ಮೂಡಿಗೆರೆ ಪಪಂ ಅಧಿಕಾರ ಕಾಂಗ್ರೆಸ್ ತೆಕ್ಕೆಗೆ : ಬಹುಮತವಿದ್ದರೂ ಅಧಿಕಾರ ದಕ್ಕಿಸಿಕೊಳ್ಳುವಲ್ಲಿ ಯಡವಿದ ಬಿಜೆಪಿ
ಮೂಡಿಗೆರೆ: ಭಾರೀ ಕುತೂಹಲ ಮೂಡಿಸಿದ್ದ ಮೂಡಿಗೆರೆ ಪಟ್ಟಣ ಪಂಚಾಯತ್ 2ನೇ ಅವಧಿಯ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಬುಧವಾರ ಚುನಾವಣೆ ನಡೆದಿದ್ದು, ಬಿಜೆಪಿಗೆ ಸ್ಪಷ್ಟ ಬಹುಮತವಿದ್ದರೂ ಅಧಿಕಾರ ಹಿಡಿಯುವಲ್ಲಿ ವಿಫಲವಾಗಿದ್ದರೆ, ಶಾಸಕಿ ನಯನಾ ಮೋಟಮ್ಮ ತಂತ್ರಗಾರಿಕೆಯಿಂದಾಗಿ ಪಪಂ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನವನ್ನು ಕಾಂಗ್ರೆಸ್ ತೆಕ್ಕೆಗೆ ಪಡೆದುಕೊಂಡಿದೆ.
ಮೂಡಿಗೆರೆ ಪಪಂ ಅಧಿಕಾರ ಹಿಡಿಯಲು 11 ಸದಸ್ಯರ ಪೈಕಿ 6 ಬಿಜೆಪಿ ಸದಸ್ಯರಿದ್ದು, ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಸೇರಿ 7 ಮತವಿತ್ತು. ಕಾಂಗ್ರೆಸ್ 4 ಸದಸ್ಯರಿದ್ದು, ಶಾಸಕಿ ನಯನಾ ಮೋಟಮ್ಮ ಸೇರಿ 5 ಮತವಿತ್ತು. 1 ಜೆಡಿಎಸ್ ಮತ ಇದ್ದು, ಬಿಜೆಪಿ ಜೆಡಿಎಸ್ ಮೈತ್ರಿಕೂಟದಿಂದಾಗಿ ಬಿಜೆಪಿಗೆ ಮತ್ತೊಂದು ಮತ ಸಿಗುವ ಪರಿಣಾಮ ಬಿಜೆಪಿ ಅಧಿಕಾರ ಹಿಡಿಯಲು ಸ್ಪಷ್ಟ ಬಹುಮತವಿತ್ತು.
ಮೂಡಿಗೆರೆ ಪ.ಪಂ. 2ನೇ ಅವಧಿಯ ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ, ಉಪಾಧ್ಯಕ್ಷ ಸ್ಥಾನಕ್ಕೆ ಎಸ್ಸಿ ಮೀಸಲಾತಿ ಘೋಷಣೆಯಾಗಿತ್ತು. ಉಪಾಧ್ಯಕ್ಷ ಸ್ಥಾನಕ್ಕೆ ಪರಿಶಿಷ್ಟ ಜಾತಿಯಿಂದ ಕಾಂಗ್ರೆಸ್‍ನ ಸದಸ್ಯ ಎಚ್.ಪಿ.ರಮೇಶ್ ಒಬ್ಬರೇ ಇದ್ದರು. ಹಾಗಾಗಿ ಉಪಾಧ್ಯಕ್ಷ ಸ್ಥಾನ ಕಾಂಗ್ರೆಸ್‍ಗೆ ಮೀಸಲಾಗಿತ್ತು. ಇನ್ನು ಅಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ ನಡೆದಿತ್ತು. ಬಿಜೆಪಿಗೆ ಸ್ಪಷ್ಟ ಬಹುಮತವಿದ್ದರೂ ಕಾಂಗ್ರೆಸ್ ಕೇವಲ 4 ಸದಸ್ಯರನ್ನಿಟ್ಟುಕೊಂಡು ರಾಜಕೀಯ ತಂತ್ರಗಾರಿಕೆ ನಡೆಸುವ ಮೂಲಕ ಬಿಜೆಪಿಗೆ ದಕ್ಕುವ ಅಧಿಕಾರವನ್ನು ಕಿತ್ತುಕೊಂಡು ಪ.ಪಂ. ಅಧಿಕಾರವನ್ನು ಕಾಂಗ್ರೆಸ್ ಪಡೆದುಕೊಳ್ಳುವಲ್ಲಿ ಯಶಸ್ವಿ ಕಂಡಿದೆ. ವಿಧಾನಪರಿಷತ್ ಉಪಸಭಾಪತಿ ಎಂ.ಕೆ.ಪ್ರಾಣೇಶ್, ಸದಸ್ಯರಾದ ಎಸ್.ಎಲ್.ಭೋಜೇಗೌಡ, ಸಿ.ಟಿ.ರವಿ ಅವರು ಚಿಕ್ಕಮಗಳೂರು ನಗರಸಭೆಗೆ ಮತ ಚಲಾಯಿಸಿರುವ ಕಾರಣ ಮೂಡಿಗೆರೆ ಪಪಂ ಚುನಾವಣೆಯಲ್ಲಿ ಅವರಿಗೆ ಮತ ಚಲಾಯಿಸುವ ಅವಕಾಶವಿರಲಿಲ್ಲ.
ಪಪಂ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಮೀಸಲಾತಿ ಘೋಷಣೆ ಬಳಿಕ ಪ.ಪಂ. ಅಧಿಕಾರ ಗಿಟ್ಟಿಸಿಕೊಳ್ಳಬೇಕೆಂದು ಶಾಸಕಿ ನಯನಾ ಮೋಟಮ್ಮ ಅವರು ಪ.ಪಂ. ಹಿರಿಯ ಸದಸ್ಯರೊಂದಿಗೆ ಗುಪ್ತವಾಗಿ ಕಾರ್ಯತಂತ್ರ ರೂಪಿಸಿದ್ದರು. ಈ ಹಿನ್ನೆಲೆಯಲ್ಲಿ ಬಿಜೆಪಿ ಮೈತ್ರಿಕೂಟದಲ್ಲಿದ್ದ ಜೆಡಿಎಸ್ ಸದಸ್ಯೆ ಗೀತಾ ಅಜಿತ್ ಕುಮಾರ್ ಅವರನ್ನು ಮನವೊಲಿಸಿ ಕಾಂಗ್ರೆಸ್ಸಿಗೆ ಸೇರ್ಪಡೆಗೊಳಿಸುವಲ್ಲಿ ಯಶಸ್ವಿಯಾದರು. ನಂತರ ಎಲ್ಲಾ 5 ಮಂದಿ ಕಾಂಗ್ರೆಸ್ ಸದಸ್ಯರನ್ನು ಪ್ರವಾಸಕ್ಕೆ ಕಳುಹಿಸಲಾಗಿತ್ತು.
ಈ ನಡುವೆ ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಬಿಜೆಪಿಯ ಪ.ಪಂ. ಸದಸ್ಯ ಧರ್ಮಪಾಲ್ ಅವರು ಕೆಲ ಕಾರಣದಿಂದ ಬಿಜೆಪಿಯಿಂದ ಅಂತರ ಕಾಯ್ದುಕೊಂಡಿದ್ದರು. ಅವರನ್ನು ಕೂಡ ಕಾಂಗ್ರೆಸ್‍ನತ್ತ ಸೆಳೆಯುವಲ್ಲಿ ಶಾಸಕಿ ನಯನಾ ಯಶಸ್ವಿಯಾದರು. ಈ ಹಿನ್ನಲೆಯಲ್ಲಿ ಬಿಜೆಪಿ ಪಕ್ಷ ಪ.ಪಂ.ಯ 6 ಮಂದಿ ಸದಸ್ಯರಿಗೆ ಕಳೆದ 2 ದಿನದ ಹಿಂದೆ ವಿಪ್ ಜಾರಿಗೊಳಿಸಿತ್ತು. ಅಲ್ಲದೇ ಮೀಸಲಾತಿ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಲಾಗಿತ್ತು. ಆದರೆ ಇದು ಪ್ರಯೋಜನವಾಗಿಲ್ಲ, ಇದರಿಂದ ಕಾಂಗ್ರೆಸ್ 7 ಮತಗಳ ಬಲದೊಂದಿಗೆ ಪಪಂನಲ್ಲಿ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿದೆ.
ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ, ಜೆಡಿಎಸ್ ಜಿಲ್ಲಾಧ್ಯಕ್ಷ ರಂಜನ್ ಅಜಿತ್ ಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಜಿ.ಸುರೇಂದ, ಪ.ಪಂ. ಸದಸ್ಯರಾದ ಕೆ.ವೆಂಕಟೇಶ್, ಹಂಝಾ, ಕುರ್ಷಿದ್‍ಬಾನು, ಧರ್ಮಪಾಲ್ ಸೇರಿದಂತೆ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ನೂತನ ಅಧ್ಯಕ್ಷೆ ಹಾಗೂ ಉಪಾಧ್ಯಕ್ಷರನ್ನು ಅಭಿನಂದಿಸಿದರು.