ಭಾರೀ ಮಳೆ, ಗಾಳಿಗೆ ಕತ್ತಲೆಯಲ್ಲಿ ಮುಳುಗಿದ ಮಲೆನಾಡು

Update: 2024-07-28 06:18 GMT

ಚಿಕ್ಕಮಗಳೂರು ಜಿಲ್ಲೆಯಲ್ಲಿ ಈ ಬಾರಿ ಕಳೆದ ಕೆಲ ದಿನಗಳಿಂದ ಮಳೆಯೊಂದಿಗೆ ಆರ್ಭಟಿಸುತ್ತಿರುವ ಭಾರೀ ಗಾಳಿಯಿಂದಾಗಿ ಮಲೆನಾಡು ಭಾಗದ ಜನತೆ ಅಕ್ಷರಶಃ ರೋಸಿ ಹೋಗಿದ್ದಾರೆ.

ಕೆಲ ದಿನಗಳಿಂದ ಬೀಸುತ್ತಿರುವ ಭಾರೀ ಗಾಳಿಯಿಂದಾಗಿ ಮಲೆನಾಡು ಭಾಗದಲ್ಲಿ ಎಲ್ಲೆಂದರಲ್ಲಿ ಮರಗಳು ಧರಾಶಾಯಿ ಆಗಿದೆ. ಮರಗಳು ಹೆಚ್ಚಿನ ಪ್ರಮಾಣಲ್ಲಿ ವಿದ್ಯುತ್ ಕಂಬಗಳು ಮೇಲೆ ಬೀಳುತ್ತಿರುವುದರಿಂದ ಮಲೆನಾಡು ಭಾಗದ ಮೂಡಿಗೆರೆ, ಕಳಸ, ಶೃಂಗೇರಿ, ಕೊಪ್ಪ, ಎನ್.ಆರ್.ಪುರ ತಾಲೂಕಿನ ಬಹುತೇಕ ಗ್ರಾಮಗಳು, ಪಟ್ಟಣಗಳು ಇಂದಿಗೂ ಕತ್ತಲೆಯ ಕೂಪದಲ್ಲಿ ಮುಳುಗಿದೆ. ವಿದ್ಯುತ್ ಸಂಪರ್ಕದ ಕಡಿತದಿಂದಾಗಿ ಮಲೆನಾಡಿನ ಜನರ ಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ.

ವಿದ್ಯುತ್ ಸಂಪರ್ಕದ ಮರುಸ್ಥಾಪನೆಗಾಗಿ ಮೆಸ್ಕಾಂ ಇಲಾಖೆಯ ಇಂಜಿನಿಯರ್‌ಗಳು, ಸಿಬ್ಬಂದಿ ಹಾಗೂ ವಿದ್ಯುತ್ ಗುತ್ತಿಗೆದಾರರು ಮತ್ತು ಕಾರ್ಮಿಕರು ರಾತ್ರಿ, ಹಗಲು, ಮಳೆ, ಗಾಳಿ ಲೆಕ್ಕಿಸದೆ ನಿದ್ದೆಯನ್ನೂ ತ್ಯಜಿಸಿ ವಿದ್ಯುತ್ ಕಂಬಗಳ ದುರಸ್ತಿಗೆ ಹರಸಾಹಸ ಪಡುತ್ತಿದ್ದಾರೆ. ಕೆಲವೆಡೆ ದುರಸ್ತಿ ಮಾಡಿದ ವಿದ್ಯುತ್ ಮಾರ್ಗಗಳ ಮೇಲೂ ಮತ್ತೆ ಮತ್ತೆ ಮರಗಳು ಬೀಳುತ್ತಿರುವುದರಿಂದ ವಿದ್ಯುತ್ ಸಂಪರ್ಕ ಮರುಸ್ಥಾಪನೆ ಕೆಲಸ ಮೆಸ್ಕಾಂ ಇಲಾಖೆಗೆ ಸವಾಲಾಗಿ ಪರಿಣಮಿಸಿದೆ.

ಮಲೆನಾಡಿನ ಗ್ರಾಮೀಣ ಭಾಗದ ಜನತೆ ವಿದ್ಯುತ್ ಸಮಸ್ಯೆಯಿಂದಾಗಿ ತಮ್ಮ ಮೊಬೈಲ್‌ಗಳನ್ನು ಚಾರ್ಜ್ ಮಾಡಲೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ವಿದ್ಯುತ್ ಇಲ್ಲದೆ ಸಣ್ಣ ಸಣ್ಣ ಕೈಗಾರಿಕೆಗಳು ಬಾಗಿಲು ಬಂದ್ ಮಾಡಿವೆ. ಎಲ್ಲೆಡೆ ಜನರೇಟರ್‌ಗಳ ಸದ್ದು ಕೇಳಿ ಬರುತ್ತಿದ್ದು, ಹೋಮ್ ಸ್ಟೇ, ರೆಸಾರ್ಟ್‌ಗಳು ವಿದ್ಯುತ್ ಇಲ್ಲದೆ ಕಾರ್ಯ ನಿರ್ವಹಿಸಲೂ ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಸಮಸ್ಯೆಯಿಂದಾಗಿ ಮಲೆನಾಡು ಭಾಗದ ಹೋಮ್ ಸ್ಟೇ, ರೆಸಾರ್ಟ್‌ಗಳತ್ತ ಪ್ರವಾಸಿಗರೂ ತಲೆ ಹಾಕದಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಹಲವು ಉದ್ಯಮಗಳು ನಷ್ಟ ಅನುಭವಿಸುವಂತಾಗಿದೆ.

ವಿದ್ಯುತ್ ಸಮಸ್ಯೆ ಮೊಬೈಲ್ ನೆಟ್‌ವರ್ಕ್‌ಗಳ ಸಮಸ್ಯೆಯನ್ನೂ ಹೆಚ್ಚಿಸಿದೆ. ಗ್ರಾಮೀಣ ಭಾಗದಲ್ಲಿ ಬಿಎಸ್ಸೆನ್ನೆಲ್ ನೆಟ್‌ವರ್ಕ್ ಸಂಪೂರ್ಣವಾಗಿ ವಿದ್ಯುತ್ ಚಾಲಿತವಾಗಿದ್ದು, ಸದ್ಯ ವಿದ್ಯುತ್ ಕಡಿತದಿಂದಾಗಿ ಗ್ರಾಮೀಣ ಭಾಗದಲ್ಲಿ ಸರಕಾರಿ ಸಂಸ್ಥೆಯ ನೆಟ್‌ವರ್ಕ್ ಸಮರ್ಪಕ ಸೇವೆ ನೀಡುವಲ್ಲಿ ಸಾಧ್ಯವಾಗುತ್ತಿಲ್ಲ. ನೆಟ್‌ವರ್ಕ್ ಸಮಸ್ಯೆ ಪರಿಹಾರಕ್ಕೆ ಸಂಸ್ಥೆಯಲ್ಲಿ ಸಿಬ್ಬಂದಿ ಕೊರತೆ ಇದ್ದು, ಪರಿಣಾಮ ಬಿಎಸ್ಸೆನೆಲ್ ನೆಟ್‌ವರ್ಕ್ ಸೇವೆ ಗ್ರಾಮೀಣ ಭಾಗದ ಜನರಿಗೆ ಸಿಗದಂತಾಗಿದೆ.

3 ಸಾವಿರಕ್ಕೂ ವಿದ್ಯುತ್ ಕಂಬಗಳು ಧರಾಶಾಯಿ

ಸದ್ಯ ಮಲೆನಾಡು ಭಾಗದ 6 ತಾಲೂಕುಗಳ ವ್ಯಾಪ್ತಿಯಲ್ಲಿ ಅಂದಾಜು 3 ಸಾವಿರಕ್ಕೂ ವಿದ್ಯುತ್ ಕಂಬಗಳು ನೆಲಕ್ಕುರುಳಿವೆ ಎಂದು ಹೇಳಲಾಗುತ್ತಿದೆ. ಇದರಿಂದ ಮೆಸ್ಕಾಂ ಇಲಾಖೆಗೆ ಭಾರೀ ನಷ್ಟವಾಗಿರುವುದು ಒಂದೆಡೆಯಾದರೇ ಮಲೆನಾಡಿನ ಗ್ರಾಮೀಣ ಭಾಗದ ನೂರಾರು ಗ್ರಾಮಗಳು ಕತ್ತಲೆಯ ಕೂಪದಲ್ಲಿ ಮುಳುಗುವಂತಾಗಿದೆ. ಪ್ರತೀ ಮಳೆಗಾಲಕ್ಕೂ ಮುನ್ನ ರಸ್ತೆ ಬದಿಯಲ್ಲಿ ಬೀಳುವ ಹಂತದಲ್ಲಿರುವ ಮರಗಳನ್ನು ತೆರವು ಮಾಡಲು ಮೆಸ್ಕಾಂ, ಅರಣ್ಯ ಇಲಾಖೆ ಮುಂದಾಗಬೇಕೆಂದು ನಾಗರಿಕರು ಆಗ್ರಹಿಸುತ್ತಿದ್ದಾರೆ.

ಮೊಬೈಲ್ ಚಾರ್ಜ್ ಇಲ್ಲದೆ ಭಾರೀ ಮಳೆ ಗಾಳಿಗೆ ಅನಾಹುತಗಳು ಸಂಭವಿಸಿದಾಗ ಅಕ್ಕಪಕ್ಕದವರಿಗೆ, ಪೊಲೀಸರೂ ಸೇರಿದಂತೆ ಸಂಬಂಧಿಸಿದ ಇಲಾಖೆಗಳಿಗೆ ಸುದ್ದಿ ಮುಟ್ಟಿಸಲೂ ಸಾಧ್ಯವಾಗದಂತಾಗಿದೆ. ಕೆಲವೆಡೆ ಜನರೇಟರ್‌ಗಳ ಮೂಲಕ ಜನರು ತಮ್ಮ ಮೊಬೈಲ್‌ಗಳನ್ನು ಚಾರ್ಜ್ ಮಾಡುತ್ತಿದ್ದಾರೆ. ಜನರೇಟರ್ ಇದ್ದವರು ಪ್ರತೀ ಮೊಬೈಲ್ ಚಾರ್ಜ್‌ಗೆ ನಿಗದಿತ ಶುಲ್ಕ ವಸೂಲಿ ಮಾಡುತ್ತಿದ್ದರೆ, ಕೆಲವರು ಉಚಿತವಾಗಿ ಮೊಬೈಲ್ ಚಾರ್ಜ್ ಮಾಡಿ ಕೊಡುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - Musaveer

contributor

Byline - -ಕೆ.ಎಲ್.ಶಿವು

contributor

Similar News