ಕಾನೂನಾತ್ಮಕ, ರಾಜಕೀಯ ಹೋರಾಟದ ಬಳಿಕ ಧರ್ಮಸ್ಥಳ, ಸವದತ್ತಿಗೆ ಹೋಗಿ ಹರಕೆ ತೀರಿಸುತ್ತೇನೆ : ಸಿ.ಟಿ.ರವಿ

Update: 2024-12-25 16:59 GMT

ಸಿ.ಟಿ.ರವಿ

ಚಿಕ್ಕಮಗಳೂರು : ರಾಜ್ಯ ಸರಕಾರ ತನ್ನ ಮೇಲಿನ ಆರೋಪದ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಿದೆ. ಈ ಪ್ರಕರಣ ಸಂಬಂಧದ ಕಾನೂನಾತ್ಮಕ ಹೋರಾಟ ಮತ್ತು ರಾಜಕೀಯ ಹೋರಾಟ ಮುಗಿದ ಮೇಲೆ ಧರ್ಮಸ್ಥಳಕ್ಕೂ ಹೋಗುತ್ತೇನೆ, ಸವದತ್ತಿ ಯಲ್ಲಮ್ಮ ದೇವಸ್ಥಾನಕ್ಕೂ ಹೋಗುತ್ತೇನೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದ್ದಾರೆ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಧರ್ಮಸ್ಥಳದಲ್ಲಿ ಆಣೆ ಪ್ರಮಾಣಕ್ಕೆ ಆಹ್ವಾನ ನೀಡಿರುವ ಹಿನ್ನೆಲೆಯಲ್ಲಿ ಬುಧವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿ.19ರಂದು ಬೆಳಗಾವಿ ಸುವರ್ಣಸೌಧದಲ್ಲಿ ನಡೆದ ಘಟನೆ ಬಳಿಕ ತನ್ನನ್ನು ವಶಕ್ಕೆ ಪಡೆದ ಬೆಳಗಾವಿ ಪೊಲೀಸರು ಇಡೀ ಜಿಲ್ಲೆಯನ್ನು ಸುತ್ತಿಸಿದ್ದಾರೆ. ಈ ವೇಳೆ ಯಲ್ಲಮ್ಮ ದೇವಿ ದೇವಸ್ಥಾನದ ಮುಂದೆಯೇ ಕರೆದೊಯ್ದಿದ್ದಾರೆ. ಆಗ ಯಲ್ಲಮ್ಮ ದೇವಿಯಲ್ಲಿ ಹರಕೆ ಹೊತ್ತಿದ್ದೇನೆ. ಪ್ರಕರಣದ ಬಗ್ಗೆ ಸದ್ಯ ಕಾನೂನು ಹೋರಾಟ ನಡೆಯುತ್ತಿದ್ದು, ರಾಜಕೀಯ ಹೋರಾಟಕ್ಕೂ ಬಿಜೆಪಿ ಸಿದ್ಧತೆ ನಡೆಸಿದೆ. ಈ ಹೋರಾಟಗಳ ಬಳಿಕ ಧರ್ಮಸ್ಥಳಕ್ಕೂ ಹೋಗುತ್ತೇನೆ, ಸವದತ್ತಿ ಯಲ್ಲಮ್ಮ ದೇವಿ ದೇವಸ್ಥಾನಕ್ಕೂ ಹೋಗಿ ಹರಕೆ ತೀರಿಸುತ್ತೇನೆ ಎಂದರು.

ಬೆಳಗಾವಿ ಜಿಲ್ಲೆ ಖಾನಾಪುರ ಪೊಲೀಸ್ ಠಾಣೆಯ ಪಿಎಸ್ಸೈ ಮಂಜುನಾಥ್ ಅವರನ್ನು ಕರ್ತವ್ಯ ಲೋಪದಡಿಯಲ್ಲಿ ಸರಕಾರ ಅಮಾನತುಗೊಳಿಸಿರುವ ವಿಚಾರ ಮಾಧ್ಯಮಗಳ ಮೂಲಕ ಗೊತ್ತಾಗಿದೆ. ಸರಕಾರ ಪಿಎಸ್ಸೈ ಅವರನ್ನು ಅವರನ್ನು ಅಮಾನತ್ತು ಮಾಡುವುದಲ್ಲ, ಕಮಿಷನರ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಪ್ರಕರಣಕ್ಕೆ ಕುಮ್ಮಕ್ಕು ನೀಡಿದವರನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸಿದರು.

ಪರಿಷತ್ ಸದಸ್ಯರಿಗೆ ಸೆಕ್ಷನ್ 135(ಎ) ಅಡಿಯಲ್ಲಿ ವಿಶೇಷ ಭದ್ರತೆ ಇದೆ. ಎಲ್ಲವನ್ನು ಪೊಲೀಸರು ಉಲ್ಲಂಘನೆ ಮಾಡಿದ್ದಾರೆ. ಪ್ರಕರಣ ದಾಖಲಿಸಿ ನೋಟಿಸ್ ನೀಡದೆ ಕಾನೂನುಬಾಹಿರವಾಗಿ ಬಂಧಿಸಿದ್ದಾರೆ. ತಲೆಗೆ ಪೆಟ್ಟು ಬಿದ್ದಿದ್ದರೂ ಪೊಲೀಸರು ಪ್ರಥಮ ಚಿಕಿತ್ಸೆ ಕೊಡಿಸದೇ, ಉಟವನ್ನೂ ನೀಡದೇ ರಾತ್ರಿ ಇಡಿ ಸುತ್ತಿಸಿ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿದ್ದಾರೆ. ಆದ್ದರಿಂದ ಘಟನೆಗೆ ಕುಮ್ಮಕ್ಕು ನೀಡಿದವರು, ಕಮಿಷನರ್ ಸೇರಿದಂತೆ ತಪ್ಪಿತಸ್ಥರಿಗೆಲ್ಲರಿಗೂ ಶಿಕ್ಷೆಯಾಗಬೇಕು ಎಂದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್.ದೇವರಾಜ್ ಶೆಟ್ಟಿ, ರಾಜ್ಯ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಎಚ್.ಸಿ.ಕಲ್ಮುರಡಪ್ಪ, ಮುಖಂಡರಾದ ಜಸಿಂತ ಅನಿಲ್‍ಕುಮಾರ್, ಪುಷ್ಪರಾಜ್, ಕೆ.ಪಿ.ವೆಂಕಟೇಶ್, ಕನಕರಾಜ್ ಅರಸ್, ಹಿರೇಮಗಳೂರು ಪುಟ್ಟಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.

ಮುಖ್ಯಮಂತ್ರಿಗೆ ಸಚಿವೆ ಮೇಲೆ ಮೋಹ :

ಸಚಿವೆ ಲಕ್ಷ್ಮೀ ಬೆಳಗಾವಿಯಲ್ಲಿ ಅಧಿಕಾರಿಗಳಿಂದ ಹಣ ವಸೂಲಿಗೂ ಪಿಎಗಳನ್ನು ಇಟ್ಟುಕೊಂಡಿದ್ದಾರಂತೆ. ಪಿಎಗಳ ಕಾಟದಿಂದಾಗಿ ದ್ವಿತೀಯ ದರ್ಜೆ ಸಹಾಯಕ ರುದ್ರೇಶ್ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬ ಆರೋಪ ಇದೆ, ಅಂದು ಸಿದ್ದರಾಮಯ್ಯ ಅವರು ಪಟ್ಟು ಹಿಡಿದು ಈಶ್ವರಪ್ಪ ಅವರ ರಾಜೀನಾಮೆ ಕೊಡಿಸಿದರು, ಸಿಎಂ ಸಿದ್ದರಾಮಯ್ಯ ಅವರು ನ್ಯಾಯಯುತವಾಗಿದ್ದರೇ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಂದ ರಾಜೀನಾಮೆ ಪಡೆಯಬೇಕಿತ್ತು, ಆದರೆ ಅವರು ರಾಜೀನಾಮೆ ಪಡೆಯಲಿಲ್ಲ, ಬದಲಿಗೆ ಅವರನ್ನು ಬೆಂಬಲಿಸಿ ಮಾತನಾಡಿದ್ದಾರೆ, ಸಚಿವೆ ಮೇಲೆ ಹಲವರಿಗೆ ಮೋಹವಿದೆ, ಆದರೆ ಸಿಎಂ ಸಿದ್ದರಾಮಯ್ಯನವರಿಗೂ ಸಚಿವೆ ಮೇಲೆ ಮೋಹ ಇರುವುದು ಅವರ ಹೇಳಿಕೆಯಿಂದ ಗೊತ್ತಾಗಿದೆ. ಇಂತಹ ಮೋಹ ಸಿದ್ದರಾಮಯ್ಯ ಅವರಿಗಿರುವುದು ಏಕೆ ಎಂದು ತಿಳಿಯುತ್ತಿಲ್ಲ ಎಂದು ಸಿ.ಟಿ.ರವಿ ವ್ಯಂಗ್ಯವಾಡಿದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News