ಕಾಫಿನಾಡು ಚಿಕ್ಕಮಗಳೂರಿನಲ್ಲಿ ಮುಸ್ಲಿಮರಿಂದ ಸಂಭ್ರಮ, ಸಡಗರದ ಈದುಲ್ ಫಿತರ್ ಆಚರಣೆ
ಚಿಕ್ಕಮಗಳೂರು : ಈದುಲ್ ಫಿತರ್ ಹಬ್ಬವನ್ನು ಕಾಫಿನಾಡಿನಲ್ಲಿ ಮುಸ್ಲಿಂ ಸಮುದಾಯದ ಜನರು ಗುರುವಾರ ಅತ್ಯಂತ ಸಂಭ್ರಮ, ಸಡಗರದಿಂದ ಆಚರಿಸಿದರು.
ಕಳೆದ 30 ದಿನಗಳಿಂದ ಉಪವಾಸ ವ್ರತದಲ್ಲಿದ್ದ ಮುಸ್ಲಿಂ ಸಮುದಾಯದ ಜನರ ಪೈಕಿ ಜಿಲ್ಲೆಯಲ್ಲಿರುವ ಬ್ಯಾರಿ ಸಮುದಾಯದವರು ಬುಧವಾರವೇ ರಮಝಾನ್ ಹಬ್ಬ ಆಚರಿಸಿದ್ದರೇ, ಮುಸ್ಲಿಂ ಸಮುದಾಯದ ಇತರ ಪಂಗಡದ ಜನರು ಗುರುವಾರ ರಮಝಾನ್ ಹಬ್ಬ ಆಚರಿಸಿದರು. ಜಿಲ್ಲೆಯ ಮೂಡಿಗೆರೆ, ಕೊಪ್ಪ, ಕಳಸ, ಬಾಳೆಹೊನ್ನೂರು, ಶೃಂಗೇರಿ ತಾಲೂಕುಗಳ ವ್ಯಾಪ್ತಿಯಲ್ಲಿ ಬ್ಯಾರಿ ಸಮುದಾಯದ ಜನರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಸಮುದಾಯದವರು ಬುಧವಾರ ಬೆಳಗ್ಗೆ ಮಸೀದಿಗಳಿಗೆ ತೆರಳಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಮೂಡಿಗೆರೆ ಪಟ್ಟಣದ ಬದ್ರಿಯಾ, ಜುಮಾ ಮಸೀದಿ ಸೇರಿದಂತೆ ಮೂಡಿಗೆರೆ ಹ್ಯಾಂಡ್‍ಪೋಸ್ಟ್, ಅರಳೀಗಂಡಿ, ಬಿಳಗುಳ, ಅಣಜೂರು, ಕಿತ್ತಲೇಗಂಡಿ, ಹಂಡುಗುಳಿ, ಅಣಜೂರು, ಚಕಮಕ್ಕಿ, ಬಣಕಲ್, ಕೊಟ್ಟಿಗೆಹಾರ ¸ಸೇರಿದಂತೆ ತಾಲೂಕಿನ 18 ಮಸೀದಿಗಳಲ್ಲಿ ಬ್ಯಾರಿ ಸಮುದಾಯದ ಜನರು ವಿಶೇಷ ಪ್ರಾರ್ಥನೆ ಸಲ್ಲಿಸಿದರು.. ಪಟ್ಟಣದ ಜುಮಾ ಮಸೀದಿಯ ಗುರು ಮುಸ್ತಫಾ ಯಮಾನಿ ನೇತೃತ್ವದಲ್ಲಿ ಸಮುದಾಯದ ಜನತೆ ರಮಝಾನ್ ಪ್ರಾರ್ಥನೆ ಬಳಿಕ ಜಿಲ್ಲಾದ್ಯಂತ ಉತ್ತಮ ಮಳೆಯಾಗಲೀ ಎಂದು ವಿಶೇಷ ಪ್ರಾರ್ಥನೆಯನ್ನೂ ಸಲ್ಲಿಸಿದರು.
ಗುರುವಾರ ಚಿಕ್ಕಮಗಳೂರು, ಕಡೂರು, ತರೀಕೆರೆ ಸೇರಿದಂತೆ ಮೂಡಿಗೆರೆ, ಶೃಂಗೇರಿ, ಕಳಸ, ಕೊಪ್ಪ, ಬಾಳೆಹೊನ್ನೂರು, ಜಯಪುರ, ಬಣಕಲ್, ಮಾಗುಂಡಿ ಮತ್ತಿತರ ಪಟ್ಟಣ, ಗ್ರಾಮಗಳಲ್ಲಿ ರಮಝಾನ್ ಹಬ್ಬ ಹಿನ್ನೆಲೆಯಲ್ಲಿ ಮುಸ್ಲಿಂ ಸಮುದಾಯದವರು ಶ್ವೇತ ವರ್ಣದ ವಸ್ತ್ರನೊಂದಿಗೆ ಮಸೀದಿಗಳಿಗೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ನಂತರ ಈದ್ಗಾ ಮೈದಾನಗಳಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ ಸಮುದಾಯದ ಜನರು ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಪ್ರಮುಖ ಪಟ್ಟಣಗಳಲ್ಲಿ ಹಿಂದೂ ಸಮುದಾಯದ ಜನರು ರಮಝಾನ್ ಹಬ್ಬದ ಶುಭಾಶಯ ಕೋರಿ ಬ್ಯಾನರ್, ಪ್ಲೆಕ್ಸ್ ಹಾಕಿದ್ದ ದೃಶ್ಯಗಳೂ ಕಂಡು ಬಂದವು. ಅಲ್ಲಲ್ಲಿ ಮುಸ್ಲಿಂ ಸಮುದಾಯದ ಜನರಿಗೆ ಹಿಂದೂ ಸಮುದಾಯದ ಜನರು ಹಬ್ಬದ ಶುಭಾಷಯ ಕೋರುತ್ತಿದ್ದ ದೃಶ್ಯಗಳೂ ಸಾಮಾನ್ಯವಾಗಿದ್ದವು. ಹಬ್ಬದ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಮಸೀದಿಗಳು ದೀಪಾಲಂಕಾರದಿಂದ ಕಂಗೊಳಿಸುತ್ತಿದ್ದವು. ಈ ಬಾರಿ ಹಿಂದೂ ಸಮುದಾಯದ ಯುಗಾದಿ ಹಬ್ಬ ಹಾಗೂ ಮುಸ್ಲಿಂ ಸಮುದಾಯದವರ ರಮಝಾನ್ ಹಬ್ಬ ಒಟ್ಟೊಟ್ಟಿಗೆ ಬಂದಿದ್ದು, ಈ ಹಬ್ಬಗಳ ಹಿನ್ನೆಲೆಯಲ್ಲಿ ಎರಡೂ ಕೋಮುಗಳ ಜನರು ಹಬ್ಬಕ್ಕೆ ಪರಸ್ಪರ ಶುಭಕೋರುವ ಮೂಲಕ ಸಾಮರಸ್ಯ ಮೆರೆದಿದ್ದಾರೆ.