ಕ್ವೀನ್ ಆಫ್ ಟಿಯರ್ಸ್‌: ಬಾಡಿದ ಬಳ್ಳಿಯಲ್ಲಿ ಅರಳಿದ ಹೂವು!

Update: 2024-05-22 07:06 GMT
Editor : Thouheed | Byline : ಶಬರಿ

2024ರಲ್ಲಿ ಹೊರ ಬಂದ ಕೊರಿಯನ್ ಡ್ರಾಮಗಳಲ್ಲಿ ಅತಿ ಹೆಚ್ಚು ಜನಪ್ರಿಯತೆಯನ್ನು ತನ್ನದಾಗಿಸಿಕೊಂಡಿರುವ ಸರಣಿ ‘ಕ್ವೀನ್ ಆಫ್ ಟಿಯರ್ಸ್‌’. ಸಾಧಾರಣವಾಗಿ ಸಿರೀಸ್‌ಗಳಲ್ಲಿ ಶ್ರೀಮಂತ ಹುಡುಗಿ-ಬಡ ಹುಡುಗನ ನಡುವೆ ಪ್ರೇಮ ಕತೆಗಳು ಆರಂಭವಾಗುತ್ತದೆ. ಒಂದಾಗುವುದಕ್ಕಾಗಿ ಜೋಡಿಗಳು ನಡೆಸುವ ಸಂಘರ್ಷದೊಂದಿಗೆ ಅದು ಬೆಳೆಯುತ್ತಾ ಹೋಗುತ್ತದೆ. ಮದುವೆಯಾಗುವುದರೊಂದಿಗೆ ಕತೆ ಸುಖಾಂತ್ಯವಾಗುತ್ತದೆ. ಆದರೆ ಈ ಸರಣಿಯ ಕತೆ ತೆರೆದುಕೊಳ್ಳುವುದೇ ಪ್ರೀತಿಸಿದ ಜೋಡಿಗಳು ಮದುವೆಯಾಗಿ ಮೂರು ವರ್ಷವಾದ ಸಂಭ್ರಮಾಚರಣೆಯೊಂದಿಗೆ. ಬೃಹತ್ ಕಾರ್ಪೊರೇಟ್ ಸಂಸ್ಥೆ ಕ್ವೀನ್ ಗ್ರೂಪ್‌ನ ಭವಿಷ್ಯದ ಚೇರ್‌ಮೆನ್ ಎಂದೇ ಗುರುತಿಸಲ್ಪಡುವ ಉತ್ತರಾಧಿಕಾರಿಣಿ ಹಾಂಗ್ ಹೀ -ಇನ್ ಮತ್ತು ಯಾಂಗ್ದುರಿಯ ರೈತನ ಮಗ ಬೇಕ್‌ವ್ಯೆನ್ ಹೂ ನಡುವಿನ ಪ್ರೀತಿ-ಮುನಿಸು ಇವುಗಳ ಏಳು ಬೀಳುವಿನ ಕತೆಯೇ ‘ಕ್ವೀನ್ ಆಫ್ ಟಿಯರ್ಸ್‌’.

ಮುದ್ದು ಮುಖದ ಬೇಕ್ ವ್ಯೆನ್ ಹೂ, ಕ್ವೀನ್ಸ್ ಗ್ರೂಪ್‌ನ ಲೀಗಲ್ ಡೈರಕ್ಟರ್. ತನ್ನ ಕಚೇರಿಗೆ ಬಂದ ಹೊಸ ಇಂಟರ್ನ್ ಹುಡುಗಿಯ ಜೊತೆಗೆ ಈತನಿಗೆ ಪ್ರೇಮವಾಗುತ್ತದೆ. ಆದರೆ ಆಕೆ ತನ್ನ ಹೆಸರನ್ನು ಮುಚ್ಚಿಟ್ಟು ಅಲ್ಲಿ ಟ್ರೈನಿಯಾಗಿ ಬಂದಿರುವ ಕ್ವೀನ್ಸ್ ಗ್ರೂಪಿನ ಉತ್ತರಾಧಿಕಾರಿಣಿ ಎನ್ನುವುದು ಆತನಿಗೆ ಗೊತ್ತಿಲ್ಲ. ಸದಾ ಒಂದಲ್ಲ ಒಂದು ಎಡವಟ್ಟು ಮಾಡುವ ಹುಡುಗಿ ಹಾಂಗ್ ಹೀ -ಇನ್ ಮೇಲೆ ಬೇಕ್ ವ್ಯೆನ್ ಹೂ ಅನುಕಂಪ, ಕಾಳಜಿ ನಿಧಾನಕ್ಕೆ ಪ್ರೀತಿಯಾಗಿ ಬದಲಾಗುತ್ತದೆ. ತನ್ನ ಪ್ರೀತಿಯನ್ನು ಬಹಿರಂಗ ಪಡಿಸುವ ಹೊತ್ತಿಗೆ ಆಕೆ ತನ್ನ ಕಂಪೆನಿಯ ಮಾಲಕಿ ಎನ್ನುವುದು ಗೊತ್ತಾಗಿ ಬಿಡುತ್ತದೆ. ಆದರೆ ಯಾವ ಅಡೆತಡೆಯೂ ಇಲ್ಲದೆ ಇಬ್ಬರ ಮದುವೆಯಾಗುತ್ತದೆ. ಆದರೆ ಮದುವೆಯಾದ ಮೂರೇ ವರ್ಷದಲ್ಲಿ ಆತನಿಗೆ ಆ ಅರಮನೆಯ ಬದುಕು ಉಸಿರುಗಟ್ಟ ತೊಡಗುತ್ತದೆ. ಆತನಿಗೆ ತನ್ನ ಪತ್ನಿಯಿಂದ ವಿಚ್ಛೇದನ ಬೇಕಾಗಿದೆ. ಆದರೆ ಅದನ್ನು ಕೇಳುವ ಧೈರ್ಯವಿಲ್ಲ. ಕೇಳಿದರೆ ವಿಚ್ಛೇದನದ ಜೊತೆ ಜೊತೆಗೆ ಆತನ ಬದುಕೂ ಬೀದಿಪಾಲಾಗುತ್ತದೆ. ಯಾಕೆಂದರೆ ಆತ ಆ ಮೂಲಕ ಇಡೀ ಕ್ವೀನ್ ಗ್ರೂಪ್‌ನ ಜೊತೆಗೆ ವೈರ ಕಟ್ಟಿಕೊಳ್ಳಬೇಕಾಗುತ್ತದೆ. ಹೀಗೊಂದು ದಿನ ವಿಚ್ಛೇದನವನ್ನು ಕೇಳಿಯೇ ಬಿಡುವುದು ಎನ್ನುವ ಧೈರ್ಯದೊಂದಿಗೆ ತನ್ನ ಪತ್ನಿಯ ಕೋಣೆಯ ಬಾಗಿಲು ತಟ್ಟುತ್ತಾನೆ. ಆದರೆ ಅಲ್ಲಿ ಆಕೆ ಆತನಿಗಾಗಿ ಬೇರೊಂದು ಸುದ್ದಿಯೊಂದಿಗೆ ಕಾಯುತ್ತಿರುತ್ತಾಳೆ. ವಿಚ್ಛೇದನ ವಿಷಯ ಮಾತನಾಡಲು ಬಂದವನ ಜೊತೆಗೆ ‘‘ನನಗೆ ಬ್ರೈನ್ ಟ್ಯೂಮರ್. ನಾನಿನ್ನು ಬರೇ ಮೂರು ತಿಂಗಳಷ್ಟು ಕಾಲ ಮಾತ್ರ ಬದುಕುಳಿಯುವೆ’’ ಎನ್ನುವ ನೋವಿನ ವಿಷಯವನ್ನು ಬಹಿರಂಗ ಪಡಿಸುತ್ತಾಳೆ. ವಿಚ್ಛೇದನ ಕೇಳಲು ಬಂದವನಿಗೆ ವಿಷಯ ತನ್ನಷ್ಟಕ್ಕೆ ಇತ್ಯರ್ಥವಾದ ನೆಮ್ಮದಿ. ವಿಚ್ಛೇದನದ ವಿಷಯವನ್ನು ಹೇಳದೆ ಮುಚ್ಚಿಡುತ್ತಾನೆ. ಬ್ರೈನ್ ಟ್ಯೂಮರ್ ಇರುವ ಪತ್ನಿಯ ಜೊತೆಗೆ ಉಳಿದ ಮೂರು ತಿಂಗಳನ್ನು ಕಳೆಯುವ ನಿರ್ಧಾರ ಮಾಡುತ್ತಾನೆ. ಆದರೆ ಆ ನಿರ್ಧಾರ ಪತಿ-ಪತ್ನಿಯರ ನಡುವೆ ಬಾಡಿದ ಪ್ರೀತಿಯ ಬಳ್ಳಿಯನ್ನು ಮತ್ತೆ ಚಿಗುರಿಸುತ್ತದೆ.

ಗಂಡ-ಹೆಂಡಿರ ನಡುವಿನ ಮುನಿಸು, ಪ್ರತಿಷ್ಠೆ, ಕಚೇರಿಯೊಳಗಿನ ತಿಕ್ಕಾಟಗಳ ಕಣ್ಣು ಮುಚ್ಚಾಲೆಗಳನ್ನು ಸಂಚಿಕೆಯಿಂದ ಸಂಚಿಕೆಗೆ ನವಿರಾಗಿ ಕಟ್ಟಿಕೊಡಲಾಗಿದೆ. ನಿಧಾನಕ್ಕೆ ಅವರ ಮುನಿಸಿನ ಆಳದಲ್ಲಿ ಬಚ್ಚಿಟ್ಟುಕೊಂಡ ಪ್ರೀತಿಯ ಬೆಳ್ಳಿಗೆರೆ ಅಲ್ಲಲ್ಲಿ ಮಿಂಚತೊಡಗುತ್ತದೆ. ಈ ನಡುವೆ ಕ್ವೀನ್ ಗ್ರೂಪ್‌ನ್ನು ಕೈವಶ ಮಾಡಿಕೊಳ್ಳಲು ಆಗಮಿಸುವ ನಿಗೂಢ ವ್ಯಕ್ತಿ ಯೂನ್ ಯಂಗ್ ಸಂಗ್, ಈ ದಂಪತಿಯ ಸಂಘರ್ಷದ ನಡುವೆ ಪ್ರತಿನಾಯಕನಾಗಿ ಪ್ರವೇಶಿಸುತ್ತಾನೆ. ಆರಂಭದಲ್ಲಿ ವಿಚ್ಛೇದನವನ್ನು, ಬಳಿಕ ಪತ್ನಿಯ ಸಾವನ್ನು ನಿರೀಕ್ಷಿಸುತ್ತಿರುವ ನಾಯಕ ನಿಧಾನಕ್ಕೆ ತನ್ನೊಳಗೆ ಇನ್ನೂ ಪ್ರೀತಿಯ ಜೀವದ್ರವ್ಯ ಬತ್ತಿಲ್ಲ ಎನ್ನುವ ಸತ್ಯವನ್ನು ಕಂಡುಕೊಳ್ಳುತ್ತಾನೆ. ಪತನದೆಡೆಗೆ ಸಾಗುತ್ತಿರುವ ಕ್ವೀನ್‌ಗ್ರೂಪ್ ಮತ್ತು ಸಾವಿನೆಡೆಗೆ ಸಾಗುತ್ತಿರುವ ತನ್ನ ಪ್ರಿಯತಮೆ ಎರಡನ್ನೂ ಆತ ಹೇಗೆ ಉಳಿಸಿಕೊಳ್ಳುತ್ತಾನೆ ಎನ್ನುವುದನ್ನು ಅತ್ಯಂತ ನವಿರಾಗಿ, ಭಾವಪೂರ್ಣವಾಗಿ ಕಟ್ಟಿಕೊಡುತ್ತದೆ ‘ಕ್ವೀನ್ ಆಫ್ ಟಿಯರ್ಸ್‌’. ಹಾಸ್ಯ ಸಂಘರ್ಷ, ವಿಷಾದ ಮೂರನ್ನೂ ಇಲ್ಲಿ ಹದವಾಗಿ ಬೆರೆಸಲಾಗಿದೆ. ಮುದ್ದು, ಮುಗ್ಧ ನಾಯಕನ ಪಾತ್ರದಲ್ಲಿ ಕಿಮ್ ಸೂ ಹ್ಯೂನ್ ನಟನೆ, ಶ್ರೀಮಂತಿಕೆ, ಪ್ರತಿಷ್ಠೆಯ ಆಳದಲ್ಲಿ ತನ್ನೊಳಗಿನ ದುಃಖವನ್ನು ಬಚ್ಚಿಟ್ಟು ಬದುಕುವ ನಾಯಕಿಯ ಪಾತ್ರದಲ್ಲಿ ಕಿಮ್ ಜಿ ವನ್ ಪಾತ್ರ ಸರಣಿಯ ಗೆಲುವಿಗೆ ದೊಡ್ಡ ಕೊಡುಗೆಯನ್ನು ನೀಡುತ್ತದೆ. ಪ್ರತಿನಾಯಕ ಯೂನ್ ಯಂಗ್ ಸಂಗ್‌ನ ಬಾಲ್ಯದ ಪ್ರೇಮ ಮತ್ತು ಅದರ ದುರಂತವನ್ನು ಕೂಡ ಪರಿಣಾಮಕಾರಿಯಾಗಿ ನಿರೂಪಿಸಲಾಗಿದೆ. ಈ ಸರಣಿ ಪತ್ನಿಯ ಪ್ರೀತಿಯಿಂದ ವಂಚಿತನಾದ ಪತಿಯ ಸಂಕಟವನ್ನಷ್ಟೇ ಅಲ್ಲ, ತಾಯಿಯ ಪ್ರೀತಿಯಿಂದ ವಂಚಿತನಾದ ಮಗನ ಸಂಕಟಗಳನ್ನ್ನೂ ಮನಕಲಕುವಂತೆ ಹೇಳುತ್ತದೆ. ಖಳನಾಯಕನ ದುರಂತವನ್ನೂ ಹೃದಯವಂತಿಕೆಯಿಂದಲೇ ಇಲ್ಲಿ ಕಟ್ಟಿಕೊಡಲಾಗಿದೆ.ಶ್ರೀಮಂತ ಬದುಕಿನ ಟೊಳ್ಳುತನವನ್ನು, ಕೃಷಿಕರ ಬದುಕಿನ ಶ್ರೀಮಂತಿಕೆಯನ್ನು, ಹೃದಯವಂತಿಕೆಯನ್ನು ಹೇಳುವ ಪ್ರಯತ್ನವನ್ನೂ ಸರಣಿ ಮಾಡುತ್ತದೆ.

16 ಕಂತುಗಳನ್ನು ಹೊಂದಿರುವ ಈ ಸರಣಿಯನ್ನು ನೆಟ್‌ಫ್ಲಿಕ್ಸ್‌ನಲ್ಲಿ ವೀಕ್ಷಿಸಬಹುದು. ಐಎಂಡಿಬಿ ಈ ಸರಣಿಗೆ 8.3 ರೇಟಿಂಗ್‌ನ್ನು ನೀಡಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಶಬರಿ

contributor

Similar News