ಮಲೆನಾಡು ಭಾಗದಲ್ಲಿ ಭಾರೀ ಮಳೆ: ಜನಜೀವನ ಅಸ್ತವ್ಯಸ್ತ
ಚಿಕ್ಕಮಗಳೂರು: ಕಾಫಿನಾಡಿನ ಮಲೆನಾಡು ಭಾಗದಲ್ಲಿ ಬುಧವಾರ ಧಾರಾಕಾರ ಮಳೆ ಸುರಿದಿದೆ. ಭಾರೀ ಮಳೆಯಿಂದಾಗಿ ಮಲೆನಾಡು ಭಾಗದಲ್ಲಿ ಮಧ್ಯಾಹ್ನದಿಂದ ಸಂಜೆವರೆಗೆ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಕೆಲವೆಡೆ ಭಾರೀ ಮಳೆಯಿಂದಾಗಿ ರಸ್ತೆ ಮೇಲೆ ನೀರು ನದಿಯಂತೆ ಹರಿದ ಪರಿಣಾಮ ವಾಹನಗಳ ಸಂಚಾರಕ್ಕೆ ಭಾರೀ ಅಡಚಣೆ ಉಂಟಾಗಿತ್ತು.
ಜಿಲ್ಲೆಯ ಮಲೆನಾಡು ಭಾಗದ ಮೂಡಿಗೆರೆ, ಕಳಸ, ಕೊಪ್ಪ, ಶೃಂಗೇರಿ ತಾಲೂಕುಗಳ ವ್ಯಾಪ್ತಿಯಲ್ಲಿ ಬುಧವಾರ ಸಂಜೆ ವೇಳೆ ಧಾರಾಕಾರ ಮಳೆ ಸುರಿದಿದ್ದು, ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ, ಬಣಕಲ್ ಸುತ್ತಮುತ್ತ ಭಾರೀ ಮಳೆ ಸುರಿಯಿತು. ಚಾರ್ಮಾಡಿ ಘಾಟ್ ವ್ಯಾಪ್ತಿಯಲ್ಲಿ ಅತೀ ಹೆಚ್ಚು ಮಳೆ ಸುರಿದ ಪರಿಣಾಮ ಬೆಟ್ಟಗುಡ್ಡಗಳ ಮೇಲಿಂದ ಹರಿದು ಬಂದ ಮಳೆ ನೀರು ಘಾಟಿ ಹೆದ್ದಾರಿ ಮೇಲೆಯೇ ಹರಿದ ಪರಿಣಾಮ ರಸ್ತೆ ನದಿಯಂತೆ ಭಾಸವಾಯಿತು.
ಚಾರ್ಮಾಡಿ ಘಾಟ್‍ನಲ್ಲಿ ಮಾರ್ಗದಲ್ಲಿ ಹೋಗುತ್ತಿದ್ದ ವಾಹನಗಳು ಸಂಚರಿಸಲು ಸಾಧ್ಯವಾಗದೇ ಕೆಲ ಹೊತ್ತು ನಿಂತಲ್ಲೇ ನಿಲ್ಲುವಂತಾಗಿತ್ತು. ಇದರಿಂದ ಕೆಲ ಹೊತ್ತು ಘಾಟಿಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಸಂಜೆ ಬಳಿಕ ಮಳೆ ಕಡಿಮೆಯಾಗಿದ್ದರಿಂದ ಪರಿಸ್ಥಿತಿ ತಹಬದಿಗೆ ಬಂದಿದೆ.
ಇನ್ನು ಕಳಸ ತಾಲೂಕಿನ ಕುದುರೆಮುಖ, ಸಂಸೆ, ಹೊರನಾಡು ಸುತ್ತಮುತ್ತ ಭಾರೀ ಮಳೆಯಾಗಿದ್ದು, ಭಾರೀ ಮಳೆಯಿಂದಾಗಿ ಕಳಸ, ಕುದುರೆಮುಖ, ಎಸ್.ಕೆ.ಬಾರ್ಡರ್ ಸಂಪರ್ಕ ರಸ್ತೆ ಮೇಲೆ ಮಳೆ ನೀರು ಹರಿದ ಪರಿಣಾಮ ವಾಹನ ಸಂಚಾರಕ್ಕೆ ತೊಂದರೆಯಾಗಿತ್ತು. ಇನ್ನು ಶೃಂಗೇರಿ ತಾಲೂಕಿನ ಕೆರೆಕಟ್ಟೆ, ಕಿಗ್ಗಾ, ನೆಮ್ಮಾರು ಸುತ್ತಮುತ್ತ ಭಾರೀ ಮಳೆಯಾಗಿದ್ದರೇ, ಕೊಪ್ಪ ತಾಲೂಕಿನ ಹೇರೂರು, ಬಸ್ರಿಕಟ್ಟೆ, ಜಯಪುರ, ಮೇಗುಂದ, ಕೊಗ್ರೆ, ಲೋಕನಾಥಪುರ ಸುತ್ತಮುತ್ತ ಭಾರೀ ಮಳೆಯಾಗಿದೆ. ಚಿಕ್ಕಮಗಳೂರು, ಕಡೂರು, ತರೀಕೆರೆ ತಾಲೂಕುಗಳ ವ್ಯಾಪ್ತಿಯಲ್ಲೂ ಬುಧವಾರ ಸಾಧಾರಣ ಮಳೆಯಾಗಿದೆ.
ಭಾರೀ ಮಳೆಯಿಂದಾಗಿ ಭದ್ರಾ, ತುಂಗಾ, ಹೇಮಾವತಿ ನದಿಗಳಲ್ಲಿ ನೀರಿನ ಹರಿವು ಹೆಚ್ಚಾಗಿದ್ದು, ಮಲೆನಾಡು ಭಾಗದಲ್ಲಿ ಕಾಫಿ, ಅಡಿಕೆ ತೋಟಗಳಲ್ಲಿ ಕೃಷಿ ಚಟುವಟಿಕೆಗೆ ತೊಂದರೆಯಾಗಿರುವುದಲ್ಲದೇ ಭತ್ತದ ಬೆಳೆ ಉದುರುವ ಭೀತಿ ಎದುರಾಗಿದೆ. ಬಯಲು ಭಾಗದಲ್ಲಿ ಟೊಮಾಟೊ, ಈರುಳ್ಳಿಯಂತಹ ಬೆಳೆಗಳಿಗೂ ಆಗಾಗ್ಗೆ ಸುರಿಯುತ್ತಿರುವ ಮಳೆ ತೊಂದರೆಯನ್ನುಂಟು ಮಾಡಿದೆ