ಚಿಕ್ಕಮಗಳೂರಿನಲ್ಲಿ ಮುಂದುವರಿದ ಮಳೆಯಬ್ಬರ: ಅಲ್ಲಲ್ಲಿ ರಸ್ತೆ ಕುಸಿತ, ಸೇತುವೆ ಮುಳುಗಡೆ
ಚಿಕ್ಕಮಗಳೂರು, ಜು.16: ಕಾಫಿನಾಡಿನಲ್ಲಿ ಮಳೆಯ ಆರ್ಭಟ ತೀವ್ರಗೊಂಡಿದೆ. ಜಿಲ್ಲೆಯ ಮಲೆನಾಡು ಭಾಗದಲ್ಲಿ ಸೋಮವಾರ ರಾತ್ರಿ ಹಾಗೂ ಮಂಗಳವಾರ ಮುಂಜಾನೆ ಭಾರೀ ಮಳೆಯಾಗಿದ್ದು, ನದಿಗಳು ಅಪಾಯದ ಮಟ್ಟದಲ್ಲಿ ಹರಿಯುತ್ತಿವೆ. ಭಾರೀ ಮಳೆಗೆ ಭದ್ರಾ ನದಿ ತುಂಬಿ ಹರಿದು ಕಳಸ-ಹೊರನಾಡು ಸಂಪರ್ಕ ಸೇತುವೆ ಕಡಿತಗೊಂಡಿದ್ದರೆ, ಶೃಂಗೇರಿಯಲ್ಲಿ ತುಂಗಾ ನದಿಯಲ್ಲಿ ನೆರೆ ಉಂಟಾಗಿ ವಾಹನಗಳ ಪಾರ್ಕಿಂಗ್ ಜಾಗ, ಕಪ್ಪೆ ಶಂಕರ ದೇಗುಲ ಜಲಾವೃತಗೊಂಡಿವೆ. ಇನ್ನು ಜಯಪುರ-ಕೊಪ್ಪ ಸಂಪರ್ಕ ರಸ್ತೆಯಲ್ಲಿ ಭೂ ಕುಸಿತ ಉಂಟಾಗಿದ್ದು, ಮೂಡಿಗೆರೆ-ಬೇಲೂರು ಸಂಪರ್ಕ ರಸ್ತೆ ಕೊಚ್ಚಿ ಹೋಗಿದೆ. ಕೊಟ್ಟಿಗೆಹಾರ ಬಸ್ನಿಲ್ದಾಣದ ಆವರಣ ಗೋಡೆ ಕುಸಿದಿದೆ.
ಭಾರೀ ಮಳೆ ಹಿನ್ನೆಲೆಯಲ್ಲಿ ಜಿಲ್ಲೆಯ ಆರು ತಾಲೂಕುಗಳ ಅಂಗನವಾಡಿ, ಪ್ರಾಥಮಿಕ, ಫ್ರೌಢಶಾಲೆಗಳಿಗೆ ಮಂಗಳವಾರ ರಜೆ ಘೋಷಿಸಲಾಗಿದೆ.
ಮಲೆನಾಡು ಭಾಗದಲ್ಲಿ ಕಳೆದ ರವಿವಾರದಿಂದ ನಿರಂತರ ಮಳೆಯಾಗುತ್ತಿದ್ದು, ಭದ್ರಾ, ತುಂಗಾ, ಹೇಮಾವತಿ ನದಿಗಳು ಅಪಾಯದ ಮಟ್ಟದಲ್ಲಿ ಹರಿಯಲಾರಂಭಿಸಿವೆ. ಕುದುರೆಮುಖ, ಕಳಸ ಭಾಗದಲ್ಲಿ ಭಾರೀ ಮಳೆಯಾಗುತ್ತಿದ್ದು, ಭದ್ರಾ ನದಿ ತುಂಬಿ ಹರಿಯುತ್ತಿದೆ. ಇದರಿಂದ ಕಳಸ-ಹೊರನಾಡು ಸಂಪರ್ಕ ಸೇತುವೆ ನದಿ ನೀರಿನಲ್ಲಿ ಮುಳುಗಡೆಯಾಗಿರುವುದರಿಂದ ಸಂಪರ್ಕ ಕಡಿತಗೊಂಡಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಕಳಸ ಪೊಲೀಸರು ಸೇತುವೆ ಮೇಲೆ ವಾಹನಗಳ ಸಂಚಾರ ನಿಷೇಧಿಸಿ ಬ್ಯಾರಿಕೇಡ್ ಹಾಕಿ ಕಾವಲು ಹಾಕಿದ್ದಾರೆ.
ಇನ್ನು ಶೃಂಗೇರಿ ತಾಲೂಕಿನಾದ್ಯಂತ ಕಳೆದ ಮೂರು ದಿನಗಳಿಂದ ಭಾರೀ ಮಳೆಯಾಗುತ್ತಿರುವುದರಿಂದ ತುಂಗಾ ನದಿಯಲ್ಲಿ ಪ್ರವಾಹ ಉಂಟಾಗಿದೆ. ಪರಿಣಾಮ ಶೃಂಗೇರಿ ಶಾರದಾಂಬ ದೇಗುಲ ಸಮೀಪದಲ್ಲಿರುವ ಕಪ್ಪೆ ಶಂಕರ ದೇಗುಲ ತುಂಗಾ ನದಿ ನೀರಿನಲ್ಲಿ ಮುಳುಗಡೆಯಾಗಿದೆ. ನೆರೆ ನೀರಿನಿಂದಾಗಿ ದೇಗುಲ ಸಮೀಪದ ಗಾಂಧಿ ಮೈದಾನ ನೀರಿನಲ್ಲಿ ಮುಳುಗಡೆಯಾಗಿದ್ದು, ಹಲವು ಅಂಗಡಿ ಮುಂಗಟ್ಟುಗಳಿಗೂ ನೀರು ನುಗ್ಗಿ ಹಾನಿ ಸಂಭವಿಸಿದೆ.
ಗಾಂಧಿ ಮೈದಾನದಲ್ಲಿ ಪಾರ್ಕಿಂಗ್ ಮಾಡಲಾಗಿದ್ದ ವಾಹನಗಳನ್ನು ಪೊಲೀಸರು, ಅಗ್ನಿಶಾಮಕದಳದ ಸಿಬ್ಬಂದಿ ಟ್ರ್ಯಾಕ್ಟರ್ ಮೂಲಕ ಎಳೆದು ಹೊರ ತಂದಿದ್ದಾರೆ. ಶೃಂಗೇರಿಯ ಪ್ಯಾರಲಲ್ ರಸ್ತೆಯಲ್ಲಿ ವಾಹನಗಳ ಸಂಚಾರ ನಿಷೇಧಿಸಿ ಬ್ಯಾರಿಕೇಡ್ ಹಾಕಲಾಗಿದೆ.
ಕೊಪ್ಪ ತಾಲೂಕಿನಲ್ಲಿ ಭಾರೀ ಮಳೆ ಪರಿಣಾಮ ಜಯಪುರ-ಕೊಪ್ಪ ಪಟ್ಟಣ ಸಂಪರ್ಕದ ರಸ್ತೆಯಲ್ಲಿರುವ ನಾರ್ವೆ ಗ್ರಾಮದಲ್ಲಿ ಭೂ ಕುಸಿತ ಸಂಭವಿಸಿದ್ದು, ವಾಹನಗಳ ಸಂಚಾರಕ್ಕೆ ತೊಡಕುಂಟಾಗಿದೆ. ಭೂಕುಸಿತದಿಂದಾಗಿ ರಸ್ತೆ ಬದಿಯಲ್ಲಿ ಭಾರೀ ಕಂದಕ ಉಂಟಾಗಿದ್ದು, ರಸ್ತೆ ಸಂಪೂರ್ಣವಾಗಿ ಕುಸಿಯುವ ಆತಂಕ ಎದುರಾಗಿದೆ. ಪೊಲೀಸರು ಬ್ಯಾರಿಕೇಡ್ ಅಳವಡಿಸಿ ವಾಹನ ಸವಾರರಿಗೆ ಬದಲಿ ಮಾರ್ಗಗಳ ಮೂಲಕ ಕೊಪ್ಪ ಸಂಪರ್ಕಕ್ಕೆ ವ್ಯವಸ್ಥೆ ಕಲ್ಪಿಸಿದ್ದಾರೆ
ಮೂಡಿಗೆರೆ ತಾಲೂಕಿನಲ್ಲೂ ಕಳೆದ ಮೂರು ದಿನಗಳಿಂದ ಮಳೆ ಆರ್ಭಟ ಜೋರಾಗಿದೆ. ಇದರಿಂದ ಕೊಟ್ಟಿಗೆಗಾರ ಬಸ್ ನಿಲ್ದಾಣದ ಆವರಣ ಗೋಡೆ ಕಳೆದ ರಾತ್ರಿ ಕುಸಿದಿದೆ. ಮೂಡಿಗೆರೆ-ಬೇಲೂರು ಸಂಪರ್ಕ ರಸ್ತೆಯಲ್ಲಿರುವ ಬೊಮ್ಮೇನಹಳ್ಳಿ-ಕನ್ನೇಹಳ್ಳಿ ಸಂಪರ್ಕದ ರಸ್ತೆ ಮಳೆ ನೀರಿನಿಂದಾಗಿ ಕೊಚ್ಚಿ ಹೋಗಿದೆ.
ಚಿಕ್ಕಮಗಳೂರು ತಾಲೂಕಿನಲ್ಲೂ ಸೋಮವಾರ ಬೆಳಗ್ಗೆಯಿಂದ ಇಡೀ ದಿನ ಭಾರೀ ಮಳೆಯಾಗಿದ್ದು, ಮಳೆಯಿಂದಾಗಿ ವಾಹನಗಳ ಸಂಚಾರಕ್ಕೆ ತೊಂದರೆಯಾಗಿರುವುದಲ್ಲದೇ ಜನಜೀವನ ಅಸ್ತವ್ಯಸ್ತಗೊಂಡಿದೆ.
ಜಿಲ್ಲೆಯ ಮಲೆನಾಡು ಭಾಗದಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಚಿಕ್ಕಮಗಳೂರು, ಕೊಪ್ಪ, ಎನ್.ಆರ್.ಪುರ, ಕೊಪ್ಪ, ಶೃಂಗೇರಿ, ಮೂಡಿಗೆರೆ ತಾಲೂಕುಗಳ ಎಲ್ಲ ಅಂಗನವಾಡಿಗಳು ಮತ್ತು ಪ್ರಾಥಮಿಕ, ಪ್ರೌಢಶಾಲೆಗಳಿಗೆ ಮಂಗಳವಾರ ರಜೆ ಘೋಷಣೆ ಮಾಡಲಾಗಿದೆ. ಭಾರೀ ಮಳೆ ಹಿನ್ನೆಲೆಯಲ್ಲಿ ಪ್ರಮುಖ ನದಿ ತೀರದ ಗ್ರಾಮಗಳಲ್ಲಿ ಜನರು ಸ್ಥಳಾಂತರ ಆಗುವ ಆತಂಕ ಎದುರಾಗಿದೆ. ಮುಂಜಾಗ್ರತಾ ಕ್ರಮಕ್ಕಾಗಿ ಪೊಲೀಸರು, ಅಗ್ನಿಶಾಮಕದಳ, ಸ್ವಯಂ ಸೇವಕರು, ಎನ್ ಡಿಆರ್ ಎಫ್ ತಂಡಗಳನ್ನು ಜಿಲ್ಲಾಡಳಿತ ಸಜ್ಜುಗೊಳಿಸಿದೆ.