ಬಿಜೆಪಿ ಪಕ್ಷದ ಶುದ್ಧೀಕರಣಕ್ಕಾಗಿ ಸಾಯುವ ತನಕ ಹೋರಾಟ ನಡೆಸುತ್ತೇನೆ: ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ

Update: 2024-05-30 12:46 GMT

ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ

ಚಿಕ್ಕಮಗಳೂರು: ರಾಜ್ಯದಲ್ಲಿ ಭಾರತೀಯ ಜನತಾ ಪಾರ್ಟಿಗೆ ಅಪ್ಪ, ಮಕ್ಕಳೇ ನಾಯಕರಾಗಿದ್ದಾರೆಯೇ ಹೊರತು ಇಲ್ಲಿ ಸಾಮೂಹಿಕ ನಾಯಕತ್ವ ಎಂಬುದು ಇಲ್ಲವೇ ಇಲ್ಲ. ಅಪ್ಪ, ಮಕ್ಕಳಿಂದಾಗಿ ಬಿಜೆಪಿ ಒಡೆದ ಮನೆಯಾಗುತ್ತಿದೆ. ಬಿಜೆಪಿ ಪಕ್ಷವನ್ನು ಶುದ್ಧೀಕರಣ ಮಾಡದೇ ಬಿಡುವುದಿಲ್ಲ. ನಾನು ಸಾಯುವ ತನಕ ಬಿಜೆಪಿ ಪಕ್ಷವನ್ನು ಶುದ್ಧೀಕರಣ ಮಾಡುವ ಕೆಲಸ ನಡೆಯಲಿದೆ, ಅಪ್ಪ, ಮಕ್ಕಳಿಂದ ಪಕ್ಷವನ್ನು ಮುಕ್ತಗೊಳಿಸದೇ ಬಿಡುವುದಿಲ್ಲ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಗುಡುಗಿದ್ದಾರೆ.

ಗುರುವಾರ ನಗರದ ಪ್ರೆಸ್‍ಕ್ಲಬ್‍ನಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸದ್ಯ ರಾಜ್ಯದ ಬಿಜೆಪಿ ಪಕ್ಷದ ನಾಯಕತ್ವ ಯಡಿಯೂರಪ್ಪ ಮತ್ತು ಅವರ ಮಗ ವಿಜಯೇಂದ್ರ ಅವರ ಕೈಯಲ್ಲಿದೆ. ಅಪ್ಪ ಮಕ್ಕಳಿಂದಾಗಿ ರಾಜ್ಯದಲ್ಲಿ ಪಕ್ಷ ಕಟ್ಟಿದವರಿಗೆ ಬೆಲೆ ಸಿಗುತ್ತಿಲ್ಲ, ಹಿಂದುತ್ವ ಬಿಜೆಪಿಯ ಸಿದ್ಧಾಂತವಾಗಿದೆ. ಈ ಸಿದ್ಧಾಂತಕ್ಕಾಗಿ ಪ್ರಾಣ ಕೊಟ್ಟವರು, ಹೋರಾಟ ಮಾಡಿದವರನ್ನು ಅಪ್ಪ, ಮಕ್ಕಳು ತುಳಿಯುತ್ತಿದ್ದಾರೆ. ಪಕ್ಷಕ್ಕಾಗಿ ದುಡಿದವರಿಗೆ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ಸಿಗುತ್ತಿಲ್ಲ. ಅಪ್ಪ, ಮಕ್ಕಳಿಂದ ಬಿಜೆಪಿ ಪಕ್ಷವನ್ನು ಮುಕ್ತ ಮಾಡುವವರೆಗೂ ವಿರಮಿಸುವುದಿಲ್ಲ ಎಂದರು.

ಕೇಂದ್ರದಲ್ಲಿ ಮೋದಿ ಮತ್ತು ಅಮಿತ್‍ ಶಾ ಕಾಂಗ್ರೆಸ್ ಮುಕ್ತ ಭಾರತ ಮಾಡಲು ಹಗಲು ರಾತ್ರಿ ಶ್ರಮಿಸುತ್ತಿದ್ದಾರೆ. ಹಿಂದುತ್ವಕ್ಕಾಗಿ ಬದುಕುತ್ತಿದ್ದಾರೆ, ಆದರೆ ಇಲ್ಲಿ ಅಪ್ಪ, ಮಕ್ಕಳು ಪಕ್ಷದ ಸಿದ್ಧಾಂತಕ್ಕೆ ತಿಲಾಂಜನ ಇಡುತ್ತಿದ್ದಾರೆ, ಬಿಜೆಪಿ ಮುಕ್ತ ಕರ್ನಾಟಕ ಮಾಡಲು ಹೊರಟಿದ್ದಾರೆ ಎಂದ ಅವರು, ಜಗದೀಶ್ ಶೆಟ್ಟರ್ ಅವರು ಪಕ್ಷ ತೊರೆದು ಕಾಂಗ್ರೆಸ್ ಸೇರಿದ್ದರು. ನಂತರ ಟಿಕೆಟ್‍ನ ಆಸೆಯಿಂದ ಮತ್ತೆ ಕಾಂಗ್ರೆಸ್ ತೊರೆದಿದ್ದರು. ಪಕ್ಷಾಂತರಿಗಳಿಗೆ ಅಪ್ಪ, ಮಕ್ಕಳು ಮಣೆಹಾಕುತ್ತಿದ್ದಾರೆ, ಆದರೆ ಪಕ್ಷಕ್ಕಾಗಿ, ಸಿದ್ಧಾಂತಕ್ಕಾಗಿ ಹೋರಾಟ ಮಾಡಿದ ಬಿಜೆಪಿ ನಿಷ್ಠಾವಂತರಿಗೆ ಅಪ್ಪ, ಮಕ್ಕಳು ಮಣೆ ಹಾಕುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನಾನು ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಅಡಿಯಲ್ಲಿ ಸಂಘಟನೆಗೆ ಒತ್ತು ನೀಡಿದಾಗ ಇದೇ ಯಡಿಯೂರಪ್ಪ ಅದಕ್ಕೆ ಅಡ್ಡಿ ಮಾಡಿದರು. ಈ ವಿಚಾರವನ್ನು ಕೇಂದ್ರದ ವರಿಷ್ಠರ ಬಳಿ ಚರ್ಚಿಸಿದಾಗ ಅವರು ನನಗೆ ಸಮ್ಮತಿ ನೀಡಿದ್ದರು, ಆದರೆ ಯಡಿಯೂರಪ್ಪನ ಮಾತು ಕೇಳಿ ವರಿಷ್ಠರೂ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಕಟ್ಟುವುದು ಬೇಡ ಅಂದಿದ್ದರು. ನಾನು ಇವರ ವಿರುದ್ಧ ತಿರುಗಿ ಬೀಳಲು ಕಾರಣ ಏನೆಂದರೆ, ಯಡಿಯೂರಪ್ಪ ಹೇಳಿದ್ದೆಲ್ಲ ಸತ್ಯ ಎಂದು ಕೇಂದ್ರದ ನಾಯಕರು ನಂಬಿದ್ದಾರೆ, ಅಪ್ಪ, ಮಕ್ಕಳು ಸರಿ ಇಲ್ಲ, ಅವರ ಮಾತೂ ಸರಿ ಇಲ್ಲ ಎಂಬುದು ಕೇಂದ್ರದ ನಾಯಕರಿಗೆ ಗೊತ್ತಾಗಬೇಕು ಎಂಬುದು ನನ್ನ ಇಚ್ಛೆಯಾಗಿದೆ. ಅಪ್ಪ ಮಕ್ಕಳಿಂದಾಗಿ ರಾಜ್ಯದಲ್ಲಿ ಬಿಜೆಪಿ ಹಾಳಾಗುತ್ತೆ, ಬಿಜೆಪಿ ಶುದ್ಧೀಕರಣ ಆಗಲೇಬೇಕು, ರಾಜ್ಯದ ಬಿಜೆಪಿಯಲ್ಲಿ ಅಪ್ಪ, ಮಕ್ಕಳ ನಾಯಕತ್ವ ಹೋಗಿ ಸಾಮೂಹಿಕ ನಾಯಕತ್ವ ಬರಬೇಕು ಎಂದರು.

ಯಡಿಯೂರಪ್ಪ ಲಿಂಗಾಯತ ಸಮುದಾಯದ ನಾಯಕರು ಎಂಬುದು ಸತ್ಯ, ಆದರೆ ಯಡಿಯೂರಪ್ಪ ಇದ್ದರೇ ಬಿಜೆಪಿ ಕಟ್ಟಲು ಸಾಧ್ಯ ಎಂಬ ಕೇಂದ್ರ ನಾಯಕರ ಭ್ರಮೆ ಹೋಗಬೇಕು. ಅವರಂತಹ ಅನೇಕ ಲಿಂಗಾಯತ ನಾಯಕರು ಪಕ್ಷದಲ್ಲಿದ್ದಾರೆ. ಅವರೂ ಪಕ್ಷವನ್ನು ರಾಜ್ಯದಲ್ಲಿ ಕಟ್ಟಿದ್ದಾರೆ, ಅವರ ನಾಯಕತ್ವದಲ್ಲೂ ಬಿಜೆಪಿ ಪಕ್ಷವನ್ನು ಸಂಘಟಿಸಲು ಸಾಧ್ಯವಿದೆ. ಬಸವನಗೌಡ ಪಾಟೀಲ್ ಕೂಡ ಲಿಂಗಾಯತರೇ ಅವರಿಗೂ ಬಿಜೆಪಿಯ ನಾಯಕತ್ವ ವಹಿಸಿಕೊಳ್ಳುವ ಶಕ್ತಿ ಇದೆ ಎಂದ ಅವರು, ಪಾಟೀಲ್, ಸಿ.ಟಿ.ರವಿ, ರಘುಪತಿ ಭಟ್‍ರಂಹತ ಅನೇಕ ನಾಯಕರು ಬಿಜೆಪಿ ಪಕ್ಷಕ್ಕಾಗಿ ದುಡಿದಿದ್ದಾರೆ, ಆದರೆ ಇಂತಹ ನಾಯಕರನ್ನು ಅಪ್ಪ, ಮಕ್ಕಳು ಮೂಲೆಗುಂಪು ಮಾಡುತ್ತಿದ್ದಾರೆ. ಅಪ್ಪ, ಮಕ್ಕಳಿಂದಾಗಿ ರಾಜ್ಯದಲ್ಲಿ ಬಿಜೆಪಿ ನಾಶವಾಗುತ್ತಿದೆ ಎಂಬುದನ್ನು ಅರಿತವರು ನನ್ನ ಜೊತೆ ಸೇರುತ್ತಿದ್ದಾರೆ, ನನ್ನ ಹೋರಾಟಕ್ಕೆ ಬೆಂಬಲ ಕೊಡುತ್ತಿದ್ದಾರೆ, ಅಪ್ಪ, ಮಕ್ಕಳೊಂದಿಗೆ ಇರುವವರೂ ತರೆಮರೆಯಲ್ಲಿ ನನ್ನ ಹೋರಾಟಕ್ಕೆ ಪರೋಕ್ಷ ಬೆಂಬಲ ನೀಡುತ್ತಿದ್ದಾರೆ. ಇಂತಹ ಮುಖಂಡರು, ಕಾರ್ಯಕರ್ತರೊಂದಿಗೆ ಚರ್ಚಿಸಿ, ಅವರ ಅಭಿಪ್ರಾಯದಂತೆಯೇ ಶಿವಮೊಗ್ಗದಲ್ಲಿ ಲೋಕಸಭೆ ಕ್ಷೇತ್ರದ ಚುನಾವಣೆಗೆ ಸ್ಪರ್ಧಿಸಿದ್ದೇನೆ, ನನ್ನನ್ನು ಬಾವಿಗೆ ತಳ್ಳಲು ಸಾಧ್ಯವಿಲ್ಲ, ತಳ್ಳಲು ಬಂದವರೇ ಬಾವಿಗೆ ಬೀಳುತ್ತಾರೆ, ನಾನು ಸಾಯುವ ತನಕ ಪಕ್ಷದ ಶುದ್ಧೀಕರಣಕ್ಕಾಗಿ ಹೋರಾಟ ಮಾಡುತ್ತೇನೆ, ಶುದ್ಧೀಕರಣ ಮಾಡದೇ ಬಿಡುವುದಿಲ್ಲ ಎಂದು ಈಶ್ವರಪ್ಪ ಹೇಳಿದರು.

ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಮಾಜಿ ಶಾಸಕ ರಘುಪತಿ ಭಟ್ ಸ್ಪರ್ಧಿಸಿದ್ದಾರೆ, ಅವರು ಹಿಂದುತ್ವದ ಹೋರಾಟಗಾರ, ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತ, ಅವರಿಗೂ ಟಿಕೆಟ್ ತಪ್ಪಲು ಅಪ್ಪ, ಮಕ್ಕಳು ಕಾರಣ, ಈ ಬಾರಿಯ ಶಿಕ್ಷಕರ ಕ್ಷೇತ್ರದಿಂದ ಅವರು ಗೆಲ್ಲುವುದು ಖಚಿತ ಎಂದರು.

ಸುದ್ದಿಗೋಷ್ಠಿಯಲ್ಲಿ ಈಶ್ವರಪ್ಪ ಬೆಂಬಲಿಗರಾದ ಚಿಕ್ಕಮಗಳೂರು ನಗರಸಭೆ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್, ತುಡುಕೂರು ಮಂಜು, ರಾಜಶೇಖರ್, ನಯನ, ಸೋಮೇಶ್, ರಾಜಕುಮಾರ್, ಅಕ್ಕಿ ವೆಂಕಟೇಶ್ ಮತ್ತಿತರರು ಉಪಸ್ಥಿತರಿದ್ದರು.


Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News