ವಿಕ್ಷಿಪ್ತ ಹಾರರ್ ಅನುಭವ ಕೊಡುವ ‘ಗೆಟ್ ಔಟ್’

Update: 2024-01-11 05:16 GMT

2017ರಲ್ಲಿ ತೆರೆಕಂಡು ಜಗತ್ತಿನಾದ್ಯಂತ ಸಿನಿ ರಸಿಕರ ಗಮನ ಸೆಳೆದ ಅಮೆರಿಕನ್ ಸೈಕಾಲಜಿಕಲ್ ಹಾರರ್ ಚಿತ್ರ ‘ಗೆಟ್ ಔಟ್’.

ಜೋರ್ಡನ್ ಪೀಲೆ ಚೊಚ್ಚಲ ನಿರ್ದೇಶನದ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿದವರು ಡೇನಿಯಲ್ ಕಾಲುಯಾ ಹಾಗೂ ಅಲಿಸನ್ ವಿಲಿಯಮ್ಸ್. ತನ್ನ ಮೂವತ್ತೆರಡನೇ ವಯಸ್ಸಿನಲ್ಲಿ ಆಸ್ಕರ್ ಪ್ರಶಸ್ತಿಯನ್ನು ತನ್ನ ಬಗಲಿಗೇರಿಸಿಕೊಂಡ ಕಾಲುಯಾ ಈ ಪ್ರಶಸ್ತಿ ಮುಡಿಗೇರಿಸಿಕೊಂಡ ಏಳನೇ ಅತ್ಯಂತ ಕಿರಿಯ ನಟ ಎಂಬ ಪ್ರಶಂಸೆಗೆ ಭಾಜನರಾದವರು. ಗೆಟ್ ಔಟ್ ಚಿತ್ರದ ಮನೋಜ್ಞ ಅಭಿನಯಕ್ಕೂ ನಟ ಕಾಲುಯಾ ಆಸ್ಕರ್ ಪ್ರಶಸ್ತಿಯ ಉತ್ತಮ ನಟ ವಿಭಾಗದಲ್ಲಿ ನಾಮ ನಿರ್ದೇಶನಗೊಂಡಿದ್ದರು.

ಆಫ್ರಿಕನ್ ಮೂಲದ ಅಮೆರಿಕನ್ ಕಪ್ಪುವರ್ಣೀಯ ಪ್ರಜೆ ತನ್ನ ಬಿಳಿಯ ವರ್ಣೀಯ ಗರ್ಲ್ ಫ್ರೆಂಡ್ ಜೊತೆ ವಾರಾಂತ್ಯದಲ್ಲಿ ಊರಾಚೆಗಿನ ಗ್ರಾಮದಲ್ಲಿರುವ ಆಕೆಯ ಪೋಷಕರ ಮನೆಗೆ ಪ್ರಯಾಣಿಸುವ ದೃಶ್ಯದಿಂದ ಪ್ರಾರಂಭವಾಗುವ ಚಿತ್ರ ಮೆಲ್ಲಗೆ ಕಾವು ಪಡೆಯುತ್ತಾ, ವೇಗ ಹೆಚ್ಚಿಸಿಕೊಳ್ಳುತ್ತಾ ಹಾರರ್ ಮೋಡಿಗೆ ಮಗ್ಗುಲು ಬದಲಾಯಿಸಿ ಪ್ರೇಕ್ಷಕರನ್ನು ಭಯದ ಕಡಲಿಗೆ ನೂಕಿ ಬಿಡುತ್ತದೆ. ಈ ಚಿತ್ರದಲ್ಲಿನ ಹಾರರ್ ಎಲಿಮೆಂಟ್ ಯಾವುದೇ ಭೂತ, ಪ್ರೇತ, ಪಿಶಾಚಿಯಲ್ಲ. ಅಪರಿಚಿತ ಜನರ ಅಸಹಜ ನಡವಳಿಕೆ, ಅಸಹಜ ಸನ್ನಿವೇಶಗಳು, ನಾಯಕ ನಟ ಎದುರಿಸುವ ಸಂದಿಗ್ಧ ಪರಿಸ್ಥಿತಿಗಳೊಂದಿಗೆ ಚಿತ್ರ ಪ್ರೇಕ್ಷಕನ ಎದೆಯೊಳಗೆ ಭಯದ ಅಲೆಗಳನ್ನು ಎಬ್ಬಿಸುತ್ತದೆ. ಅದಕ್ಕೆ ಪೂರಕವಾಗಿ ಮೈಖೆಲ್ ಅಬೆಲ್ಸ್ ರವರ ಸಂಗೀತ, ಟಾಬಿ ಒಲಿವರ್‌ರವರ ಛಾಯಾಗ್ರಹಣ, ಗ್ರೆಗೊರಿ ಪ್ಲಾಟ್‌ಕಿನ್‌ರವರ ಎಡಿಟಿಂಗ್ ನೋಡುಗನ ಭಯವನ್ನು ಇಮ್ಮಡಿಗೊಳಿಸುವಲ್ಲಿ ಯಶಸ್ವಿಯಾಗಿದೆ. ಕೊನೆಯವರೆಗೂ ಉಸಿರು ಬಿಗಿಹಿಡಿದು ನೋಡುವಂತೆ ಚಿತ್ರದ ಕತೆ ಹೆಣೆಯಲಾಗಿದೆ.

ಪಕ್ಕಾ ಕಮರ್ಷಿಯಲ್ ಕೆಟಗರಿಯಲ್ಲಿ ಗುರುತಿಸಲ್ಪಡುವ ಪ್ರಪಂಚದಾದ್ಯಂತ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದ ಈ ಚಿತ್ರ ಜಾಗತಿಕ ಮನ್ನಣೆಗೆ ಪಾತ್ರವಾಗಿದ್ದಲ್ಲದೇ 90ನೇ ಅಕಾಡಮಿ ಅವಾರ್ಡ್‌ನ ಉತ್ತಮ ಚಿತ್ರ, ಉತ್ತಮ ಚಿತ್ರಕಥೆ, ಉತ್ತಮ ನಿರ್ದೇಶಕ, ಉತ್ತಮ ನಟ ವಿಭಾಗಕ್ಕೆ ನಾಮ ನಿರ್ದೇಶನಗೊಂಡಿದ್ದು, ಉತ್ತಮ ಚಿತ್ರಕಥೆ ಪ್ರಶಸ್ತಿಯನ್ನು ತನ್ನ ಚೊಚ್ಚಲ ಪ್ರಯತ್ನದಲ್ಲೇ ಪಡೆದುಕೊಳ್ಳುವಲ್ಲಿ ನಿರ್ದೇಶಕ ಪೀಲೆ ಸಫಲರಾಗಿದ್ದಾರೆ. ಅಲ್ಲದೆ ಚಿತ್ರದಲ್ಲಿನ ತನ್ನ ಅಮೋಘ ಅಭಿನಯಕ್ಕೆ ನಟ ಕಾಲುಯಾ ಹಲವಾರು ಅಂತರ್‌ರಾಷ್ಟ್ರೀಯ ಪ್ರಶಸ್ತಿಗಳಿಗೆ ಪಾತ್ರರಾಗಿದ್ದಾರೆ. ಖಂಡಿತಾ ಥ್ರಿಲ್ಲರ್ ಪ್ರೇಮಿಗಳು ನೋಡಲೇಬೇಕಾದ ಚಿತ್ರ ಗೆಟ್ ಔಟ್..

ಚಿತ್ರ ಅಮೆಝಾನ್ ಪ್ರೈಮ್‌ನಲ್ಲಿ ಸಬ್ ಟೈಟಲ್‌ನೊಂದಿಗೆ ಹಾಗೂ ಹಿಂದಿ ಡಬ್ಬಿಂಗ್‌ನಲ್ಲಿ ಲಭ್ಯವಿದೆ.

ಚಿತ್ರದ ರೇಟಿಂಗ್

IMDb -7.8/10

Rotten Tomatoes-8.30/10.

Censor certificate- A

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಸಲೀಂ ಅಬ್ಬಾಸ್ ವಳಾಲು

contributor

Similar News