ಅರಣ್ಯ ಒತ್ತುವರಿ ತೆರವು ವಿಚಾರದಲ್ಲಿ ರಾಜಕೀಯ ದುರುದ್ದೇಶದಿಂದ ಸುಳ್ಳು ಹರಡಲಾಗುತ್ತಿದೆ: ಶಾಸಕ ಟಿ.ಡಿ.ರಾಜೇಗೌಡ

Update: 2024-08-26 17:57 GMT

ಚಿಕ್ಕಮಗಳೂರು: ಅರಣ್ಯ ಒತ್ತುವರಿ ತೆರವು, ಕಸ್ತೂರಿ ರಂಗನ್ ವರದಿ ಜಾರಿ ಬಗ್ಗೆ ಕೆಲ ಪಟ್ಟಭದ್ರ ಹಿತಾಸಕ್ತಿಗಳು ರಾಜಕೀಯ ದುರುದ್ದೇಶದಿಂದ ಸುಳ್ಳು ಅಪಪ್ರಚಾರ ಮಾಡುತ್ತಾ ಗೊಂದಲ ಸೃಷ್ಟಿಸುವ ಕೆಲಸ ಮಾಡುತ್ತಿದ್ದಾರೆ. ಜೀವನೋಪಾಯಕ್ಕಾಗಿ ಮಾಡಿರುವ ಯಾವ ಒತ್ತುವರಿಯನ್ನು ಸರಕಾರ ತೆರವು ಮಾಡುವುದಿಲ್ಲ, ಕಸ್ತೂರಿರಂಗನ್ ವರದಿ ಜಾರಿಯನ್ನು ರಾಜ್ಯ ಸರಕಾರ ತಿರಸ್ಕರಿಸಿದ್ದು, ಜನತೆ ಆತಂಕ ಪಡುವ ಅಗತ್ಯವಿಲ್ಲ ಎಂದು ಶೃಂಗೇರಿ ಕ್ಷೇತ್ರದ ಶಾಸಕ ಹಾಗೂ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಟಿ.ಡಿ.ರಾಜೇಗೌಡ ಹೇಳಿದ್ದಾರೆ.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಅರಣ್ಯ ಸಚಿವರು ಅರಣ್ಯ ಒತ್ತುವರಿ ತೆರವಿಗೆ ಆದೇಶ ಹೊರಡಿಸಿದ ನಂತರದಲ್ಲಿ ಕೆಲ ಪಟ್ಟಭದ್ರ ಹಿತಾಸಕ್ತಿಗಳು ರಾಜಕೀಯ ದುರುದ್ದೇಶದಿಂದ ಸುಳ್ಳು ಹರಡುತ್ತಾ ಅಪಪ್ರಚಾರ ಮಾಡುತ್ತಿದ್ದಾರೆ. ಇದರಿಂದ ರೈತರು, ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿಯಾಗಿದೆ. ವಿರೋಧಿಗಳ ಅಪಪ್ರಚಾರದಲ್ಲಿ ಹುರುಳಿಲ್ಲ, ಇದಕ್ಕೆ ಸಾರ್ವಜನಿಕರು, ರೈತರು ಕಿವಿಗೊಡಬಾರದು. ಅರಣ್ಯ ಒತ್ತುವರಿ ತೆರವು ವಿಚಾರದ ಬಗ್ಗೆ ಮಲೆನಾಡು ಭಾಗದ ಶಾಸಕರು, ಮಾಜಿ ಮಂತ್ರಿಗಳ ನಿಯೋಗ ಸಿಎಂ ಹಾಗೂ ಅರಣ್ಯ ಸಚಿವರನ್ನು ಭೇಟಿ ಮಾಡಿ ಈ ಬಗ್ಗೆ ಮನವರಿಕೆ ಮಾಡಿದ ಹಿನ್ನೆಲೆಯಲ್ಲಿ ಕಾನೂನಿನ ಚೌಕಟ್ಟಿನಲ್ಲಿ ಅರ್ಹ ಒತ್ತುವರಿದಾರರಿಗೆ ಹಕ್ಕುಪತ್ರ ನೀಡಲು ಸರಕಾರ ಕ್ರಮವಹಿಸಿದೆ. ಜೀವನೋಪಾಯಕ್ಕಾಗಿ ಮಾಡಿದ ಯಾವ ಒತ್ತುವರಿಯನ್ನೂ ಸರಕಾರ ತೆರವು ಮಾಡುವುದಿಲ್ಲ. 3 ಎಕರೆಯೊಳಗಿನ ಒತ್ತುವರಿಯನ್ನು ತೆರವು ಮಾಡದಂತೆ ಸರಕಾರವೇ ಆದೇಶಿಸಿದೆ. ಸದ್ಯ ನ್ಯಾಯಾಲಯದಲ್ಲಿ ಇತ್ಯರ್ಥವಾದ ಒತ್ತುವರಿ ಪ್ರಕರಣಗಳನ್ನು ಮಾತ್ರ ತೆರವು ಮಾಡಲಾಗುತ್ತಿದೆ ಎಂದರು.

ಮಲೆನಾಡು ಭಾಗದಲ್ಲಿ ಈ ಹಿಂದಿನ ಜಿಲ್ಲಾಧಿಕಾರಿ ಘೋಷಣೆ ಮಾಡಿರುವ ಮೀಸಲು ಅರಣ್ಯದ ಬಗ್ಗೆ ಹಿಂದಿನ ಸರಕಾರದ ಅವಧಿಯಲ್ಲಿ ರಚನೆಯಾದ ಟಾಸ್ಕ್ ಪೋರ್ಸ್ ಸಮಿತಿ ಯಾವುದೇ ವಾಸ್ತವಾಂಶವನ್ನು ಪರಿಶೀಲಿಸದೇ ಜನರ ಸಮಸ್ಯೆಗೆ ಸ್ಪಂದಿಸದೇ ನಿರ್ಲಕ್ಷ್ಯವಹಿಸಿದೆ. ಇದರ ಪರಿಣಾಮ ಅರಣ್ಯ, ಕಂದಾಯ ಭೂಮಿ ಸಮಸ್ಯೆ ಜಿಲ್ಲೆಯ ಜ್ವಲಂತ ಸಮಸ್ಯೆಯಾಗಿ ಉಳಿದುಕೊಂಡಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಹೊಸದಾಗಿ ಟಾಸ್ಕ್ ಪೋರ್ಸ್ ಸಮಿತಿ ರಚಿಸಲಿದ್ದು, ಈ ಸಮಿತಿ ಕಂದಾಯ, ಅರಣ್ಯ ಜಾಗದ ಬಗ್ಗೆ ನೈಜತೆಯನ್ನು ಕೂಲಂಕುಶವಾಗಿ ಪರಿಶೀಲಿಸಿ, ಅರಣ್ಯ ಮತ್ತು ಅರಣ್ಯೇತರ ಒತ್ತುವರಿಯಾಗಿ ವಿಂಗಡಿಸಿ ವಾಸ್ತವಾಂಶದ ವರದಿಯನ್ನು ಸರಕಾರಕ್ಕೆ ಸಲ್ಲಿಸಲಿದೆ ಎಂದ ಅವರು, ಅರಣ್ಯ, ಕಂದಾಯ ಭೂಮಿ ಗಡಿ ಗುರುತಾಗದಿರುವುದರಿಂದ ಮಲೆನಾಡಿನಲ್ಲಿ ಸಾಗುವಳಿ ಭೂಮಿಗೆ ಹಕ್ಕುಪತ್ರ ಸಿಗದಂತಾಗಿದೆ. ಈ ಸಂಬಂಧ ಕಂದಾಯ ಸಚಿವರ ಗಮನ ಸೆಳೆದ ಪರಿಣಾಮ ಸಚಿವರು, 15 ಸರ್ವೇಯರ್‍ಗಳ ಮೂಲಕ ಕಂದಾಯ, ಅರಣ್ಯ ಜಾಗ ಗುರುತಿಸುವ ಕೆಲಸ ಮಾಡುತ್ತಿದ್ದಾರೆ. ಇದು ಪೂರ್ಣಗೊಂಡ ಬಳಿಕ ಸಾಗುವಳಿ ಭೂಮಿಗೆ ಹಕ್ಕುಪತ್ರ ಸಿಗಲಿದ್ದು, ನಿವೇಶನ ಹಂಚಿಕೆ ಹಾಗೂ ಸರಕಾರಿ ಉದ್ದೇಶಗಳಿಗೂ ಸರಕಾರಿ ಜಾಗ ಸಿಗಲಿದೆ ಎಂದರು.

ಅರಣ್ಯ ಹಕ್ಕು ಕಾಯ್ದೆಯಡಿಯಲ್ಲಿ ಅರಣ್ಯವಾಸಿ ಪರಿಶಿಷ್ಟ ಪಂಗಡವರ ಕೃಷಿ ಭೂಮಿಗಳಿಗೆ ಹಕ್ಕುಪತ್ರ ನೀಡಲಾಗುತ್ತಿದ್ದು, ಈ ಸೌಲಭ್ಯವನ್ನು ಇತರ ಪಾರಂಪರಿಕ ಅರಣ್ಯ ವಾಸಿಗಳಿಗೂ ವಿಸ್ತರಿಸಲು ಹಾಗೂ 75ವರ್ಷಗಳ ವಾಸದ ದಾಖಲೆ ಬದಲಿಗೆ 25ವರ್ಷದ ದಾಖಲೆಗಳನ್ನು ಒದಗಿಸಿ ಭೂಮಂಜೂರಾತಿ ನೀಡಲು ಅರಣ್ಯ ಸಚಿವರು ಅಧಿವೇಶನದಲ್ಲಿ ವಿಷಯ ಪ್ರಸ್ತಾಪಿಸಿ ಅನುಮೋದನೆ ಪಡೆದಿದ್ದಾರೆ. ಈ ನಿರ್ಣಯವನ್ನು ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಲಾಗಿದೆ ಎಂದ ಅವರು, ಡೀಮ್ಡ್ ಅರಣ್ಯ ಪ್ರದೇಶ ಎಂದು ಘೋಷಣೆ ಮಾಡಿರುವ ಪ್ರದೇಶದಿಂದ 10ಸಾವಿರ ಹೆಕ್ಟೇರ್ ಪ್ರದೇಶವನ್ನು ಕಂದಾಯ ಇಲಾಖೆ ಹಿಂಪಡೆದಿದ್ದು, ಈ ಜಾಗವನ್ನು ಪರಿಶೀಲಿಸಿ ಡೀಮ್ಡ್ ಅರಣ್ಯ ಸಮಸ್ಯೆಗೂ ಪರಿಹಾರ ನೀಡಲು ಸರಕಾರ ಕ್ರಮವಹಿಸಿದೆ. ಇದರಿಂದ ಡೀಮ್ಡ್ ಅರಣ್ಯ ವ್ಯಾಪ್ತಿಯ ಕೃಷಿ ಭೂಮಿ, ನಿವೇಶನಗಳಿಗೆ ಹಕ್ಕುಪತ್ರ ನೀಡಲು ಸಾಧ್ಯವಾಗಲಿದೆ ಎಂದರು.

ಕಸ್ತೂರಿರಂಗನ್ ವರದಿ ಜಾರಿಯನ್ನು ಹಿಂದಿನ ಸರಕಾರಗಳು ಒಟ್ಟು 5 ಬಾರಿ ವಿರೋಧಿಸಿವೆ. ಹಾಲಿ ರಾಜ್ಯ ಸರಕಾರವೂ ಕಸ್ತೂರಿರಂಗನ್ ವರದಿ ಜಾರಿ ವಿರುದ್ಧ ನಿರ್ಣಯಕೈಗೊಂಡಿದ್ದು, ಯಾವುದೇ ಕಾರಣಕ್ಕೂ ವರದಿ ಜಾರಿಯಾಗಲು ಸರಕಾರ ಬಿಡುವುದಿಲ್ಲ. ವರದಿ ಜಾರಿ ಮಾಡುವ ಪ್ರಯತ್ನವನ್ನು ಕೇಂದ್ರ ಸರಕಾರ ಮಾಡುತ್ತಿದೆ ಎಂದು ಆರೋಪಿಸಿದ ಅವರು, ಸೆಕ್ಷನ್ 17 ಮೀಸಲು ಅರಣ್ಯಕ್ಕೆ ಸಂಬಂಧಿಸಿದಂತೆ ಹಿಂದೆ ಓರ್ವ ಎಫ್‍ಎಸ್‍ಒ ಅಧಿಕಾರಿಯನ್ನು ನೇಮಿಸಲಾಗಿತ್ತು. ಕಾಂಗ್ರೆಸ್ ಸರಕಾರ ಮತ್ತೋರ್ವ ಎಫ್‍ಎಸ್‍ಒ ಅಧಿಕಾರಿಯನ್ನು ನೇಮಿಸಿ ತ್ವರಿತವಾಗಿ ಸಮಸ್ಯೆ ಪರಿಹಾರ ಒದಗಿಸಲು ಮುಂದಾಗಿದೆ ಎಂದರು.

ಸದ್ಯ ಜಿಲ್ಲಾದ್ಯಂತ ಒತ್ತುವರಿ ತೆರವನ್ನು ಸ್ಥಗಿತಗೊಳಿಸಲಾಗಿದ್ದು, ನ್ಯಾಯಾಲಯಗಳಲ್ಲಿ ಇತ್ಯರ್ಥವಾದ ಪ್ರಕರಣಗಳು ಹಾಗೂ ಭಾರೀ ಪ್ರಮಾಣದ ಅರಣ್ಯ ಒತ್ತುವರಿಯನ್ನು ಮಾತ್ರ ತೆರವು ಮಾಡಲಾಗುತ್ತಿದೆ. ಸಣ್ಣ ರೈತರ ಒತ್ತುವರಿಯನ್ನು ತೆರವು ಮಾಡದಂತೆ ಸರಕಾರವೇ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದೆ. ಅರಣ್ಯ ತೆರವು ಸಂದರ್ಭ ಬೆಳೆ ಕಟಾವಿಗೆ ಕಾಲಾವಕಾಶ ನೀಡಬೇಕೆಂದು ಸಚಿವರಿಗೆ ಮನವಿ ಮಾಡಿದ್ದು, ಅದಕ್ಕೆ ಸಚಿವರು ಸ್ಪಂದಿಸಿದ್ದಾರೆ ಎಂದ ಅವರು, ಇತ್ಯರ್ಥವಾಗದ ಯಾವ ಒತ್ತುವರಿಯನ್ನೂ ಅರಣ್ಯ ಇಲಾಖೆ ತೆರವು ಮಾಡುವುದಿಲ್ಲ. ಈ ಬಗ್ಗೆ ಆತಂಕ ಬೇಡ, ಸುಳ್ಳುಗಳಿಗೆ ಕಿವಿಗೊಡಬಾರದು ಎಂದು ಅವರು ಮನವಿ ಮಾಡಿದರು.

ಜಿಲ್ಲಾ ಕಾಂಗ್ರೆಸ್ ವಕ್ತಾರ ರೂಬೆನ್ ಮೋಸೆಸ್ ಸುದ್ದಿಗೋಷ್ಠಿಯಲ್ಲಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News