ಮೂಡಿಗೆರೆ: ದಾರಿ ತಪ್ಪಿ ಅರಣ್ಯದೊಳಗೆ ಪ್ರವೇಶಿಸಿ ನಾಪತ್ತೆಯಾಗಿದ್ದ ವ್ಯಕ್ತಿ 2 ದಿನಗಳ ಕಾರ್ಯಾಚರಣೆ ಬಳಿಕ ಪತ್ತೆ

Update: 2023-07-29 18:20 GMT

ಚಿಕ್ಕಮಗಳೂರು: ಅರಣ್ಯದಲ್ಲಿ ದಾರಿ ತಪ್ಪಿ ಕಳೆದ ಎರಡು ದಿನಗಳಿಂದ ನಾಪತ್ತೆಯಾಗಿದ್ದ ವ್ಯಕ್ತಿಯೊಬ್ಬರನ್ನು ಅರಣ್ಯ ಇಲಾಖೆ ಅಧಿಕಾರಿ, ಸಿಬ್ಬಂದಿ ಹಾಗೂ ಸ್ಥಳೀಯರು ಎರಡು ದಿನಗಳ ಕಾಲ ಅರಣ್ಯದಲ್ಲಿ ಕಾರ್ಯಾಚರಣೆ ನಡೆಸಿ ಪತ್ತೆ ಹಚ್ಚಿರುವ ಘಟನೆ ಮೂಡಿಗೆರೆ ತಾಲೂಕಿನ ಕುಂದೂರು ಗ್ರಾಮದಲ್ಲಿ ವರದಿಯಾಗಿದೆ.

ಮೂಡಿಗೆರೆ ಪಟ್ಟಣದ ಬಿಳಗುಳ ಗ್ರಾಮದ ನಿವಾಸಿ ಚಂದ್ರು ನಾಪತ್ತೆಯಾಗಿದ್ದ ವ್ಯಕ್ತಿಯಾಗಿದ್ದು, ಶನಿವಾರ ಅರಣ್ಯ ಇಲಾಖೆ ಸಿಬ್ಬಂದಿ ಸಾರಗೋಡು ಅರಣ್ಯದಲ್ಲಿ ನಾಪತ್ತೆಯಾಗಿದ್ದ ಚಂದ್ರು ಅವರನ್ನು ಪತ್ತೆ ಹಚ್ಚಿ ಸುರಕ್ಷಿತವಾಗಿ ಕರೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಚಂದ್ರು ಕಳೆದ ಶುಕ್ರವಾರ ಮೂಡಿಗೆರೆಯಿಂದ ಕುಂದೂರು ಗ್ರಾಮದ ಹರೀಶ್‍ಗೌಡ ಎಂಬವರ ತೋಟಕ್ಕೆ ಕೆಲಕ್ಕೆ ಹೋಗಿದ್ದರು. ಕೆಲಸ ಬಿಟ್ಟ ಬಳಿಕ ಸಾರಗೋಡು ಅರಣ್ಯ ವ್ಯಾಪ್ತಿಯ ದಾರಿಯಲ್ಲಿ ಬರುವ ವೇಳೆ ದಾರಿ ತಪ್ಪಿ ನಾಪತ್ತೆಯಾಗಿದ್ದರು. ರಾತ್ರಿ ಕಳೆದರೂ ಚಂದ್ರು ಮನೆಗೆ ಬಾರದಿರುವುದನ್ನು ಕಂಡ ಚಂದ್ರು ಮನೆಯವರು ಗಾಬರಿಗೊಂಡಿದ್ದರು.

ಚಂದ್ರು ದಾರಿ ತಪ್ಪಿ ಅರಣ್ಯದಲ್ಲಿ ನಾಪತ್ತೆಯಾಗಿರುವ ಶಂಕೆಯನ್ನು ಮನೆಯವರು ವ್ಯಕ್ತಪಡಿಸಿದ್ದು, ಈ ನಿಟ್ಟಿನಲ್ಲಿ ಮೂಡಿಗೆರೆ ಅರಣ್ಯ ಇಲಾಖೆಯ ಎಸಿಎಫ್ ಬಿ.ಎಲ್.ಸ್ವಾಮಿ ನೇತೃತ್ವದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಆನೆ ಕಾರ್ಯಪಡೆಯ ಉಪ ವಲಯ ಅರಣ್ಯಾಧಿಕಾರಿ ವಿಜಯ್‍ಕುಮಾರ್ ನೇತೃತ್ವದ ತಂಡ ಸ್ಥಳೀಯ ಗ್ರಾಮಸ್ಥರೊಂದಿಗೆ ಸಾರಗೋಡು, ಕುಂದೂರು ಅರಣ್ಯದೊಳಗೆ ಎರಡು ದಿನಗಳ ಕಾಲ ಹುಡುಕಾಟ ಆರಂಭಿಸಿದ್ದರು.

ಈ ಭಾಗದಲ್ಲಿ ಕಾಡಾನೆಗಳ ಹಾವಳಿ ಹೆಚ್ಚಿದ್ದು, ಇಲ್ಲಿನ ಕೆಂಜಿಗೆ ಗ್ರಾಮದಲ್ಲಿ ಕೆಲ ತಿಂಗಳ ಹಿಂದೆ ಕಟ್ಟಿಗೆ ತರಲು ಹೋಗಿದ್ದ ವ್ಯಕ್ತಿಯೊಬ್ಬರನ್ನು ಕಾಡಾನೆ ತುಳಿದು ಕೊಂದು ಹಾಕಿತ್ತು. ಈ ಹಿನ್ನೆಲೆಯಲ್ಲಿ ಚಂದ್ರು ಮನೆಯವರು ತೀವ್ರ ಆತಂಕ ವ್ಯಕ್ತಪಡಿಸಿದ್ದರಿಂದ ಅರಣ್ಯ ಇಲಾಖೆ ಅಧಿಕಾರಿ, ಸಿಬ್ಬಂದಿ ಚಂದ್ರು ಪತ್ತೆಗೆ ಎರಡು ದಿನಗಳಿಂದ ನಿತಂತರವಾಗಿ ಕಾರ್ಯಾಚರಣೆ ನಡೆಸಿದ್ದರು. ಶನಿವಾರ ಮಧ್ಯಾಹ್ನ ಸಾರಗೋಡು ಕಾಡಿನಲ್ಲಿ ಕಾರ್ಯಾಚರಣೆ ವೇಳೆ ಅರಣ್ಯ ಇಲಾಖೆ ಅಧಿಕಾರಿ, ಸಿಬ್ಬಂದಿಗೆ ನಾಪತ್ತೆಯಾಗಿದ್ದ ಚಂದ್ರು ಪತ್ತೆಯಾಗಿದ್ದು, ಆತನನ್ನು ಸುರಕ್ಷಿತವಾಗಿ ಕರೆ ತರಲಾಗಿದೆ.

ಶುಕ್ರವಾರ ಇಡೀ ದಿನ ಕಾಡಿನಲ್ಲಿ ದಾರಿಗಾಗಿ ಹುಡುಕಾಡಿದ್ದ ಚಂದ್ರು ಅವರಿಗೆ ದಾರಿ ತಿಳಿಯದೇ ಶುಕ್ರವಾರ ರಾತ್ರಿಯನ್ನು ಕಾಡಿನಲ್ಲೇ ಕಳೆದಿದ್ದರು. ಚಂದ್ರು ಅವರಿಗೆ ವಿಪರೀತವಾಗಿ ಜಿಗಣೆ ಕಡಿದಿದ್ದು, ಕೈಕಾಲಿಗೆ ಮುಳ್ಳುಗಳು ಚುಚ್ಚಿ ಗಾಯಗಳಾಗಿವೆ. ಪತ್ತೆಯಾದ ವೇಳೆ ಅವರು ನಿತ್ರಾಣ ಸ್ಥಿತಿಯಲ್ಲಿದ್ದರು. ಸೂಕ್ತ ಚಿಕಿತ್ಸೆ ಬಳಿಕ ಅವರು ಚೇತರಿಸಿಕೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News