ಚಿಕ್ಕಮಗಳೂರು | ಹೊಟ್ಟೆನೋವಿಗೆ ಬೇಸತ್ತು ನವವಿವಾಹಿತೆ ಆತ್ಮಹತ್ಯೆ
ಚಿಕ್ಕಮಗಳೂರು : ತಿಂಗಳ ಹಿಂದೆ ಮದುವೆಯಾಗಿದ್ದ ನವವಿವಾಹಿತಿ ಹೊಟ್ಟೆನೋವು ತಾಳಲಾರದೆ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ತರೀಕೆರೆ ತಾಲೂಕಿನ ಗುಳ್ಳದಮನೆ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಬಿಂಧು (21) ಆತ್ಮಹತ್ಯೆ ಮಾಡಿಕೊಂಡ ನವವಿವಾಹಿತೆ. ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ಮಂತೇನಹಳ್ಳಿ ಪ್ರಸನ್ನಕುಮಾರ್ ಮತ್ತು ಬಿಂದು ಕಳೆದ ನ.24ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಮದುವೆಯಾಗಿ ಕೇವಲ ಒಂದು ತಿಂಗಳಾಗಿದ್ದು, ಮೂರು ದಿನದ ಹಿಂದೆ ಗಂಡನ ಜತೆ ತವರು ಮನೆಗೆ ಬಂದಿದ್ದಳು. ಮೂರು ದಿನದಿಂದ ದೇವಸ್ಥಾನಗಳಿಗೆ ಸುತ್ತಾಡಿದ್ದ ದಂಪತಿ ಮನೆಯಲ್ಲಿನ ಪೂಜೆಯಲ್ಲೂ ಪಾಲ್ಗೊಂಡಿದ್ದರು ಎನ್ನಲಾಗಿದೆ.
ಶನಿವಾರ ತೀವ್ರ ಹೊಟ್ಟೆನೋವು ತಾಳಲಾರದೆ ಬಿಂಧು ಮನೆಯಲ್ಲೇ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ. ಮೃತ ಬಿಂದುವಿಗೆ ಕಳೆದ ಮೂರ್ನಾಲ್ಕು ವರ್ಷಗಳಿಂದಲೂ ಹೊಟ್ಟೆನೋವು ಸಮಸ್ಯೆ ಇತ್ತು ಎನ್ನಲಾಗುತ್ತಿದೆ. ಈ ಸಂಬಂಧ ಕುಟುಂಬಸ್ಥರು ಆಸ್ಪತ್ರೆಗೂ ತೋರಿಸಿದ್ದರು. ಆದರೆ, ನೋವು ಕಡಿಮೆಯಾಗಿರಲಿಲ್ಲ. ಸ್ಥಳಕ್ಕೆ ತರೀಕೆರೆ ತಹಶೀಲ್ದಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಲಿಂಗದಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.