ಭದ್ರಾ ಮೇಲ್ದಂಡೆ ಕಾಮಗಾರಿಗಳು ಸ್ಥಗಿತವಾಗಿಲ್ಲ; ಗುತ್ತಿಗೆದಾರಿಗೆ ಈ ವರ್ಷ 800 ಕೋಟಿ ಪಾವತಿಸಲಾಗಿದೆ : ಸಿಎಂ ಸಿದ್ದರಾಮಯ್ಯ

Update: 2025-01-23 20:47 IST
ಭದ್ರಾ ಮೇಲ್ದಂಡೆ ಕಾಮಗಾರಿಗಳು ಸ್ಥಗಿತವಾಗಿಲ್ಲ; ಗುತ್ತಿಗೆದಾರಿಗೆ ಈ ವರ್ಷ 800 ಕೋಟಿ ಪಾವತಿಸಲಾಗಿದೆ : ಸಿಎಂ ಸಿದ್ದರಾಮಯ್ಯ
  • whatsapp icon

ಚಿತ್ರದುರ್ಗ: ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿಗಳು ಸ್ಥಗಿತವಾಗಿಲ್ಲ. ಆದರೆ, ಶೀಘ್ರಗತಿಯಲ್ಲಿ ಕಾಮಗಾರಿಗಳು ನಡೆಯುತ್ತಿಲ್ಲ. ಗುತ್ತಿಗೆದಾರಿಗೆ ಈ ವರ್ಷ 800 ಕೋಟಿ ರೂ. ಪಾವತಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಗುರುವಾರ ಜಿಲ್ಲೆಯ ವಾಣಿವಿಲಾಸ ಸಾಗರಕ್ಕೆ ಬಾಗಿನ ಅರ್ಪಿಸಿದ ಬಳಿಕ ಮಾತನಾಡಿದ ಅವರು, ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ರೂ.ಗಳನ್ನು ನೀಡುವುದಾಗಿ 2023-24ರ ಕೇಂದ್ರ ಬಜೆಟ್‍ನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದರು. ಆ ವೇಳೆ ಸಿಎಂ ಆಗಿದ್ದ ಬಸವರಾಜ ಬೊಮ್ಮಾಯಿಯವರು ತಮ್ಮ ಬಜೆಟ್ ನಲ್ಲಿಯೂ ಇದನ್ನು ಪುನರುಚ್ಚರಿಸಿದ್ದರು.

ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಮಾಡುವುದಾಗಿ ಹೇಳಿದ್ದರು. ಇಷ್ಟು ವರ್ಷಗಳಾದರೂ ಒಂದು ಪೈಸೆಯೂ ರಾಜ್ಯಕ್ಕೆ ಬಂದಿಲ್ಲ. ಸರಕಾರ ಅನೇಕ ಬಾರಿ ಕೇಂದ್ರಕ್ಕೆ ಮನವಿಯನ್ನು ನೀಡಿದ್ದು, ಪ್ರಧಾನಿ, ನಿರ್ಮಲಾ ಸೀತಾರಾಮನ್, ಅಮಿತ್ ಶಾ ಅವರನ್ನೂ ಭೇಟಿ ಮಾಡಲಾಗಿದೆ. ಅವರೇ ಬಜೆಟ್‍ನಲ್ಲಿ ಘೋಷಣೆ ಮಾಡಿರುವುದನ್ನು ಕೊಡಿ ಎಂದರೂ ಬಿಡುಗಡೆ ಮಾಡಿಲ್ಲ ಎಂದು ದೂರಿದರು.

ನಬಾರ್ಡ್‍ನಲ್ಲಿ ರಾಜ್ಯಕ್ಕೆ ಬರಬೇಕಾದ ಸಾಲದ ಮೊತ್ತ ಕಡಿತವಾಗಿರುವ ಹಿನ್ನೆಲೆಯಲ್ಲಿ ಇತ್ತೀಚೆಗೆ ನಿರ್ಮಲಾ ಸೀತಾರಾಮನ್‍ರನ್ನು ಭೇಟಿ ಮಾಡಿದಾಗಲೂ ಈ ವಿಷಯವನ್ನು ಪ್ರಸ್ತಾಪಿಸಲಾಯಿತು. ಆದರೆ ಇಂದಿನವರೆಗೂ ಒಂದು ರೂಪಾಯಿ ಬಿಡುಗಡೆಯಾಗಿಲ್ಲ. ಈ ಬಜೆಟ್‍ನಲ್ಲಿಯಾದರೂ ಹಣ ಮೀಸಲಿಟ್ಟು ಬಿಡುಗಡೆ ಮಾಡಬೇಕೆಂದು ಕೋರಿ ಕೇಂದ್ರಕ್ಕೆ ಬರೆದು ಒತ್ತಡ ಹೇರಲಾಗುವುದು ಎಂದರು.

ತಡೆಯಲು ಪ್ರಯತ್ನ: ಹೊಸದುರ್ಗ ತಾಲೂಕಿನ ಹಿನ್ನೀರಿನಲ್ಲಿ ರೈತರ ಜಮೀನು ಮುಳುಗಡೆಯಾಗದ ರೀತಿಯಲ್ಲಿ ತಡೆಯುವ ಪ್ರಯತ್ನವನ್ನು ಸರಕಾರ ಮಾಡಲಿದೆ. ವಾಣಿವಿಲಾಸ ಸಾಗರ ಅಣೆಕಟ್ಟೆಗೆ 115 ವರ್ಷಗಳ ಇತಿಹಾಸವಿದೆ. ಇಷ್ಟು ವರ್ಷಗಳಲ್ಲಿ ಈ ಅಣೆಕಟ್ಟು ಕೋಡಿ ಬಿದ್ದಿರುವುದು ಮೂರು ಬಾರಿ ಮಾತ್ರ. ಅಂದರೆ 1933, 2022 ಹಾಗೂ 2025ರ ಜ.14ರಲ್ಲಿ ಕೋಡಿ ಬಿದ್ದಿದೆ. ಕರ್ನಾಟಕದ ಮೊದಲನೇ ಜಲಾಶಯ ಇದಾಗಿದ್ದು, ನಾಲ್ವಡಿ ಕೃಷ್ಣರಾಜ ಒಡೆಯರ್‌  ತಾಯಿ ಸಂಪಾಜಮ್ಮಣಿಯವರ ಹೆಸರಿನಲ್ಲಿ ಕಟ್ಟಿಸಿದ್ದು, ವಾಣಿವಿಲಾಸ ಸಾಗರ ಎಂದು ಕರೆಯಲಾಗಿದೆ. 1898ನೆ ಇಸವಿಯಲ್ಲಿ ಪ್ರಾರಂಭವಾಗಿ 1907ರಲ್ಲಿ ಅಣೆಕಟ್ಟು ನಿರ್ಮಾಣ ಮುಕ್ತಾಯವಾಯಿತು. 30 ಟಿಎಂಸಿ ನೀರು ಶೇಖರಣೆ ಮಾಡುವ ಸಾಮರ್ಥ್ಯ ವಿರುವ ಅಣೆಕಟ್ಟು 33 ಸಾವಿರ ಎಕರೆಗೆ ನೀರುಣಿಸುತ್ತದೆ ಎಂದು ವಿವರಿಸಿದರು.

ಈ ಜಿಲ್ಲೆಯ ಅನೇಕ ತಾಲೂಕುಗಳು ಬರಪೀಡಿತ ಎಂದು ಆಗ ಹಳೇ ಮೈಸೂರಿನಲ್ಲಿ ರಾಜರ ಪ್ರತಿನಿಧಿಯಾಗಿದ್ದ ಸಂಪಾಜಮ್ಮಣ್ಣಿಯವರು ಈ ಕೆರೆಯನ್ನು ನಿರ್ಮಾಣ ಮಾಡಿದರು. ಈ ಭಾಗದಲ್ಲಿ ಮಳೆ ಕಡಿಮೆಯಿರುವುದರಿಂದ ಅಣೆಕಟ್ಟು ನಿರ್ಮಿಸಿದರೆ ಈ ಭಾಗದ ಜನರಿಗೆ ನೀರು ದೊರೆಯಲಿದೆ ಎಂಬ ಉದ್ದೇಶದಿಂದ ಅವರ ಒಡವೆಗಳನ್ನು ಅಡವಿಟ್ಟು ಸುಮಾರು 45ಲಕ್ಷ ರೂ.ಗಳನ್ನು ವೆಚ್ಚ ಮಾಡಿದ್ದರು ಎಂದು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News