ಮಲೆನಾಡು-ಕರಾವಳಿ ಜಿಲ್ಲೆಗಳಲ್ಲಿ 300 ಕೋಟಿ.ರೂ.ವೆಚ್ಚದಲ್ಲಿ ಗುಡ್ಡ ಕುಸಿತ ತಡೆಗೆ ಯೋಜನೆ : ಸಚಿವ ಕೃಷ್ಣ ಭೈರೇಗೌಡ

Update: 2024-08-05 15:01 GMT

ಚಿಕ್ಕಮಗಳೂರು: ಮಲೆನಾಡು, ಕರಾವಳಿ ಜಿಲ್ಲೆಗಳಲ್ಲಿ ಗುಡ್ಡ ಕುಸಿತ ಸಂಭವಿಸುವ ಪ್ರದೇಶಗಳನ್ನು ಗುರುತಿಸಲಾಗಿದ್ದು, ಮಲೆನಾಡು-ಕರಾವಳಿ ಜಿಲ್ಲೆಗಳಲ್ಲಿ ಒಟ್ಟು 300 ಕೋಟಿ. ರೂ. ವೆಚ್ಚದಲ್ಲಿ ಗುಡ್ಡ ಕುಸಿತ ತಡೆಯುವ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಎಂದು ಕಂದಾಯ ಇಲಾಖೆ ಸಚಿವ ಕೃಷ್ಣ ಭೈರೇಗೌಡ ಹೇಳಿದ್ದಾರೆ.

ತಾಲೂಕಿನ ಬಾಬಾಬುಡನ್ ಗಿರಿ ರಸ್ತೆಯಲ್ಲಿರುವ ಕವಿಕಲ್‍ಗಂಡಿಯಲ್ಲಿ ಭಾರಿ ಮಳೆಯಿಂದ ರಸ್ತೆ ಕುಸಿದ ಸ್ಥಳಕ್ಕೆ ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಮಳೆಯನ್ನು ತಡೆದುಕೊಳ್ಳುವ ಶಕ್ತಿ ಮಲೆನಾಡಿಗೆ ಸಾವಿರಾರು ವರ್ಷಗಳಿಂದ ಇದೆ. ಆದರೆ ಹವಮಾನ ಬದಲಾವಣೆಯಿಂದಾಗಿ ಕಡಿಮೆ ಅವಧಿಯಲ್ಲಿ ಹೆಚ್ಚು ಮಳೆಯಾಗುತ್ತಿದೆ. ಜೂನ್ ತಿಂಗಳಲ್ಲಿ ಜಿಲ್ಲೆಯಲ್ಲಿ ಮಳೆ ಕೊರತೆ ಇತ್ತು, ಜು.10ರ ನಂತರ ಎರಡು ತಿಂಗಳಲ್ಲಿ ಆಗಬೇಕಿದ್ದ ಮಳೆ ಮಳೆ ಕೇವಲ 20 ದಿನಗಳಲ್ಲಿ ಸುರಿದಿದೆ. ಇದರಿಂದಾಗಿ ಅಲ್ಲಲ್ಲಿ ಗುಡ್ಡಗಳು ಕುಸಿದಿವೆ. ಹವಮಾನ ಬದಲಾವಣೆ ಹಿನ್ನೆಲೆಯಲ್ಲಿ ಪ್ರಕೃತಿ ವಿಕೋಪಗಳು ಆಗುತ್ತಿವೆ. ಗುಡ್ಡ ಕುಸಿತ ತಡೆಯಲು ಈ ಬಾರಿ 100 ಕೋಟಿ. ರೂ. ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲಾಗುವುದು. ಮುಂದಿನ ಬಾರಿ 200 ಕೋಟಿ. ರೂ. ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲಾಗುವುದು. ಎಲ್ಲೆಲ್ಲಿ ಗುಡ್ಡ ಕುಸಿತ ಆಗಲಿದೆ ಎಂಬ ಬಗ್ಗೆ ತಜ್ಞರು ಸರಕಾರಕ್ಕೆ ವರದಿ ನೀಡಿದ್ದಾರೆ ಎಂದರು.

ರಾಜ್ಯದಲ್ಲಿ ಜೂನ್ ಮತ್ತು ಜುಲೈ ತಿಂಗಳಲ್ಲಿ ಶೇ.32ರಷ್ಟು ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದು, 62 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಈ ಬಾರಿ ವಾಡಿಕೆ ಮಳೆಗಿಂತ ಶೇ.32ರಷ್ಟು ಹೆಚ್ಚು ಮಳೆಯಾಗಿದೆ. ಜೂನ್ ತಿಂಗಳಲ್ಲಿ ಮಲೆನಾಡು, ಕಾರವಳಿಯಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದ್ದರೆ, ಜುಲೈನಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಈಗಲೂ ರಾಜ್ಯ ದ ಕೆಲವು ಜಿಲ್ಲೆಗಳಲ್ಲಿ ಮಳೆ ಕೊರತೆ ಇದೆ. ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಕೊಪ್ಪಳ, ವಿಜಯಪುರ ಜಿಲ್ಲೆಗಳಲ್ಲಿ ಮಳೆ ಕೊರತೆ ಇದ್ದರೆ, ಮಲೆನಾಡು, ಕಾರವಳಿಯಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಭಾರೀ ಮಳೆ ಹಾಗೂ ಗಾಳಿಯಿಂದಾಗಿ ಮಲೆನಾಡು ಪ್ರದೇಶದಲ್ಲಿ ಸಾಕಷ್ಟು ಅನಾಹುತ ಸಂಭವಿಸಿದೆ ಎಂದರು.

ಚಿಕ್ಕಮಗಳೂರು ಜಿಲ್ಲೆಯಲ್ಲಿ ಭಾರೀ ಮಳೆಯಿಂದಾಗಿ ಹಾನಿಯಾಗಿರುವ ರಸ್ತೆಗಳ ಶೀಘ್ರ ದುರಸ್ತಿ, ಮರುನಿರ್ಮಾಣಕ್ಕೆ ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದೇನೆ. ರಸ್ತೆಗಳ ಹಾನಿಗೆ ತುರ್ತಾಗಿ ಕೆಲಸ ಮಾಡಬೇಕು. ಸಂಪೂರ್ಣವಾಗಿ ಹಾಳಾದ ರಸ್ತೆಗಳಿಗೆ ಜಲ್ಲಿ ಹಾಕಿ ದುರಸ್ತಿ ಮಾಡಲು ಸೂಚನೆ ನೀಡಲಾಗಿದೆ. ರಸ್ತೆ ಕುಸಿದಿರುವಲ್ಲಿ ಮರು ನಿರ್ಮಾಣಕ್ಕೆ ಸೂಚನೆ ನೀಡಲಾಗಿದೆ ಎಂದರು.

ರಸ್ತೆ ದುರಸ್ತಿ, ಮರು ನಿರ್ಮಾಣಕ್ಕೆ ಅನುದಾನ ನೀಡಲು ಸಿಎಂ ಬಳಿ ಚರ್ಚಿಸಿದ್ದೇನೆ, ಶಾಸಕರು ಮತ್ತು ಉಸ್ತುವಾರಿ ಸಚಿವರೂ ಚರ್ಚಿಸಿದ್ದಾರೆ. ಸಿಎಂ ಅನುದಾನ ನೀಡಲು ಒಪ್ಪಿಗೆ ನೀಡಿದ್ದಾರೆ. ಹಾನಿ ಬಗ್ಗೆ ವರದಿ ನೀಡಲು ಜಿಲ್ಲಾಧಿಕಾರಿಗೆ ಸೂಚಿಸಿದ್ದು, ಈ ಸಂಬಂಧ ವಾರದೊಳಗೆ ಸರಕಾರ ಅಗತ್ಯ ನೆರವು ನೀಡಲಿದೆ ಎಂದರು.

ಅರಣ್ಯ ಪ್ರದೇಶವನ್ನು ಲ್ಯಾಂಡ್ ಕನ್‍ವರ್ಷನ್ ಮಾಡುತ್ತಿರುವ ಪ್ರಕರಣಗಳು ಕಂಡು ಬಂದಿದ್ದು, ಅರಣ್ಯವನ್ನು ಭೂ ಮಂಜೂರಾತಿ ಮಾಡಿದರೇ ಅಂತಹ ಅಧಿಕಾರಿಗಳಿಗೆ ಉಗ್ರ ಶಿಕ್ಷೆ ವಿಧಿಸಲಾಗುವುದು. ಸರಕಾರ ಇದನ್ನು ಸಹಿಸುವುದಿಲ್ಲ. ಪಶ್ಚಿಮ ಘಟ್ಟ ಪ್ರದೇಶದಲ್ಲಿನ ಒತ್ತುವರಿ ತಡೆಯಲು ಅರಣ್ಯ ಇಲಾಖೆಗೆ ಸಹಕಾರ ನೀಡಲಾಗುವುದು. ಮಲೆನಾಡಿನಲ್ಲಿ ನದಿ ದಡದಲ್ಲಿರುವ ಮತ್ತು ಗುಡ್ಡದ ಮೇಲಿರುವ ವಸತಿ ಪ್ರದೇಶದಲ್ಲಿ ವಾಸಿಸುವ ಜನರನ್ನು ಬೇರೆ ಪ್ರದೇಶಕ್ಕೆ ವರ್ಗಾವಣೆ ಮಾಡಬೇಕಿದೆ. ಇದಕ್ಕೆ ಸರಕಾರಿ ಜಾಗ ಸಿಗುತ್ತಿಲ್ಲ. ಇದಕ್ಕೆ ಮೊದಲ ಆದ್ಯತೆ ನೀಡಿ ಜಾಗ ಗುರುತಿಸುವಂತೆ ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದೇನೆ. ಸರಕಾರಿ ಜಾಗ ಸಿಗದಿದ್ದಲ್ಲಿ ಪರ್ಯಾಯ ಜಾಗ ಕೊಡಿಸುವ ಕೆಲಸ ಮಾಡುತ್ತೇವೆ ಎಂದರು.

ಶೀಘ್ರವೇ  ಗ್ರಾಮ ಲೆಕ್ಕಾಧಿಕಾರಿ/ಸರ್ವೇಯರ್‌ಗಳ ನೇಮಕ : ಕಂದಾಯ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇದ್ದು, ಸದ್ಯ 20 ತಹಶೀಲ್ದಾರ್‌ಗಳ ಪೋಸ್ಟಿಂಗ್‍ಗೆ ಸಿದ್ಧತೆ ನಡೆಯುತ್ತಿದೆ. ಚಿಕ್ಕಮಗಳೂರಿಗೆ ಆದ್ಯತೆ ನೀಡಲಾಗುವುದು. ಇಲ್ಲಿ ಗ್ರಾಮ ಲೆಕ್ಕಾಧಿಕಾರಿಗಳು ಖಾಲಿ ಇದ್ದು, ಅಧಿಕಾರಿಗಳು ಜನರ ಕೈ ಸಿಗುತ್ತಿಲ್ಲ ಎಂಬ ದೂರು ಇದೆ. ಶೀಘ್ರ ಒಂದು ಸಾವಿರ ಗ್ರಾಮ ಲೆಕ್ಕಾಧಿಕಾರಿಗಳ ನೇಮಕ ಮಾಡಿಕೊಳ್ಳಲಾಗುವುದು. ಅರಣ್ಯ-ಕಂದಾಯ ಇಲಾಖೆಯಿಂದ ಜಂಟಿ ಸರ್ವೆ ಕಾರ್ಯ ನಡೆಯುತ್ತಿದೆ. ಸರ್ವೆ ವೇಗವಾಗಿ ನಡೆಯಲು ಸರ್ವೆಯರ್ ಅಗತ್ಯವಿದ್ದು, ಶೀಘ್ರ 750 ಸರ್ವೇಯರ್ ನೇಮಕಾತಿ ನಡೆಯಲಿದೆ. 1191 ಪರವಾನಿಗೆ ಇರುವ ಸರ್ವೇಯರ್‌ಗಳ ನೇಮಕಾತಿಯನ್ನು ಈಗಾಗಲೇ ಮಾಡಲಾಗಿದೆ. 34 ಎಡಿಎಲ್‍ಅರ್ ಖಾಲಿ ಹುದ್ದೆಗಳನ್ನು ಭರ್ತಿಗೂ ಕ್ರಮವಹಿಸಲಾಗಿದೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News