ಪಾರ್ಕಿಂಗ್: ಮನಸ್ಸಿನ ಸೈರಣೆಯನ್ನು ಕೊಲ್ಲುವ ಅಹಂ ಸುತ್ತ ಹೆಣೆದ ಕಥೆ..
ಮಾನವ ಸ್ವಭಾವತಃ ಸಂಘರ್ಷ ಜೀವಿ. ಮಾನವನ ಸಂಘರ್ಷದ ಇತಿಹಾಸವನ್ನು ಕೆದಕುತ್ತಾ ಹೋದರೆ ಅದು ನಮ್ಮನ್ನು ಆದಿಮಾನವನ ಕಾಲಘಟ್ಟಕ್ಕೆ ತೆಗೆದುಕೊಂಡು ಹೋಗಿ ನಿಲ್ಲಿಸುತ್ತದೆ. ಮನುಷ್ಯನ ಅಹಂ ಆತನನ್ನು ಯಾವ ಮಟ್ಟಕ್ಕೆ ತೆಗೆದುಕೊಂಡು ಹೋಗುತ್ತದೆ ಅನ್ನುವುದಕ್ಕೆ ಇತಿಹಾಸದಲ್ಲಿ ನಮಗೆ ಅನೇಕ ಉದಾಹರಣೆಗಳು ಸಿಗುತ್ತವೆ. ತನ್ನ ಅಹಂಗೆ ಪೆಟ್ಟು ಬಿದ್ದರೆ ಆತ ಎಷ್ಟೇ ಸಾತ್ವಿಕನಾದರೂ ಆತನ ಆಳದಲ್ಲಿ ದ್ವೇಷ ಎನ್ನುವುದು ಮಿಡಿನಾಗರದಂತೆ ಎದ್ದು ನಿಲ್ಲುತ್ತದೆ. ಆತನಲ್ಲಿ ಅಹಂ ಕಾಣಿಸಿಕೊಂಡರೆ ನಂತರದಲ್ಲಿ ಅದನ್ನು ತಣಿಸಲು ಆತ ಯಾವ ಮಟ್ಟಕ್ಕೆ ಬೇಕಾದರೂ ಹೋಗಬಲ್ಲ.
Ego clash ಬಗ್ಗೆ ಒಂದು ಎಳೆಯ ಕಥೆಯನ್ನಿಟ್ಟುಕೊಂಡು ಜಗತ್ತಿನಲ್ಲಿ ಅನೇಕ ಚಲನಚಿತ್ರಗಳು ಬಂದಿವೆ. ಅವುಗಳಲ್ಲಿ ಇತ್ತೀಚಿನ ಉದಾಹರಣೆ ಎಂದರೆ ಜೂನಿಯರ್ ಲಾಲ್ ನಿರ್ದೇಶಿಸಿ ಪೃಥ್ವಿರಾಜ್ ಮತ್ತು ಸುರಾಜ್ ನಟನೆಯ ‘ಡ್ರೈವಿಂಗ್ ಲೈಸೆನ್ಸ್’ ಹಾಗೂ ದಿವಂಗತ ಸಚ್ಚಿ ನಿರ್ದೇಶನದಲ್ಲಿ ಪೃಥ್ವಿರಾಜ್, ಬಿಜು ಮೆನನ್ ನಟಿಸಿದ ‘ಅಯ್ಯಪ್ಪನುಂ ಕೋಶಿಯುಂ’ ಎಂಬ ಎರಡು ಚಿತ್ರಗಳು. ಈ ಎರಡೂ ಚಿತ್ರಗಳ one line story ಇಬ್ಬರು ಪ್ರಮುಖ ಪಾತ್ರಧಾರಿಗಳ ಮಧ್ಯದ Ego clash ಅವರನ್ನು ಯಾವ ಮಟ್ಟದವರೆಗೆ ತೆಗೆದುಕೊಂಡು ಹೋಗುತ್ತದೆ ಎಂಬುದಾಗಿದೆ. ಈ ಎರಡೂ ಚಿತ್ರಗಳಲ್ಲಿ ಎರಡು ಪ್ರಮುಖ ಪಾತ್ರಧಾರಿಗಳು ಸ್ವಭಾವತಃ ಒಳ್ಳೆಯವರಾದರೂ ಅವರ ಮನದ ಆಳದಲ್ಲಿ ಎದ್ದು ನಿಲ್ಲುವ ಅಹಂನಿಂದ ಅವರು ಯಾವ ಕ್ರೂರತನ ಎಸಗುವುದಕ್ಕೂ ಹೇಸದ ಪರಿಸ್ಥಿತಿ ನಿರ್ಮಾಣ ಮಾಡುತ್ತದೆ.
ಅದರ ಮುಂದುವರಿದ ಭಾಗವಾಗಿ 2023ರಲ್ಲಿ ಬಿಡುಗಡೆಯಾದ ತಮಿಳು ಚಿತ್ರ ‘ಪಾರ್ಕಿಂಗ್’ ಇಬ್ಬರ ನಡುವಿನ Ego clash ಅನ್ನು ಅತ್ಯಂತ ಪರಿಣಾಮಕಾರಿಯಾಗಿ ಚಿತ್ರಿಸಿದೆ. ರಾಮ್‌ಕುಮಾರ್ ಬಾಲಕೃಷ್ಣನ್ ಚೊಚ್ಚಲ ನಿರ್ದೇಶನದ ಈ ಚಿತ್ರದಲ್ಲಿ ಹಿರಿಯ ನಟ ಎಂ.ಎಸ್. ಭಾಸ್ಕರ್ ಮತ್ತು ಹರೀಶ್ ಕಲ್ಯಾಣ್ ಪ್ರಮುಖ ಪಾತ್ರಧಾರಿಯಾಗಿ ನಟಿಸಿದ್ದಾರೆ. ಒಂದೇ ಕಟ್ಟಡದ ನೆಲಮಹಡಿ ಮತ್ತು ಮೇಲಿನ ಮಹಡಿಯಲ್ಲಿ ಬಾಡಿಗೆಗೆ ವಾಸವಿರುವ ಇಬ್ಬರು ಬಾಡಿಗೆದಾರರ ಮಧ್ಯೆ ಬೈಕ್ ಮತ್ತು ಕಾರನ್ನು ಪಾರ್ಕ್ ಮಾಡುವ ವಿಚಾರದಲ್ಲಿ ಆರಂಭವಾಗುವ ಸಣ್ಣದೊಂದು ಸಂಘರ್ಷ ಆನಂತರ ವಿಸ್ತಾರಗೊಳ್ಳುತ್ತಾ ಹೋಗುತ್ತದೆ. ಇದು ಇಬ್ಬರ ಮಧ್ಯೆ ದ್ವೇಷದ ಗೋಡೆಯನ್ನು ನಿರ್ಮಿಸುತ್ತದೆ. ದ್ವೇಷ ಅಹಂ ಆಗಿ ಬದಲಾವಣೆಯಾಗುತ್ತದೆ. ಅಹಂ ತಲೆಗೇರಿಸಿಕೊಂಡ ಇಬ್ಬರೂ ಪ್ರತಿಕ್ಷಣದಲ್ಲೂ ಒಬ್ಬರನ್ನೊಬ್ಬರು ತುಳಿದು ಹಾಕಲು ಸಂಚು ಹಾಕುತ್ತಿರುತ್ತಾರೆ. ಇಬ್ಬರ ನಡುವಿನ Ego clash ಅವರನ್ನು ಯಾವ ಮಟ್ಟಕ್ಕೆ ತೆಗೆದುಕೊಂಡು ಹೋಗುತ್ತದೆ ಎನ್ನುವುದು ಚಿತ್ರದ ಒಟ್ಟು ಹೂರಣ.
ಡ್ರಾಮಾ ಮೋಡ್‌ನಲ್ಲಿ ಪ್ರಾರಂಭವಾಗುವ ಚಿತ್ರ ಮಧ್ಯಂತರದ ವೇಳೆಗೆ ಥ್ರಿಲ್ಲರ್ ಮೋಡ್‌ಗೆ ಹೊರಳಿಕೊಳ್ಳುತ್ತದೆ. ಕೊನೆಯಲ್ಲಿ ಕ್ರೈಂ ಡ್ರಾಮವಾಗಿ ಪರಿವರ್ತನೆಯಾಗುವ ಚಿತ್ರ ಎರಡು ಗಂಟೆಗಳ ಕಾಲ ನೋಡುಗನನ್ನು ಸೀಟಿನ ಅಂಚಿನಲ್ಲಿ ಕೂರಿಸಿಬಿಡತ್ತದೆ.
ಚಿತ್ರದ ಎಲ್ಲಾ ಕಲಾವಿದರೂ ತಮ್ಮ ತಮ್ಮ ಪಾತ್ರಗಳಿಗೆ ಗರಿಷ್ಠ ನ್ಯಾಯ ಒದಗಿಸಿದ್ದಾರೆ. ಅದರಲ್ಲೂ ಪ್ರಮುಖ ಪಾತ್ರಧಾರಿ ಹಿರಿಯ ನಟ ಎಂ.ಎಸ್. ಭಾಸ್ಕರ್ ಕ್ರೌರ್ಯ ತುಂಬಿದ ತಣ್ಣಗಿನ ನಟನೆ ಚಿತ್ರದ ಪ್ರಮುಖ ಹೈಲೈಟ್. Ego clashನ ವಿಚಾರಕ್ಕೆ ಬಂದರೆ ಡ್ರೈವಿಂಗ್ ಲೈಸೆನ್ಸ್ ಮತ್ತು ಅಯ್ಯಪ್ಪನುಂ ಕೋಶಿಯುಂ ಚಿತ್ರವನ್ನೂ ಮೀರಿಸುವ ಕ್ರೌರ್ಯವನ್ನು ನಮಗೆ ಈ ಚಿತ್ರದಲ್ಲಿ ಕಾಣಬಹುದು.
ತಾಂತ್ರಿಕವಾಗಿ ಚಿತ್ರ ಉತ್ಕೃಷ್ಟವಾಗಿದೆ. ಜಿಜು ಸನ್ನಿ ಛಾಯಾಗ್ರಹಣ, ಸ್ಯಾಂ ಸಿ.ಎಸ್. ಸಂಗೀತ, ಫಿಲೋಮಿನಾ ರಾಜ್ ಎಡಿಟಿಂಗ್ ಚಿತ್ರದ ವೇಗವನ್ನು ಇನ್ನಷ್ಟು ಹೆಚ್ಚಿಸುತ್ತದೆ. ಒಟ್ಟಾರೆ ತನ್ನ ಮೊದಲ ಯತ್ನದಲ್ಲೇ ನಿರ್ದೇಶಕರು ಪೂರ್ಣ ಅಂಕ ಗಳಿಸಿದ್ದಾರೆ. ಖಂಡಿತಾ ನೋಡಲೇಬೇಕಾದ ಚಿತ್ರ ಪಾರ್ಕಿಂಗ್.
ತಮಿಳು ಮೂಲದ ಈ ಚಿತ್ರ ಡಿಸ್ನಿ ಹಾಟ್‌ಸ್ಟಾರ್ ಒಟಿಟಿಯಲ್ಲಿ ಹಿಂದಿ, ತೆಲುಗು, ಮಲಯಾಳಂ ಮತ್ತು ಕನ್ನಡ ಡಬ್ಬಿಂಗ್‌ನಲ್ಲೂ ಲಭ್ಯವಿದೆ. ಚಿತ್ರದ IMDb ರೇಟಿಂಗ್ 8.9/10.