ಆನ್‌ಲೈನ್ ಜೂಜು ಜಾಹೀರಾತಿನಲ್ಲಿ ನಟಿಸಿದ ಶಾರೂಖ್ ಖಾನ್ ವಿರುದ್ಧ ಪ್ರತಿಭಟನೆ: ‘ಮನ್ನತ್’ ಸುತ್ತ ಪೊಲೀಸ್ ಬಿಗಿ ಭದ್ರತೆ
ಮುಂಬೈ: ಆನ್ ಲೈನ್ ಜೂಜು ಆ್ಯಪ್ ಜಾಹೀರಾತಿನಲ್ಲಿ ಶಾರೂಖ್ ಖಾನ್ ಕಾಣಿಸಿಕೊಂಡಿರುವುದರ ವಿರುದ್ಧ ಹಲವಾರು ಮಂದಿ ಅವರ ನಿವಾಸದೆದುರು ಪ್ರತಿಭಟನೆ ನಡೆಸಿದ್ದರಿಂದ, ಅವರ ‘ಮನ್ನತ್’ ಬಂಗಲೆಯ ಸುತ್ತ ಶನಿವಾರ ಭಾರಿ ಪೊಲೀಸ್ ಭದ್ರತೆಯನ್ನು ನಿಯೋಜಿಸಲಾಗಿತ್ತು. ಇಂತಹ ಆ್ಯಪ್ ಗಳು ಯುವಕರನ್ನು ದಾರಿ ತಪ್ಪಿಸಿ, ಭ್ರಷ್ಟರನ್ನಾಗಿಸುವುದರಿಂದ ತಾರಾನಟರು ಇಂತಹ ಆ್ಯಪ್ ಗಳ ಪರ ಪ್ರಚಾರ ಮಾಡಬಾರದು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ ಎಂದು freepressjournal.in ವರದಿ ಮಾಡಿದೆ.
ಜಂಗ್ಲೀ ರಮ್ಮಿ, ಝೂಪೀ ಹಾಗೂ ಇನ್ನಿತರ ಆನ್ ಲೈನ್ ಜೂಜು ಆ್ಯಪ್ ಗಳ ವಿರುದ್ಧ ಪ್ರತಿಭಟನೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಅನ್ ಟಚ್ ಇಂಡಿಯಾ ಫೌಂಡೇಶನ್ ಎಂಬ ಸಂಘಟನೆಯು ಎಚ್ಚರಿಸಿದೆ.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಈ ಸಂಘಟನೆಯ ಅಧಿಕೃತ ಹೇಳಿಕೆಯಲ್ಲಿ, “ಖ್ಯಾತ ನಟ ಮತ್ತು ನಟಿಯರು ಇಂತಹ ಜಾಹೀರಾತುಗಳಲ್ಲಿ ಕೆಲಸ ಮಾಡುತ್ತಿದ್ದು, ಇದರಿಂದ ಸಮಾಜವನ್ನು ತಪ್ಪು ದಾರಿಗೆಳೆಯುತ್ತಿದ್ದಾರೆ. ಅನ್ ಟಚ್ ಇಂಡಿಯಾ ಫೌಂಡೇಶನ್ ಪರವಾಗಿ ಶಾರೂಖ್ ಖಾನ್ ನಿವಾಸವಾದ ‘ಮನ್ನತ್’ ಎದುರು ಪ್ರತಿಭಟನೆ ನಡೆಸಲಾಗುವುದು” ಎಂದು ಹೇಳಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಅನ್ ಟಚ್ ಇಂಡಿಯಾ ಫೌಂಡೇಶನ್ ಸಂಘಟನೆಯ ಅಧ್ಯಕ್ಷರಾದ ಕೃಷ್ ಚಂದ್ರ ಅಡಾಲ್, “ಹೊಸ ತಲೆಮಾರು ಜಂಗ್ಲೀ ರಮ್ಮಿ ಆಡುವುದರಲ್ಲಿ ಭಾಗಿಯಾಗಿದೆ. ಯಾರಾದರೂ ಹೊರಗೆ ಜಂಗ್ಲೀ ರಮ್ಮಿ ಅಥವಾ ಜೂಜಾಟವಾಡುತ್ತಿದ್ದರೆ ಅಂಥವರನ್ನು ಪೊಲೀಸರು ಬಂಧಿಸುತ್ತಾರೆ. ಆದರೆ, ಬಾಲಿವುಡ್ ತಾರೆಯರು ಇಂತಹ ಆನ್ ಲೈನ್ ಜೂಜಾಟವನ್ನು ಪ್ರಚಾರ ಮಾಡುತ್ತಿರುವುದರಿಂದ ಯುವ ಪೀಳಿಗೆ ದಾರಿ ತಪ್ಪುತ್ತಿದೆ. ಈ ತಾರೆಗಳ ಚಿತ್ರಗಳನ್ನು ನೋಡುವ ಮೂಲಕ ಹಾಗೂ ನಮ್ಮ ದುಡ್ಡನ್ನು ಅವರಿಗಾಗಿ ವ್ಯಯಿಸುವ ಮೂಲಕ ನಾವು ಅವರನ್ನು ಖ್ಯಾತರನ್ನಾಗಿಸುತ್ತಿದ್ದೇವೆ. ಹೀಗಾಗಿ ನಾವು ಇಂತಹ ಜಾಹೀರಾತುಗಳನ್ನು ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸುತ್ತೇವೆ. ಈ ಆ್ಯಪ್ ಗಳು ಕಾನೂನು ಬಾಹಿರವಾಗಿದ್ದು, ಇವು ಗೂಗಲ್ ನಲ್ಲಿ ಕಂಡು ಬರುವುದಿಲ್ಲ. ಆದರೆ, ಖಾಸಗಿ ಅಂತರ್ಜಾಲ ತಾಣಗಳಲ್ಲಿ ಅಪ್ಲೋಡ್ ಮಾಡಲಾಗಿರುತ್ತವೆ” ಎಂದು ಆರೋಪಿಸಿದ್ದಾರೆ.
ಆನ್ ಲೈನ್ ಜೂಜಾಟವನ್ನು ಪ್ರಚಾರ ಮಾಡುತ್ತಿರುವ ಶಾರೂಖ್ ಖಾನ್ ರೊಂದಿಗೆ, ಅಜಯ್ ದೇವಗನ್, ರಾಕುಲ್ ಪ್ರೀತ್ ಸಿಂಗ್, ಪ್ರಕಾಶ್ ರಾಜ್, ಅನ್ನು ಕಪೂರ್, ರಾಣಾ ದಗ್ಗುಬಾಟಿ ಹಾಗೂ ಕ್ರಿಕೆಟ್ ಆಟಗಾರರನ್ನೂ ನಾವು ವಿರೋಧಿಸುತ್ತೇವೆ. ನಾವು ಇಂತಹ ತಾರೆಯರ ನಿವಾಸದೆದುರೂ ಪ್ರತಿಭಟನೆ ನಡೆಸಲು ಉದ್ದೇಶಿಸಿದ್ದೆವು. ಆದರೆ, ಪೊಲೀಸರು ನಮ್ಮನ್ನು ವಶಕ್ಕೆ ಪಡೆದರು” ಎಂದೂ ಅವರು ಹೇಳಿದ್ದಾರೆ.
ಈ ಪ್ರತಿಭಟನೆಯ ಸಂದರ್ಭದಲ್ಲಿ 4-5 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದರು.