ದೇವಸ್ಥಾನದ ಆಸ್ತಿ ಸರಕಾರದ ಆಸ್ತಿಯಾದರೆ, ವಕ್ಫ್ ಮಂಡಳಿ ಆಸ್ತಿಯೂ ಸರಕಾರದ ಆಸ್ತಿಯಲ್ಲವೇ: ಸಿ.ಟಿ. ರವಿ

Update: 2024-09-14 15:59 GMT

ಸಿ.ಟಿ. ರವಿ

ಚಿಕ್ಕಮಗಳೂರು: ದೇವಸ್ಥಾನದ ಆಸ್ತಿ ಸರಕಾರದ ಆಸ್ತಿಯಾದರೇ, ವಕ್ಫ್ ಮಂಡಳಿ ಆಸ್ತಿಯೂ ಸರಕಾರದ ಆಸ್ತಿಯಲ್ಲವೇ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಪ್ರಶ್ನಿಸಿದರು.

ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಕ್ಫ್ ಆಸ್ತಿಯೆಂದು ಪರಿಗಣಿಸಲು ದಾನ ನೀಡಿರಬೇಕು. ಖರೀದಿ ಮಾಡಿರಬೇಕು, ಇಲ್ಲವೇ ಮಂಜೂರಾಗಿರಬೇಕು. ಆದರೆ ಸಂವಿಧಾನ ಬಾಹಿರ ಅಕ್ರಮಗಳನ್ನು ನಡೆಸಲು ವಕ್ಫ್ ಬೋರ್ಡ್‍ಗೆ ಅವಕಾಶ ನೀಡಬಾರದು. ಈ ಅಕ್ರಮ ತಡೆಯಲು ವಕ್ಫ್ ಮಸೂದೆಗೆ ತಿದ್ದುಪಡಿ ತರಲು ಕೇಂದ್ರ ಮುಂದಾಗಿದೆ. ಕೇಂದ್ರದ ನಿಲುವು ಸರಿಯಾಗಿದೆ ಎಂದರು.

ಪಾಕಿಸ್ತಾನದಲ್ಲಿ, ಅರಬ್ ದೇಶದಲ್ಲಿ ಇಂತಹ ಕಾಯ್ದೆಗಳಿಲ್ಲ ಆದರೆ, ನಮ್ಮ ಭಾರತದಲ್ಲಿ ಈ ತರಹದ ಕಾಯ್ದೆ ಇದೆ. 1995ರಲ್ಲಿ ವಕ್ಫ್ ಕಾಯ್ದೆಯನ್ನು ಸಂವಿಧಾನಕ್ಕೆ ವಿರುದ್ಧವಾಗಿ ತರಲಾಯಿತು. ಈ ಕಾಯ್ದೆಗೆ ಯಾವತ್ತೋ ತಿದ್ದುಪಡಿ ಆಗಬೇಕಿತ್ತು. ಓಟಿನ ಆಸೆಗಾಗಿ ರಾಜಕಾರಣ ಮಾಡಿದ್ದರಿಂದ ಸಂವಿಧಾನಕ್ಕೆ ವಿರುದ್ಧವಾಗಿರುವ ಕಾಯ್ದೆಗೆ ತಿದ್ದುಪಡಿ ಆಗಿಲ್ಲ. ಕೇಂದ್ರ ಸರಕಾರ ಈಗ ತಿದ್ದುಪಡಿ ತರಲು ಮುಂದಾಗಿದೆ ಎಂದ ಅವರು, ಸಂವಿಧಾನ ಬಾಹಿರ ಕಾಯ್ದೆಗೆ ತಿದ್ದುಪಡಿಯಾಗಲೇಬೇಕು. ಹಿಂದೂ ದೇವರಿಗೊಂದು ಕಾಯ್ದೆ, ಮುಸ್ಲಿಮ್ ದೇವರಿಗೊಂದು ಕಾಯ್ದೆಯನ್ನು ಜಾತ್ಯತೀತ ಎನ್ನಲು ಸಾಧ್ಯವೇ? ಸಂವಿಧಾನದ ಆಶಯದಂತೆ ಕಾಯ್ದೆಗೆ ತಿದ್ದುಪಡಿಯಾಗುತ್ತಿದೆ ಎಂದು ತಿಳಿಸಿದರು.

ರಾಜ್ಯ ಸರಕಾರ ಹಾಲಿನ ದರ ಏರಿಕೆ ಬಗ್ಗೆ ಪ್ರಸ್ತಾಪ ಮಾಡಿರುವುದಕ್ಕೆ ಪ್ರತಿಕ್ರಿಯಿಸಿದ ಸಿ.ಟಿ.ರವಿ, ಈ ಸರಕಾರ ಹಾಲಿನ ದರವನ್ನು ಏರಿಕೆ ಮಾಡಿದೆ ಆದರೆ, ರೈತರಿಗೆ ನೀಡುವ ಸಬ್ಸಿಡಿಯನ್ನು ಕಡಿತ ಮಾಡಿದೆ. ರಾಜ್ಯ ಸರಕಾರ ಯಾವ ಬೆಲೆಯನ್ನು ಏರಿಸಿಲ್ಲ ಹೇಳಿ ಎಂದು ಪ್ರಶ್ನಿಸಿದ ಅವರು, ಪಹಣಿ, RTC, ಡೆತ್ ಸಟಿಫೀಕೆಟ್, ಬಾಂಡ್ ಪೇಪರ್, ವಿದ್ಯುತ್ ದರ ಹೆಚ್ಚಳ ಹೀಗೆ ಪ್ರತಿಯೊಂದರ ದರವನ್ನೂ ಹೆಚ್ಚಳ ಮಾಡಿದೆ. ಜತೆಗೆ ಲಂಚದ ದರವೂ ಏರಿಕೆಯಾಗಿದೆ ಎಂದು ವ್ಯಂಗ್ಯವಾಡಿದರು.

ದರ ಏರಿಕೆ ಮಾಡಿ ಬರೆ ಹಾಕಲು ಜನರು ಕಾಂಗ್ರೆಸ್‍ಗೆ ಅಧಿಕಾರ ನೀಡಿಲ್ಲ, ದರ ಏರಿಕೆಯನ್ನು ತಗ್ಗಿಸಿ ಎಂದ ಅವರು, ಗ್ಯಾರೆಂಟಿ ಬಗ್ಗೆ ಜನರನ್ನು ಕೇಳಿ ಆಗಾ ಗೊತ್ತಾಗುತ್ತದೆ. ಜನ ಮಂಗಳಾರತಿ ಮಾಡುತ್ತಾರೆ. ಗೃಹ ಲಕ್ಷ್ಮಿ ಒಂದು ತಿಂಗಳು ಬರುತ್ತೇ ಮತ್ತೊಂದು ತಿಂಗಳು ಬರಲ್ಲ. ಹಳ್ಳಿಗಳಲ್ಲಿ ವಿದ್ಯುತ್ ಇಲ್ಲ. ಬಸ್‍ಗಳು ಎಲ್ಲೆಂದರಲ್ಲಿ ಕೆಟ್ಟು ನಿಲ್ಲುತ್ತಿವೆ. ಅಕ್ಕಿ ದುಡ್ಡು ಬಂದರೇ ಬಂತು, ಬರದಿದ್ದರೇ ಇಲ್ಲ. ಇದು ಗ್ಯಾರೆಂಟಿ ಯೋಜನೆಗಳ ಸ್ಥಿತಿಯಾಗಿದೆ ಎಂದು ಟೀಕಿಸಿದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News