀತಮ್ ವಿರುದ್ಧ ಪೊಲೀಸರು ನೀಡಿದ್ದ ದೂರಿನ ಮೇಲೆ 345 ಪುಟಗಳ ಚಾರ್ಜ್‍ಶೀಟ್ ಸಲ್ಲಿಸಿರುವ ಸಿಐಡಿ ಅಧಿಕಾರಿಗಳು, ಪೊಲೀಸರ ವಿರುದ್ಧ ವಕೀಲ ಪ್ರೀತಮ್ ನೀಡಿದ್ದ ದೂರಿನ ಮೇಲೆ 700 ಪುಟಗಳ ಚಾರ್ಜ್‍ಶೀಟ್ ಸಲ್ಲಿಸಿದ್ದಾರೆಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News