ಚಿತ್ರದುರ್ಗ | ಪಿಎಸ್ಸೈ, ಮಧುಗಿರಿ ಬಿಜೆಪಿ ಅಧ್ಯಕ್ಷನ ನಡುವೆ ಹೊಡೆದಾಟ; ವೀಡಿಯೊ ವೈರಲ್

ಚಿತ್ರದುರ್ಗ: ಚಿತ್ರದುರ್ಗ ಪಿಎಸ್ಸೈ ಹಾಗೂ ತುಮಕೂರು ಜಿಲ್ಲೆಯ ಮಧುಗಿರಿ ಬಿಜೆಪಿ ಘಟಕದ ಅಧ್ಯಕ್ಷನ ನಡುವೆ ಹೊಡೆದಾಟ ನಡೆದಿರುವ ಘಟನೆ ಶುಕ್ರವಾರ ತಡ ರಾತ್ರಿ ವರದಿಯಾಗಿದೆ.
ಘಟನೆಯೆ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ತುರುವನೂರು ರಸ್ತೆಯ ಹೊಟೇಲ್ ಬಳಿ ಮಧುಗಿರಿ ಬಿಜೆಪಿ ಅಧ್ಯಕ್ಷ ಹನುಮಂತೇಗೌಡ ಮತ್ತು ಸಹಚರರು ಗುಂಪು ಕಟ್ಟಿಕೊಂಡು ರಾತ್ರಿ ವೇಳೆ ಮಾತುಕತೆ ನಡೆಸುತ್ತಿದ್ದರು. ರಾತ್ರಿ ಗಸ್ತಿನಲ್ಲಿದ್ದ ಪಿಎಸ್ಸೈ ಗಾದಿ ಲಿಂಗಪ್ಪನವರು ಇದನ್ನು ಪ್ರಶ್ನಿಸಿದ್ದರೆನ್ನಲಾಗಿದೆ. ಈ ವೇಳೆ ಹನುಮಂತೇಗೌಡ ಹಾಗೂ ಪಿಎಸ್ಸೈ ನಡುವೆ ಮಾತಿಗೆ ಮಾತು ಬೆಳೆದಿದ್ದು, ಇಬ್ಬರ ನಡುವೆಯೂ ಹೊಡೆದಾಟ ನಡೆದಿದೆ. ಅವ್ಯಾಚ್ಯ ಶಬ್ದದಿಂದ ನಿಂದಿಸಿದ್ದಾರೆನ್ನಲಾಗಿದೆ.
ಹನುಮಂತೇಗೌಡ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಪಿಎಸ್ಸೈ ರಾತ್ರಿಯೇ ದೂರು ದಾಖಲಿಸಿದ್ದು, ದೂರಿನ ಆಧಾರದಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. ಹನುಮಂತೇಗೌಡ ಅವರೂ ಪೊಲೀಸ್ ಅಧಿಕಾರಿಯೇ ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.
ಘಟನೆಯಲ್ಲಿ ಇಬ್ಬರೂ ಗಾಯವಾಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿದು ಬಂದಿದೆ.
ಚಿತ್ರದುರ್ಗ ಪಿಎಸ್ಸೈ ಅಮಾನತು ಮಾಡದಿದ್ದರೆ ಹೋರಾಟ : ಬಿಜೆಪಿ ಎಚ್ಚರಿಕೆ
ಚಿತ್ರದುರ್ಗದ ಪಿಎಸ್ಸೈ ಗಾದಿಲಿಂಗಪ್ಪ ಅವರನ್ನು ರಾಜ್ಯ ಪೊಲೀಸ್ ಮಹಾನಿರ್ದೇಶಕರು ಈ ಕೂಡಲೇ ಅಮಾನತಿನಲ್ಲಿಡದಿದ್ದರೆ ಬಿಜೆಪಿಯು ನಾಗರಿಕರೊಂದಿಗೆ ಸೇರಿ ಹೋರಾಟ ನಡೆಸುವುದು ಅನಿವಾರ್ಯವಾದೀತು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಎಚ್ಚರಿಸಿದ್ದಾರೆ.
ಶನಿವಾರ ಎಕ್ಸ್‌ನಲ್ಲಿ ಪೋಸ್ಟ್ ಹಾಕಿರುವ ಅವರು, ‘ಚಿತ್ರದುರ್ಗದಲ್ಲಿ ನಮ್ಮ ಪಕ್ಷದ ಮಧುಗಿರಿ ಜಿಲ್ಲಾಧ್ಯಕ್ಷ ಹನುಮಂತೇಗೌಡ ಅವರ ಮೇಲೆ ಪಿಎಸ್ಸೈ ಗಾದಿಲಿಂಗಪ್ಪ ಹಲ್ಲೆ ನಡೆಸಿ ಗೂಂಡಾಗಿರಿ ಪ್ರದರ್ಶಿಸಿದ್ದು ಇದನ್ನು ಬಿಜೆಪಿ ಅತ್ಯುಗ್ರವಾಗಿ ಖಂಡಿಸುತ್ತದೆ. ನಾಗರಿಕ ಸಮಾಜದಲ್ಲಿ ಶಾಂತಿ ಸಂರಕ್ಷಿಸಲಾಗದ ಅಧಿಕಾರಿಗಳು ಮಧ್ಯರಾತ್ರಿಯಲ್ಲಿ ತಮ್ಮ ಪೊಲೀಸ್ ರೌದ್ರಾವತಾರ ಪ್ರದರ್ಶಿಸಲು ಹೊರಟಿದ್ದಾರೆ. ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸುವ ಮುನ್ನ ಅವರ ಸಾಮಾಜಿಕ ಸ್ಥಾನಮಾನವನ್ನೂ ಲೆಕ್ಕಿಸದೆ ಗೂಂಡಾಗಿರಿ ಪ್ರದರ್ಶಿಸುವುದು ಪೋಲಿಸ್ ಇಲಾಖೆಯ ದಕ್ಷತೆಯ ಘನತೆಯನ್ನು ಕಳೆದಂತೆ’ ಎಂದು ಅವರು ದೂರಿದ್ದಾರೆ.