ಶ್ರೀದೇವಿಯ 60ನೇ ಜನ್ಮದಿನದಂದು ಡೂಡಲ್ ಗೌರವ ಸಲ್ಲಿಸಿದ ಗೂಗಲ್

Update: 2023-08-13 07:01 GMT

ನಟಿ ಶ್ರೀದೇವಿ | Photo: google.com

ಹೊಸ ದಿಲ್ಲಿ: ನಟಿ ಶ್ರೀದೇವಿಯ 60ನೇ ಜನ್ಮದಿನಾಚರಣೆಯ ಇಂದು (ಆಗಸ್ಟ್ 13) ಗೂಗಲ್ ತನ್ನ ಸೃಜನಾತ್ಮಕ ಡೂಡಲ್ ಮೂಲಕ ಗೌರವ ಸಲ್ಲಿಸಿದೆ. ಈ ಡೂಡಲ್ ಅನ್ನು ಮುಂಬೈ ಮೂಲದ ಅತಿಥಿ ಕಲಾವಿದೆ ಭೂಮಿಕಾ ಮುಖರ್ಜಿ ರಚಿಸಿದ್ದಾರೆ. ತಮಿಳುನಾಡಿನಲ್ಲಿ ಆಗಸ್ಟ್ 13, 1963ರಂದು ಜನಿಸಿದ ಶ್ರೀದೇವಿ, ನಾಲ್ಕು ದಶಕಗಳ ಅವಧಿಯಲ್ಲಿ ಸುಮಾರು 300 ಚಿತ್ರಗಳಲ್ಲಿ ನಟಿಸಿದ್ದರು.

ನೃತ್ಯದ ಭಂಗಿಯಲ್ಲಿರುವ ಶ್ರೀದೇವಿ ಅವರ ಚಿತ್ರದ ಡೂಡಲ್ ರಚಿಸಲಾಗಿದ್ದು, ಸುತ್ತ ಹೊಳಪಿನ ಹೂವುಗಳ ಚಿತ್ತಾರವನ್ನು ಬಿಡಿಸಲಾಗಿದೆ.

ಪುಟ್ಟ ಮಗುವಾಗಿದ್ದಾಗಲೇ ಚಿತ್ರರಂಗದ ಸೆಳೆತಕ್ಕೆ ಬಿದ್ದಿದ್ದ ಶ್ರೀದೇವಿ, ತಮ್ಮ ನಾಲ್ಕನೆಯ ವಯಸ್ಸಿನಲ್ಲೇ ತಮಿಳಿನ ‘ಕಂದನ್ ಕರುಣೈ’ ಸಿನಿಮಾದಲ್ಲಿ ಬಾಲನಟಿಯಾಗಿ ಅಭಿನಯಸಿದ್ದರು. ಅವರು ದಕ್ಷಿಣ ಭಾರತದ ವಿವಿಧ ಭಾಷೆಗಳನ್ನು ಮಾತನಾಡಲು ಕಲಿತಿದ್ದರಿಂದ, ಭಾರತದ ಇತರೆ ಭಾಷೆಗಳ ಚಿತ್ರರಂಗಕ್ಕೂ ಹೆಜ್ಜೆ ಇಡಲು ಸಾಧ್ಯವಾಗಿತ್ತು. ಅವರು ತಮ್ಮ ವೃತ್ತಿ ಜೀವನದಲ್ಲಿ ವೈವಿಧ್ಯಮಯ ಪಾತ್ರಗಳು ಹಾಗೂ ತಮಿಳು, ತೆಲುಗು ಹಾಗೂ ಮಲಯಾಳಂನಂಥ ವಿವಿಧ ಚಿತ್ರೋದ್ಯಮಗಳ ಚಲನಚಿತ್ರಗಳಲ್ಲಿ ನಟಿಸಿದ್ದರು.

1976ರಲ್ಲಿ ಕೆ.ಬಾಲಚಂದರ್ ನಿರ್ದೇಶಿಸಿದ್ದ ‘ಮೂಂಡ್ರು ಮುಡಿಚು’ ಎಂಬ ತಮಿಳು ಚಿತ್ರದಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಶ್ರೀದೇವಿ ರಾಷ್ಟ್ರಮಟ್ಟದ ಮನ್ನಣೆಯನ್ನು ಗಳಿಸಿದರು. ಈ ಚಲನಚಿತ್ರದ ಯಶಸ್ಸಿನ ನಂತರ ಅವರು ಮತ್ತು ಅವರೊಂದಿಗಿನ ಸಹನಟರು ‘ಗುರು’ ಮತ್ತು ‘ಶಂಕರ್ ಲಾಲ್’ ಚಿತ್ರಗಳ ಮೂಲಕ ಮತ್ತಷ್ಟು ಜನಪ್ರಿಯರಾದರು. ತಮಿಳು ಚಿತ್ರರಂಗದ ತಾರೆ ಎಂದೇ ಪರಿಗಣಿತವಾಗಿದ್ದ ಸಮಯದಲ್ಲಿ, ಶ್ರೀದೇವಿಯವರ ತೆರೆಯ ಮೇಲಿನ ಸೊಬಗು ಹಿಂದಿಭಾಷಿಕ ಚಿತ್ರೋದ್ಯಮಗಳ ನಿರ್ಮಾಪಕರ ಗಮನವನ್ನೂ ಸೆಳೆಯಿತು.

‘ಹಿಮ್ಮತ್ ವಾಲಾ’ ಚಿತ್ರದಲ್ಲಿ ನಟಿಸುವ ಮೂಲಕ ಶ್ರೀದೇವಿ ಬಾಲಿವುಡ್ ನಲ್ಲಿ ತಮಗೊಂದು ಸ್ಥಾನವನ್ನು ಆಕ್ರಮಿಸಿಕೊಂಡರು. ಇದಾದ ಒಂದು ದಶಕದ ಅಂತರದಲ್ಲಿ ‘ಸದ್ಮಾ’ ಮತ್ತು ‘ಚಾಲ್‍ ಬಾಝ್'’ನಂಥ ಯಶಸ್ವಿ ಚಿತ್ರಗಳಲ್ಲಿ ನಟಿಸಿದರು.

ದೂರದರ್ಶನದ ‘ಮಾಲಿನಿ’ ಮತ್ತು ‘ಕಬೂಮ್’ನಂಥ ಧಾರಾವಾಹಿಗಳಲ್ಲಿ ನಟಿಸುವ ಮುನ್ನ, 2000ನೇ ಇಸವಿಯ ಆರಂಭದಲ್ಲಿ ಶ್ರೀದೇವಿ ಚಲನಚಿತ್ರಗಳ ನಟನೆಯಿಂದ ವಿರಾಮ ತೆಗೆದುಕೊಂಡಿದ್ದರು. ಇದಾದ ನಂತರ ಅವರು ಏಶ್ಯನ್ ಅಕಾಡೆಮಿ ಆಫ್ ಫಿಲ್ಮ್ ಆ್ಯಂಡ್ ಟೆಲಿವಿಷನ್ ಬೋರ್ಡ್ ನ ನಿರ್ದೇಶಕರಾಗಿ ಸೇರ್ಪಡೆಯಾದರು. ನಂತರ 2012ರಲ್ಲಿ ‘ಇಂಗ್ಲಿಷ್ ವಿಂಗ್ಲಿಷ್’ ಚಿತ್ರದ ಮೂಲಕ ತಮ್ಮ ಪುನರಾಗಮನವನ್ನು ಶ್ರೀದೇವಿ ಪ್ರಕಟಿಸಿದರು. ಸುದೀರ್ಘ ವಿರಾಮದ ನಂತರ ಚಿತ್ರರಂಗಕ್ಕೆ ಮರಳಿದ್ದ ಅವರಿಗೆ ಆ ಚಿತ್ರವು ದೊಡ್ಡ ಯಶಸ್ಸು ತಂದುಕೊಟ್ಟಿತ್ತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News