ಗಣರಾಜ್ಯೋತ್ಸವ ಪ್ರತೀ ಭಾರತೀಯನ ಪಾಲಿಗೆ ಆತ್ಮಾವಲೋಕನದ ದಿನ: ಸಚಿವ ಕೆ.ಜೆ.ಜಾರ್ಜ್

Update: 2024-01-26 14:33 GMT

ಚಿಕ್ಕಮಗಳೂರು: ಗಣರಾಜ್ಯೋತ್ಸವ ಕೇವಲ ಸಂಭ್ರಮದ ದಿನ ಮಾತ್ರವಲ್ಲ. ಅದು ಪ್ರತೀ ಭಾರತೀಯನ ಪಾಲಿಗೆ ಆತ್ಮಾವಲೋಕನದ ದಿನ, ಸಂಕಲ್ಪದ ಸುದಿನ ಎಂದು ಇಂಧನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಅಭಿಪ್ರಾಯಿಸಿದರು.

ಶುಕ್ರವಾರ ನಗರದ ಸುಭಾಷ್‌ ಚಂದ್ರ ಬೋಸ್ ಜಿಲ್ಲಾ ಆಟದ ಮೈದಾನದಲ್ಲಿ ಜಿಲ್ಲಾಡಳಿತದಿಂದ ಹಮ್ಮಿಕೊಂಡಿದ್ದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜರೋಹಣ ನೆರವೇರಿಸಿ ಮಾತನಾಡಿದ ಅವರು, ಭೂತಕಾಲದ ಪರಂಪರೆ, ವರ್ತಮಾನದ ಸಮಸ್ಯೆ ಸಂಕಟ ಮತ್ತು ಭವಿಷ್ಯತ್ತಿನ ಕನಸು, ತ್ರಿಕಾಲ ಜ್ಞಾನ, ಬದುಕಿನ ಯಶಸ್ಸು, ದೇಶದ ಸುಭಿಕ್ಷೆ, ಸವೃದ್ದಿಗೆ ಗಣರಾಜ್ಯೋತ್ಸವ ದಾರಿದೀಪ ಎಂದರು.

ವಿವಿಧತೆಯಲ್ಲಿ ಏಕತೆ ಸಾರುವ ನಮ್ಮ ದೇಶದ ಸಂಸ್ಕೃತಿಯನ್ನು ಕಾಪಾಡುವುದರ ಜೊತೆಗೆ ಈ ದೇಶದ ನೆಲ, ಜಲ, ನೈಸರ್ಗಿಕ ಸಂಪತ್ತನ್ನು ಕಾಪಾಡುವ ನಿಟ್ಟಿನಲ್ಲಿ ಎಲ್ಲರೂ ಶ್ರಮಿಸಬೇಕು. 'ಸರ್ವರಿಗೂ ಸಮಪಾಲು, ಸರ್ವರಿಗೆ ಸಮಬಾಳು' ಕಲ್ಪಿಸುವ ಪ್ರಬಲವಾದ ಲಿಖಿತ ಸಂವಿಧಾನ ಆವಶ್ಯಕತೆಯನ್ನು ಮನಗಂಡು ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಪಂಡಿತ್ ಜವಹಾರಲಾಲ್ ನೆಹರು ಅವರು ಸಂವಿಧಾನದ ಕರಡು ಸಮಿತಿ ಮುಖ್ಯಸ್ಥರನ್ನಾಗಿ ಮಾಡಿದರು. ಡಾ.ಬಿ.ಆರ್.ಅಂಬೇಡ್ಕರ್ ಅವರು ರಚಿಸಿದ ಸಂವಿಧಾನ ಭಾರತವನ್ನು ಒಂದು ಪ್ರಬಲ ಪ್ರಜಾಪ್ರಭುತ್ವ ರಾಷ್ಟ್ರವಾಗಿಸಲು ಮತ್ತು ಎಲ್ಲಾ ನಾಗರಿಕರಿಗೂ ಸಮಾನ ಹಕ್ಕು ಹಾಗೂ ಅವಕಾಶವನ್ನು ನೀಡಿದೆ. 1950 ಜ.26ರಂದು ಸಂವಿಧಾನ ಅಂಗೀಕಾರದ ದಿನವಾಗಿದ್ದು, ಈ ದಿನವನ್ನು ಗಣರಾಜ್ಯೋತ್ಸವ ದಿನವನ್ನಾಗಿ ಪ್ರತೀ ವರ್ಷ ಆಚರಿಸುತ್ತಾ ಬಂದಿದ್ದೇವೆ ಎಂದರು.

ರಾಜ್ಯ ಸರಕಾರ ಜನತೆಗೆ ನೀಡಿದ್ದ ಪಂಚ ಯೋಜನೆಗಳ ಭರವಸೆಯನ್ನು ಈಡೇರಿಸಿದೆ. ಶಕ್ತಿಯೋಜನೆಯಡಿಯಲ್ಲಿ ಎರಡು ಕೋಟಿ ನಲವತ್ತೈದು ಲಕ್ಷ ಹೆಣ್ಣುಮಕ್ಕಳು ಪ್ರಯೋಜನ ಪಡೆದಿದ್ದಾರೆ. ಗೃಹಲಕ್ಷ್ಮೀ ಯೋಜನೆಯಡಿ 2.94 ಲಕ್ಷ ಕುಟುಂಬಗಳು ನೋಂದಣಿಯಾಗಿದ್ದು, ವಾರ್ಷಿಕ 120 ಕೋಟಿ ಮೌಲ್ಯದ ವಿದ್ಯುತ್ ಒದಗಿಸಲಾಗುತ್ತಿದೆ. ಅನ್ನಭಾಗ್ಯ ಯೋಜನೆಯಡಿಯಲ್ಲಿ 74.45ಕೋಟಿ ರೂ. ಫಲಾನುಭವಿಗಳ ಖಾತೆಗೆ ಹಣ  ಜಮೆಯಾಗುತ್ತಿದೆ. ಇತ್ತೀಚೆಗೆ ಜಾರಿಯಾಗಿರುವ ಯುವನಿಧಿ ಯೋಜನೆಯಡಿಯಲ್ಲಿ ಪದವಿ ಮತ್ತು ಡಿಪ್ಲೊಮಾ ತೇರ್ಗಡೆಯಾದ ನಿರುದ್ಯೋಗಿ ಯುವಕ ಯುವತಿಯರು ಯೋಜನೆಯಡಿಯಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ. ಈ ಯೋಜನೆಗಳು ಜಾತ್ಯತೀತವಾಗಿ, ಆರ್ಥಿಕವಾಗಿ, ಹಿಂದುಳಿದ ವರ್ಗದವರಿಗೆ ಚೈತನ್ಯ ನೀಡಿದ ಹಾಗೂ ಹೆಣ್ಣುಮಕ್ಕಳಿಗೆ ಸಾರ್ಥಕ ಯೋಜನೆಗಳನ್ನು ನೀಡಿದ ಗೌರವ, ಅಭಿಮಾನ ಸರಕಾರಕ್ಕಿದೆ ಎಂದರು.

ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಗೌರವ ವಂದನೆ ಸ್ವೀಕರಿಸಿದ ಬಳಿಕ ಜಿಲ್ಲಾ ಶಸಸ್ತ್ರ ಮೀಸಲು ಪಡೆ, ಮಹಿಳಾ ಪೊಲೀಸ್ ತುಕಡಿ, ಸಿವಿಲ್ ಪೊಲೀಸ್ ತುಕಡಿ, ಗೃಹರಕ್ಷಕರು, ಅರಣ್ಯ ಇಲಾಖೆ, ಮಾಜಿ ಸೈನಿಕರು, ಸೇವಾದಳ, ಸ್ಕೌಟ್ಸ್ ಅಂಡ್ ಗೈಡ್ಸ್, ಎನ್.ಎಸ್.ಎಸ್, ಎನ್.ಸಿಸಿ, ಆಶಾ ಕಿರಣ ಅಂದ ಮಕ್ಕಳ ಶಾಲೆ ಸೇರಿದಂತೆ ವಿವಿಧ ಶಾಲೆಗಳ ಮಕ್ಕಳು ನಡೆಸಿಕೊಟ್ಟು ಆಕರ್ಷಕ ಕವಾಯತುಗಳನ್ನು ವೀಕ್ಷಿಸಿದರು. ಶಾಲಾ ವಿದ್ಯಾರ್ಥಿಗಳಿಂದ ದೇಶಭಕ್ತಿ ಗೀತೆಗಳ ಗಾಯನ ಹಾಗೂ ನೃತ್ಯ ಕಾರ್ಯಕ್ರಮ ಇದೇ ವೇಳೆ ನಡೆಯಿತು. ಇದೇ ವೇಳೆ ಸಂವಿಧಾನ ಜಾಗೃತಿಗಾಗಿ ಜಿಲ್ಲಾದ್ಯಂತ ನಡೆಯಲಿರುವ ಸಂವಿಧಾನ ಜಾಥಾ ಅಭಿಯಾನದ ಸ್ತಬ್ಧ ಚಿತ್ರಕ್ಕೆ ಸಚಿವ ಸಚಿವ ಜಾರ್ಜ್ ಚಾಲನೆ ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News