ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ: ʼಕಾಂತಾರʼ ಅಭಿನಯಕ್ಕಾಗಿ ರಿಷಬ್ ಶೆಟ್ಟಿಗೆ ಅತ್ಯುತ್ತಮ ನಟ ಪ್ರಶಸ್ತಿ
ಹೊಸದಿಲ್ಲಿ: ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯ ಘೋಷಿಸಿದ್ದು ಸೂಪರ್ ಹಿಟ್ ಚಿತ್ರ ʼಕಾಂತಾರʼದಲ್ಲಿನ ನಟನೆಗಾಗಿ ರಿಷಬ್ ಶೆಟ್ಟಿ ಅವರು ಅತ್ಯುತ್ತಮ ನಟ ಪ್ರಶಸ್ತಿ ಗಳಿಸಿದ್ದಾರೆ.
ನಟ ಯಶ್ ಅಭಿನಯದ ʼಕೆಜಿಎಫ್ ಚಾಪ್ಟರ್ 2ʼ ಸಿನಿಮಾಗೆ ಅತ್ಯುತ್ತಮ ಕನ್ನಡ ಚಲನಚಿತ್ರ ಪ್ರಶಸ್ತಿ ಸಿಕ್ಕಿದೆ. ಅದೇ ಚಿತ್ರವು ಅತ್ಯುತ್ತಮ ಸ್ಟಂಟ್ ಕೊರಿಯೋಗ್ರಫಿ ಪ್ರಶಸ್ತಿಯನ್ನೂ ಪಡೆದಿದೆ.
ಅತ್ಯುತ್ತಮ ನಟಿ ಪ್ರಶಸ್ತಿ ನಿತ್ಯ ಮೆನನ್ ಹಾಗೂ ಮಾನಸಿ ಪರೇಖ್ ಅವರು ಪಡೆದುಕೊಂಡಿದ್ದಾರೆ.
ಹಿಂದಿ ಚಿತ್ರ ʼಉಂಚೈʼ ನಿರ್ದೇಶನಕ್ಕಾಗಿ ಸೂರಜ್ ಬರ್ಜಾತ್ಯ ಅವರಿಗೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಲಭಿಸಿದೆ. ಅತ್ಯುತ್ತಮ ಹಿನ್ನಲೆ ಗಾಯಕ ಪ್ರಶಸ್ತಿ ಅರ್ಜಿತ್ ಸಿಂಗ್ ಪಾಲಾದರೆ, ಬಾಂಬೆ ಜಯಶ್ರೀ ಅವರಿಗೆ ಅತ್ಯುತ್ತಮ ಹಿನ್ನಲೆ ಗಾಯಕಿ ಪ್ರಶಸ್ತಿ ಲಭಿಸಿದೆ. ಪೊನ್ನಿಯಿನ್ ಸೆಲ್ವನ್ 2 ಗಾಗಿ ಎ.ಆರ್. ರೆಹಮಾನ್ ಅತ್ಯುತ್ತಮ ಹಿನ್ನೆಲೆ ಸಂಗೀತ ಪ್ರಶಸ್ತಿ ಪಡೆದಿದ್ದಾರೆ.
ಪ್ರಶಸ್ತಿ ಪಡೆದವರ ವಿವರ:
ಅತ್ಯುತ್ತಮ ಚಲನಚಿತ್ರ: ಆಟ್ಟಂ (ಮಲಯಾಳಂ)
ಉತ್ತಮ ನಿರ್ದೇಶಕ: ಸೂರಜ್ ಬರ್ಜಾತ್ಯ (ಉಂಚೈ)
ಅತ್ಯುತ್ತಮ ನಟ: ರಿಷಬ್ ಶೆಟ್ಟಿ (ಕಾಂತಾರ)
ಅತ್ಯುತ್ತಮ ನಟಿ: ನಿತ್ಯ ಮೆನನ್ (ತಿರುಚಿತ್ರಂಬಲಂ), ಮಾನಸಿ ಪರೇಖ್ (ಕಛ್ ಎಕ್ಸ್‌ಪ್ರೆಸ್)
ಅತ್ಯುತ್ತಮ ಪೋಷಕ ನಟ: ನೀನಾ ಗುಪ್ತಾ (ಉಂಚೈ), ಪವನ್ ಮಲ್ಹೋತ್ರಾ (ಫೌಜಾ)
ಅತ್ಯುತ್ತಮ ಕನ್ನಡ ಚಿತ್ರ: ಕೆ.ಜಿ.ಎಫ್–2
ಅತ್ಯುತ್ತಮ ತೆಲುಗು ಚಿತ್ರ: ಕಾರ್ತಿಕೇಯ-2
ಅತ್ಯುತ್ತಮ ತಮಿಳು ಚಿತ್ರ: ಪೊನ್ನಿಯನ್ ಸೆಲ್ವನ್ -2
ಅತ್ಯುತ್ತಮ ಹಿಂದಿ ಚಿತ್ರ: ಗುಲ್ಮೊಹರ್
ಅತ್ಯುತ್ತಮ ಸಾಕ್ಷ್ಯಚಿತ್ರ: ಮರ್ಮರ್ಸ್ ಆಫ್ ದಿ ಜಂಗಲ್ (ಸೋಹಿಲ್ ವೈದ್ಯ)