ಚಿಕ್ಕಮಗಳೂರು: ಕೆಡಿಪಿ ಸಭೆಯಲ್ಲಿ ವೇದಿಕೆ ಮೇಲಿನ ಕುರ್ಚಿಗಾಗಿ ಕಾಂಗ್ರೆಸ್, ವಿಪಕ್ಷ ಸದಸ್ಯರ ನಡುವೆ ಮಾತಿನ ಚಕಮಕಿ

Update: 2024-07-12 16:04 GMT

ಚಿಕ್ಕಮಗಳೂರು: ಇಲ್ಲಿನ ಜಿಪಂ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಕೆಡಿಪಿ ಸಭೆಯ ಆರಂಭದಲ್ಲಿ ವೇದಿಕೆಯ ಕುರ್ಚಿಗಳ ಮೇಲೆ ಯಾರೆಲ್ಲ ಕೂರಬಹುದು ಎಂಬ ವಿಚಾರ ಭಾರೀ ಚರ್ಚೆಗೆ ಗ್ರಾಸವಾಯಿತು. ಈ ವಿಚಾರ ಸಂಬಂಧ ಕಾಂಗ್ರೆಸ್ ಶಾಸಕರು ಮತ್ತು ಬಿಜೆಪಿ, ಜೆಡಿಎಸ್ ಮೈತ್ರಿ ಪಕ್ಷಗಳ ವಿಪಕ್ಷ ಸದಸ್ಯರ ನಡುವೆ ಮಾತಿನ ಚಕಮಕಿ, ವಾಗ್ವಾದಕ್ಕೂ ಸಭೆ ಸಾಕ್ಷಿಯಾಯಿತು.

ಶುಕ್ರವಾರ ಸಚಿವ ಕೆ.ಜೆ.ಜಾರ್ಜ್ ಅಧ್ಯಕ್ಷತೆಯಲ್ಲಿ ನಡೆದ ಕೆಡಿಪಿ ಸಭೆಯ ಆರಂಭವಾಗುತ್ತಿದ್ದಂತೆ ಸಚಿವರೂ ಸೇರಿದಂತೆ ಕಾಂಗ್ರೆಸ್ ಶಾಸಕರು, ವಿಧಾನ ಪರಿಷತ್ ಉಪಸಭಾಪತಿ ಎಂ.ಕೆ.ಪ್ರಾಣೇಶ್ ಸಭೆಯ ವೇದಿಕೆಯ ಮೇಲಿದ್ದ ಕುರ್ಚಿಗಳ ಮೇಲೆ ಕುಳಿತಿದ್ದರು. ಈ ವೇಳೆ ಸಭೆಗೆ ಆಗಮಿಸಿದ್ದ ವಿಧಾನ ಪರಿಷತ್ ಸದಸ್ಯರಾದ ಸಿ.ಟಿ.ರವಿ ಹಾಗೂ ಎಸ್.ಎಲ್.ಭೋಜೇಗೌಡ ಅವರನ್ನು ಸಚಿವ ಜಾರ್ಜ್ ವೇದಿಕೆ ಮೇಲೆ ಆಹ್ವಾನಿಸಿದರು.

ಶಿಷ್ಟಾಚಾರದ ಪ್ರಕಾರ ಸಭೆಯ ಅಧ್ಯಕ್ಷರು, ಅಧಿಕಾರಿಗಳು ಸಭೆಯ ವೇದಿಕೆಯಲ್ಲಿರಬೇಕು, ಶಾಸಕರು ವೇದಿಕೆಯಲ್ಲಿ ಕೂರುವಂತಿಲ್ಲ ಎಂದು ಭೋಜೇಗೌಡ ಪ್ರತಿಕ್ರಿಯಿಸಿದರು. ಆಗ ಸಚಿವ ಜಾರ್ಜ್, ಸಿ.ಟಿ.ರವಿ ಹಾಗೂ ಭೋಜೇಗೌಡ ಅವರನ್ನು ವೇದಿಕೆಗೆ ಆಹ್ವಾನಿಸಿ ತಮ್ಮ ಪಕ್ಕದಲ್ಲೇ ಕೂರಿಸಿಕೊಂಡರು. ಸಚಿವ ಜಾರ್ಜ್, ವಿಧಾನಪರಿಷತ್ ಉಪಸಭಾಪತಿ ಪ್ರಾಣೇಶ್, ಕಾಂಗ್ರೆಸ್ ಶಾಸಕರಾದ ಎಚ್.ಡಿ.ತಮ್ಮಯ್ಯ, ಕಡೂರು ಶಾಸನ ಕೆ.ಎಸ್.ಆನಂದ್, ಮೂಡಿಗೆರೆ ಶಾಸಕಿ ನಯನಾ, ತರೀಕೆರೆ ಶಾಸಕ ಶ್ರೀನಿವಾಸ್ ಮೊದಲೇ ವೇದಿಕೆಯಲ್ಲಿ ಆಸನರಾಗಿದ್ದರು.

ಸಭೆ ಆರಂಭವಾಗುತ್ತಿದ್ದಂತೆ ಶಿಷ್ಟಾಚಾರದ ವಿಚಾರವಾಗಿ ಮತ್ತೆ ತಗಾದೆ ತೆಗೆದ ಜೆಡಿಎಸ್ ವಿಪ ಸದಸ್ಯ ಭೋಜೇಗೌಡ, ಶಿಷ್ಟಾಚಾರದ ಪ್ರಕಾರ ವಿಧಾನಸಭೆ ಸದಸ್ಯರು, ವಿಪ ಸದಸ್ಯರು ವೇದಿಕೆ ಮೇಲೆ ಕೂರುವಂತಿಲ್ಲ, ಸಭೆಯ ಅಧ್ಯಕ್ಷರು, ಅಧಿಕಾರಿಗಳು ಮಾತ್ರ ವೇದಿಕೆಯಲ್ಲಿರಬೇಕು, ವಿಧಾನಪರಿಷತ್ ಉಪಸಭಾಪತಿ ಆಗಿರುವ ಕಾರಣಕ್ಕೆ ಪ್ರಾಣೇಶ್ ಅವರು ವೇದಿಕೆ ಮೇಲೆ ಕೂರಬಹುದು. ನಾನು ಹಲವು ಜಿಲ್ಲೆಗಳ ಕೆಡಿಪಿ ಸಭೆಯಲ್ಲಿ ಭಾಗವಹಿಸಿದ್ದೇನೆ, ಶಾಸಕರು, ವಿಪ ಸದಸ್ಯರು ವೇದಿಕೆ ಮೇಲೆ ಕೂತಿದ್ದನ್ನು ಎಲ್ಲೂ ನೋಡಿಲ್ಲ ಎಂದರು.

ಈ ವೇಳೆ ಕಾಂಗ್ರೆಸ್ ಶಾಸಕ ಕೆ.ಎಸ್.ಆನಂದ್ ಮಾತನಾಡಿ, ವಿಧಾನಸಭೆ ಸದಸ್ಯರು ಕೆಡಿಪಿ ಸಭೆಗಳಲ್ಲಿ ವೇದಿಕೆ ಮೇಲೆ ಕೂರಲು ಸಂವಿಧಾನಿಕ ಹಕ್ಕಿದೆ, ಆದರೆ ವಿಪ ಸದಸ್ಯರಿಗೆ ಸಂವಿಧಾನಿಕ ಹಕ್ಕಿಲ್ಲ ಎಂದರು, ಇದಕ್ಕೆ ಭೋಜೇಗೌಡ ಆಕ್ರೋಶಗೊಂಡು ಅಸಮಾಧಾನ ಹೊರಹಾಕಿದರು. ಈ ವೇಳೆ ಶಾಸಕ ಆನಂದ್ ಹಾಗೂ ಭೋಜೇಗೌಡ ನಡುವೆ ಮಾತಿನ ಚಕಮಕಿ ನಡೆಯಿತು. ಭೋಜೇಗೌಡ ಮಾತಿಗೆ ವಿಧಾನ ಪರಿಷತ್ ಉಪಸಭಾಪತಿ ಪ್ರಾಣೇಶ್ ಬೆಂಬಲ ಸೂಚಿಸಿದ್ದರಿಂದ ಪ್ರಾಣೇಶ್ ಹಾಗೂ ಆನಂದ್ ನಡುವೆಗೂ ವಾಗ್ವಾದ ನಡೆಯಿತು. ಈ ವೇಳೆ ಸಚಿವ ಜಾರ್ಜ್ ಎಲ್ಲರನ್ನು ಸಮಾಧಾನ ಪಡಿಸಲು ಮುಂದಾದರೂ ಭೋಜೇಗೌಡ ಹಾಗೂ ಸಿ.ಟಿ.ರವಿ ವೇದಿಕೆಯಿಂದ ಕೆಳಗಿಳಿದು ವೇದಿಕೆ ಮುಂದಿನ ಸಾಲಿನಲ್ಲಿ ಕುಳಿತರು. ಶಾಸಕ ಆನಂದ್ ಅವರಿಗೆ ತಿಳುವಳಿಕೆಯ ಕೊರತೆ ಇದೆ, ಸರಿಯಾದ ತಿಳುವಳಿಕೆ ಪಡೆದು ಮಾತನಾಡಬೇಕು ಎಂದು ಭೋಜೇಗೌಡ ಆನಂದ್ ವಿರುದ್ಧ ಹರಿಹಾಯ್ದರು. ಈ ವೇಳೆ ಮತ್ತೆ ವಾಗ್ವಾದ ನಡೆಯಿತು.

ಸಚಿವ ಜಾರ್ಜ್ ಮಾತನಾಡಿ, ಶಾಸಕ ಆನಂದ್ ಮಾತನಾಡಿದ ರೀತಿ ಸರಿಯಲ್ಲ, ಶಾಸಕರಿಗಿರುವಷ್ಟೇ ಅಧಿಕಾರ ವಿಪಕ್ಷ ಸದಸ್ಯರಿಗೂ ಇದೆ. ಸಭೆಯಲ್ಲಿ ಹೀಗೆಲ್ಲ ಮಾತನಾಡಬಾರದು ಎಂದು ಅಸಮಾಧಾನ ವ್ಯಕ್ತಪಡಿಸಿ, ಶಿಷ್ಟಾಚಾರದ ಬಗ್ಗೆ ಮುಂದಿನ ಸಭೆಯಲ್ಲಿ ಸ್ಪಷ್ಟ ಮಾಹಿತಿ ಪಡೆದು ಅದರಂತೆ ಸಭೆ ನಡೆಸಲಾಗುವುದು, ಈ ಸಭೆಯಲ್ಲಿ ವಿಪಕ್ಷ ಸದಸ್ಯರು ವೇದಿಕೆ ಮೇಲೆ ಕೂರಬೇಕು ಎಂದು ವೇದಿಕೆಗೆ ಆಹ್ವಾನಿಸಿದರು. ಈ ಆಹ್ವಾನವನ್ನು ಭೋಜೇಗೌಡ, ಸಿ.ಟಿ.ರವಿ ನಯವಾಗಿ ತಿರಸ್ಕರಿಸಿ, ವೇದಿಕೆ ಮುಂದಿನ ಸಾಲಿನಲ್ಲೇ ಕೂರುವುದಾಗಿ ಪಟ್ಟು ಹಿಡಿದು, ಕೆಳಗೇ ಕುಳಿತುಕೊಂಡರು.

ಕುರ್ಚಿಗಾಗಿ ನಡೆದ ಈ ವಾದ, ವಿವಾದವನ್ನು ಸಭೆಯಲ್ಲಿದ್ದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಕಟಾರಿಯ ಸೇರಿದಂತೆ ಡಿಸಿ, ಎಸ್ಪಿ, ಜಿಪಂ ಸಿಇಒ ಹಾಗೂ ಅಧಿಕಾರಿಗಳು ಮೌನವಾಗಿ ವೀಕ್ಷಿಸಿದರು.

 

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News