ಸೆನ್ಸಾರ್ ಮಂಡಳಿ ವಿರುದ್ಧ ನಟ ವಿಶಾಲ್ ಆರೋಪ: ಭ್ರಷ್ಟಾಚಾರ ಸಹಿಸಲ್ಲ ಎಂದ ಮಂಡಳಿ
ಕೇಂದ್ರ ಸೆನ್ಸಾರ್ ಮಂಡಳಿಯ ಅಧಿಕಾರಿಗಳ ಮೇಲೆ ನಟ ವಿಶಾಲ್ ಭ್ರಷ್ಟಾಚಾರದ ಆರೋಪ ಮಾಡಿದ ಬೆನ್ನಿಗೇ ಪ್ರತಿಕ್ರಿಯಿಸಿರುವ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಯು, ಈ ಆರೋಪಗಳನ್ನು ತಾನು ಗಂಭೀರವಾಗಿ ಪರಿಗಣಿಸಿದ್ದು, ಭ್ರಷ್ಟಾಚಾರದ ವಿರುದ್ಧ ಶೂನ್ಯ ಸಹಿಷ್ಣುತೆ ಹೊಂದಿದ್ದೇನೆ ಎಂದು ಸ್ಪಷ್ಟಪಡಿಸಿದೆ. ಇದೇ ವೇಳೆ, ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಯ ವರ್ಚಸ್ಸಿಗೆ ಧಕ್ಕೆ ತರುವ ಪ್ರಯತ್ನಗಳನ್ನು ತಾನು ಸಹಿಸುವುದಿಲ್ಲ
ಹೊಸದಿಲ್ಲಿ: ಕೇಂದ್ರ ಸೆನ್ಸಾರ್ ಮಂಡಳಿಯ ಅಧಿಕಾರಿಗಳ ಮೇಲೆ ನಟ ವಿಶಾಲ್ ಭ್ರಷ್ಟಾಚಾರದ ಆರೋಪ ಮಾಡಿದ ಬೆನ್ನಿಗೇ ಪ್ರತಿಕ್ರಿಯಿಸಿರುವ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಯು, ಈ ಆರೋಪಗಳನ್ನು ತಾನು ಗಂಭೀರವಾಗಿ ಪರಿಗಣಿಸಿದ್ದು, ಭ್ರಷ್ಟಾಚಾರದ ವಿರುದ್ಧ ಶೂನ್ಯ ಸಹಿಷ್ಣುತೆ ಹೊಂದಿದ್ದೇನೆ ಎಂದು ಸ್ಪಷ್ಟಪಡಿಸಿದೆ. ಇದೇ ವೇಳೆ, ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಯ ವರ್ಚಸ್ಸಿಗೆ ಧಕ್ಕೆ ತರುವ ಪ್ರಯತ್ನಗಳನ್ನು ತಾನು ಸಹಿಸುವುದಿಲ್ಲ ಎಂದೂ ಎಚ್ಚರಿಕೆ ನೀಡಿದೆ ಎಂದು ndtv.com ವರದಿ ಮಾಡಿದೆ.
ತಾನು ಈಗಾಗಲೇ ಆನ್ ಲೈನ್ ಪ್ರಮಾಣೀಕರಣ ವ್ಯವಸ್ಥೆಯನ್ನು ಜಾರಿಗೊಳಿಸಿದ್ದು, ಈ ನೂತನ ವ್ಯವಸ್ಥೆಯ ಸುಧಾರಣೆ ಬಗ್ಗೆ ನಿಯಮಿತವಾಗಿ ಮಾಹಿತಿ ನೀಡುತ್ತಿದ್ದರೂ, ಚಲನಚಿತ್ರ ನಿರ್ಮಾಪಕರು ಹಾಗೂ ಅರ್ಜಿದಾರರು ಈಗಲೂ ಮಧ್ಯವರ್ತಿಗಳು ಅಥವಾ ಏಜೆಂಟರನ್ನು ಅವಲಂಬಿಸುತ್ತಿದ್ದಾರೆ. ಇದರಿಂದ ಚಲನಚಿತ್ರ ಪ್ರಮಾಣೀಕರಣ ಪ್ರಕ್ರಿಯೆಯಲ್ಲಿ ಮೂರನೆ ವ್ಯಕ್ತಿಗಳ ಪಾಲುದಾರಿಕೆಯನ್ನು ನಿರ್ಮೂಲನೆ ಮಾಡುವ ತನ್ನ ಉದ್ದೇಶ ವಿಫಲವಾಗುತ್ತಿದೆ ಎಂದೂ ಕೇಂದ್ರ ಸೆನ್ಸಾರ್ ಮಂಡಳಿ ದೂರಿದೆ.
ಈ ಕುರಿತು ಅಧಿಕೃತ ಹೇಳಿಕೆ ಬಿಡುಗಡೆ ಮಾಡಿರುವ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಯು, “ಆಕ್ರಮಣಕಾರಿ ಡಿಜಟಲೀಕರಣ ಜಾರಿ, ಸಂಪೂರ್ಣ ಸ್ವಯಂಚಾಲಿತ ಹಾಗೂ ಮನುಷ್ಯರ ಹಸ್ತಕ್ಷೇಪವನ್ನು ಕನಿಷ್ಠ ಮಟ್ಟಕ್ಕಿಳಿಸಿರುವುದು, ಮಧ್ಯವರ್ತಿಗಳು ಹಾಗೂ ಏಜೆಂಟರ ಹಸ್ತಕ್ಷೇಪವನ್ನು ಗಮನಾರ್ಹವಾಗಿ ಇಳಿಕೆ ಮುಂತಾದ ಸುಧಾರಣಾ ಕ್ರಮಗಳನ್ನು ಜಾರಿ ಮಾಡಲಾಗಿದೆ. ಇದರ ಹೊರತಾಗಿಯೂ, ಕೆಲವು ಪ್ರಾಂತ್ಯಗಳಲ್ಲಿ ಮಧ್ಯವರ್ತಿಗಳ ಹಸ್ತಕ್ಷೇಪ ಇಂದಿಗೂ ಅಸ್ತಿತ್ವದಲ್ಲಿದ್ದು, ಪಾರದರ್ಶಕತೆ ಹಾಗೂ ಪ್ರಮಾಣೀಕರಣ ಪ್ರಕ್ರಿಯೆಯ ಸುಲಭ ಕಾರ್ಯಾಚರಣೆಯ ಉದ್ದೇಶಕ್ಕೆ ಸೋಲುಂಟಾಗುತ್ತಿದೆ” ಎಂದು ಹೇಳಿದೆ.
ಇದಕ್ಕೂ ಮುನ್ನ, ನಟ ವಿಶಾಲ್, ಕೇಂದ್ರ ಸೆನ್ಸಾರ್ ಮಂಡಳಿಯಿಂದ ತನ್ನ ನಾಯಕತ್ವದ ಚಲನಚಿತ್ರ ‘ಮಾರ್ಕ್ ಆ್ಯಂಟನಿ’ಗೆ ಪ್ರಮಾಣ ಪತ್ರ ಪಡೆಯಲು ರೂ. 6.5 ಲಕ್ಷ ಮೊತ್ತವನ್ನು ಲಂಚ ನೀಡಬೇಕಾಯಿತು ಎಂದು ಆರೋಪಿಸಿದ್ದರು. ಈ ಚಿತ್ರ ಕಳೆದ ವಾರ ದಕ್ಷಿಣ ಭಾರತದಾದ್ಯಂತ ಬಿಡುಗಡೆಯಾಗಿತ್ತು.