ಕಾಫಿನಾಡಿನಲ್ಲಿ ಮುಂದುವರಿದ ಕಾಡಾನೆಗಳ ಹಾವಳಿ; ರೈತರು, ಗ್ರಾಮಸ್ಥರಲ್ಲಿ ಆತಂಕ

Update: 2024-02-09 17:16 GMT

ಚಿಕ್ಕಮಗಳೂರು: ಕಾಫಿನಾಡಿಗೆ ಕಳೆದ 15 ದಿನಗಳ ಸಕಲೇಶಪುರ, ಬೇಲೂರು ಭಾಗದಿಂದ ದಾಂಗುಡಿ ಇಟ್ಟಿರುವ 25ಕ್ಕೂ ಕಾಡಾನೆಗಳ ಗುಂಪು ಕಾಫಿನಾಡಿನ ಗ್ರಾಮೀಣ ಭಾಗದ ರೈತರು, ಗ್ರಾಮಸ್ಥರ ನಿದ್ರೆಗೆ ಭಂಗ ತರುತ್ತಿವೆ. ತಾಲೂಕಿನ ಗ್ರಾಮೀಣ ಭಾಗದಲ್ಲಿ ಕಾಡಾನೆಗಳು ಹಾವಳಿ ಮುಂದುವರಿಸಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿಸಿವೆ.

ಕೆಲವು ದಿನಗಳ ಹಿಂದೆ ಮಡಿಕೇರಿ ಜಿಲ್ಲೆಯ ಕುಶಾಲನಗರದಿಂದ ಹಾಸನ ಜಿಲ್ಲೆಯ ಸಕಲೇಶಪುರ, ಬೇಲೂರು, ಬಿಕ್ಕೋಡು ಮೂಲಕ ಚಿಕ್ಕಮಗಳೂರು ತಾಲೂಕಿನ ಕೆ.ಆರ್.ಪೇಟೆ ಗ್ರಾಮದ ಕಾಫಿ ತೋಟಗಳಿಗೆ ನುಗ್ಗಿ ಅಪಾರ ಬೆಳೆ ಹಾನಿ ಮಾಡಿದ್ದ ಈ ಕಾಡಾನೆಗಳು ಚಿಕ್ಕಮಗಳೂರು ನಗರಸಮೀಪಕ್ಕೂ ಬಂದು ಮತ್ತೆ ಕೆಆರ್ ಪೇಟೆ ಮೂಲಕ ಗ್ರಾಮೀಣ ಭಾಗದ ರೈತರ ಕಾಫಿ ತೋಟಗಳ ಮೂಲಕ ಸಂಚರಿಸುತ್ತ ಬೆಳೆ ನಾಶ ಮಾಡುತ್ತಿವೆ. ಕೆಆರ್ ಪೇಟೆಯಲ್ಲಿ ಮೊದಲಬಾರಿಗೆ ಕಾಣಿಸಿಕೊಂಡಿದ್ದ 24 ಆನೆಗಳಿರುವ ಗುಂಪನ್ನು ರೇಡಿಯೋಕಾಲರ್ ಅಳವಡಿಸಿರುವ ಬೀಟಮ್ಮ ಎಂಬ ಹೆಣ್ಣಾನೆ ಮುನ್ನಡೆಸುತ್ತಿದೆ. ಗುಂಪಿನಲ್ಲಿ ಐದಾರು ಮರಿಯಾನೆಗಳಿದ್ದು, ಇವುಗಳಿಗೆಲ್ಲ ರಕ್ಷಣ ಕವಚವಾಗಿ ಭೀಮ ಎಂಬ ಸಲಗವಿದೆ ಎಂದು ಅರಣ್ಯ ಇಲಾಖಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕೆ.ಆರ್.ಪೇಟೆಯ ಮೂಲಕ ಕದ್ರಿಮಿದ್ರಿ ಹಾಗೂ ಆಂಬರ್‍ವ್ಯಾಲಿ ಸಮೀಪದ ಕುರುಚಲು ಕಾಡಿನಲ್ಲಿ ಉಳಿದುಕೊಂಡಿದ್ದ ಆನೆಗಳನ್ನು ಊರಿನತ್ತ ಬಾರದಂತೆ ತಡೆಯಲು ಪೊಲೀಸರ ನೆರವನ್ನು ಪಡೆದುಕೊಳ್ಳಲಾಗವಿತ್ತು. 500ಕ್ಕೂ ಹೆಚ್ಚು ಜನ ಇವುಗಳನ್ನು ಕಾಡಿನತ್ತ ಹಿಮ್ಮಟ್ಟಿಸುವ ಕಾರ್ಯಕ್ಕೆ ಮುಂದಾಗಿದ್ದರು. ಸುತ್ತಮುತ್ತಲ ಗ್ರಾಮಗಳ ಶಾಲೆಗಳಿಗೆ ರಜೆ ಘೋಷಿಸಿದ್ದಲ್ಲದೆ. ಜಿಲ್ಲಾಡಳಿತ 144 ಸೆಕ್ಷನ್‍ಅನ್ನು 11ಹಳ್ಳಿಗಳಲ್ಲಿ ಜಾರಿಗೊಳಿಸಿತ್ತು. ಪಟಾಕಿ ಸಿಡಿಸಿದ ಕಾರಣದಿಂದ ಅಲ್ಲಿಂದ ತಾಲೂಕಿನ ಕೆಸವಿನಮನೆ ಮತ್ತು ಆಲದಗುಡ್ಡೆ ಮಧ್ಯೆ ಇರುವ ಗುಡ್ಡದಲ್ಲಿ ಉಳಿದುಕೊಂಡು ರಾತ್ರಿ ವೇಳೆ ಪಕ್ಕದ ತೋಟಗಳಿಗೆ ನುಗ್ಗಿ ಬಾಳೆ, ಕಾಫಿ ಬೆಳೆ ನಾಶ ಮಾಡಿದ್ದ ಆನೆಗಳು ಅಲ್ಲಿಂದ ಅಡಕಲ್ ಎಸ್ಟೇಟ್‍ನಲ್ಲಿ ವಾಸ್ತವ್ಯ ಹೂಡಿದ್ದವು. ನಂತರ ಗೌತಮೇಶ್ವರ ಮೂಲಕ ಕೋಡುವಳ್ಳಿ, ಹಂಚರವಳ್ಳಿ ಆಣೂರು ಮೂಲಕ ಬೆಣ್ಣೆಕಲ್ಲುಗುಡ್ಡದಲ್ಲಿ ಬೀಡುಬಿಟ್ಟಿದ್ದವು. ಸದ್ಯ ಕಟ್ರುಮನೆ, ತಳಿಹಳ್ಳಿ ತಲುಪಿಸಿ, ಅಲ್ಲಿಂದ ಹಿಂದುರುಗಿದ ಕಾಡಾನೆಗಳು ಈಗ ಚಿಕ್ಕೊಳಲೆಯಲ್ಲಿ ಬೀಡು ಬಿಟ್ಟಿವೆ.

ಕಾಫಿನಾಡಿಗೆ ಲಗ್ಗೆ ಇಟ್ಟಿರುವ 25 ಆನೆಗಳ ಗುಂಪನ್ನು ಹಿಮ್ಮೆಟ್ಟಿಸಲು ಇಲಾಖೆ ಅಧಿಕಾರಿಗಳು ನಾಗರಹೊಳೆ ಮತ್ತು ದುಬಾರೆ ಆನೆಶಿಬಿರಗಳಿಂದ ಒಟ್ಟು 8 ಆನೆಗಳನ್ನು ಕರೆತಂದಿದ್ದು, ಈ ಆನೆಗಳನ್ನು ಮತ್ತಾವರ ಅರಣ್ಯದಲ್ಲಿ ಲಂಗರು ಹಾಕಲಾಗಿತ್ತು. ಕಾಡಾನೆಗಳು ಸಾಕಾನೆಗಳು ಬೀಡುಬಿಟ್ಟಿದ್ದ ಜಾಗದತ್ತ ಸುಳಿದಾಡಿರುವ ವಿಷಯ ತಿಳಿದ ಅರಣ್ಯಾಧಿಕಾರಿಗಳು ಅವುಗಳನ್ನು ಮೂಡಿಗೆರೆ ತಾಲೂಕಿಗೆ ಸ್ಥಳಾಂತರಿಸಿದ್ದರು. ಈಗ ಅವುಗಳು ಬಂದ ಸ್ಥಳಕ್ಕೆ ಕಳುಹಿಸಿದ್ದಾರೆ.

ಕಾಡಾನೆಗಳು ನಾಡಿನತ್ತ ಮುಖ ಮಾಡಲು ಆನೆಪಥ ನಾಶವಾಗಿರುವುದೇ ಕಾರಣವೆಂದು ಪರಿಸರ ಆಸಕ್ತರು ಹೇಳುತ್ತಾರೆ. ಹೊಸಜಾಗಕ್ಕೆ ಹೋಗಲು ಮನಸ್ಸಿಲ್ಲದ ಕಾಡಾನೆಗಳ ಗುಂಪು ತಾವು ಬಂದಿರುವ ಮಡಿಕೇರಿ ಕಾಡಿನತ್ತ ಮುಖಮಾಡಿವೆ. ಬಿಕ್ಕೋಡು,ಬೇಲೂರು ಸಕಲೇಶಪುರ, ಸೋಮವಾರಪೇಟೆ, ಕುಶಾಲನಗರಕ್ಕೆ ಮರಳುವ ಸಾಧ್ಯತೆಗಳಿವೆ ಎಂದು ಅರಣ್ಯ ಇಲಾಖಾಧಿಕಾರಿಗಳು ಹೇಳುತ್ತಿದ್ದಾರೆ.

ಸದ್ಯ ಚಿಕ್ಕೊಳಲೆ ತೋಟದ ಪಕ್ಕದ ಕೆರೆಯ ಬಳಿ ಆನೆಗಳು ಬೀಡುಬಿಟ್ಟಿರುವ ಆನೆಗಳ ಚಲನವಲನಗಳ ಬಗ್ಗೆ ಆನೆನಿಗ್ರಹ ಪಡೆಯ ಸಿಬ್ಬಂದಿ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಗಮನಿಸುತ್ತಿದ್ದಾರೆ. ಗುಂಪನ್ನು ಮುನ್ನೆಡೆಸುತ್ತಿರುವ ಬೀಟಮ್ಮ ಆನೆಗೆ ರೇಡಿಯೋ ಕಾಲರ್ ಅಳವಡಿಸಿರುವುದರಿಂದ ಅವುಗಳ ಲೋಕೇಶನ್ ಬಹುಬೇಗ ಅರಣ್ಯ ಅಧಿಕಾರಿಗೆ ಸಿಗುತ್ತಿದೆ. ಈ ಗುಂಪಿನಲ್ಲಿ ಮರಿಆನೆಗಳು ಇರುವುದರಿಂದ ಆನೆಗಳನ್ನು ಸೆರೆಹಿಡಿಯುವುದಕ್ಕಿಂತ ಬಂದ ದಾರಿಯಲ್ಲೆ ಕಾಡಿಗೆ ಹಿಮ್ಮೆಟ್ಟಿಸುವುದೇ ಸೂಕ್ತ ಎಂದು ಅಧಿಕಾರಿಗಳು ಅಭಿಪ್ರಾಯಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News