ಮಂಗಳೂರು: ಕೇಂದ್ರ ಸರಕಾರದ ವಿರುದ್ಧ ಸಿಐಟಿಯು ಪ್ರತಿಭಟನೆ

Update: 2024-07-10 09:52 GMT

ಮಂಗಳೂರು, ಜು.10: ಕಾರ್ಮಿಕ ಕಾನೂನುಗಳನ್ನು ಸಂಹಿತೆಯನ್ನಾಗಿ ರೂಪಿಸಿ ಜಾರಿ ಮಾಡಲು ಹೊರಟ ಕೇಂದ್ರ ಸರಕಾರದ ವಿರುದ್ಧ ಮತ್ತು ಹಲವು ಬೇಡಿಕೆಗಳನ್ನು ಮುಂದಿಟ್ಟು ದೇಶಾದ್ಯಂತ ಕಾರ್ಮಿಕ ವರ್ಗದ ನೇತೃತ್ವದಲ್ಲಿ "ಬೇಡಿಕೆ ದಿನಾಚರಣೆ" ನಡೆಸಲು ಸಿಐಟಿಯು ಕೇಂದ್ರ ಸಮಿತಿಯ ಕರೆಯ ಮೇರೆಗೆ ಬುಧವಾರ ನಗರದ ಮಿನಿ ವಿಧಾನಸೌಧದ ಮುಂದೆ ಪ್ರತಿಭಟನೆ ನಡೆಸಲಾಯಿತು.

ನರೇಂದ್ರ ಮೋದಿ ಸರಕಾರವು ದೇಶವನ್ನು ಲೂಟಿಗೈದಿದೆ ಎಂದು ಆರೋಪಿಸಿ ವಿವಿಧ ವಿಭಾಗದ ಕಾರ್ಮಿಕರು ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ಪ್ರತಿಭಟನೆಯನ್ನು ಉದ್ಘಾಟಿಸಿ ಮಾತನಾಡಿದ ಸಿಐಟಿಯು ದ.ಕ.ಜಿಲ್ಲಾಧ್ಯಕ್ಷ ಜೆ.ಬಾಲಕೃಷ್ಣ ಶೆಟ್ಟಿ, ಕಾರ್ಪೊರೇಟ್ ಕೋಮುವಾದಿಗಳ ಅಕ್ರಮ ಕೂಟವು ದೇಶವನ್ನು ತೀರಾ ಅಧೋಗತಿಗೆ ತಳ್ಳಿದೆ. ಈ ಬಾರಿಯ ಚುನಾವಣೆಯಲ್ಲಿ ದೇಶದ ಜನತೆ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರಕಾರಕ್ಕೆ ತಕ್ಕಪಾಠವನ್ನು ಕಲಿಸಿದ್ದರೂ ಎಚ್ಚೆತ್ತುಕೊಂಡಿಲ್ಲ. ಕಾರ್ಮಿಕ ಕಾನೂನುಗಳನ್ನು ಸಂಹಿತೆಯನ್ನಾಗಿ ರೂಪಿಸಲು ಸಂಚು ಹೂಡುತ್ತಿವೆ ಎಂದು ಆರೋಪಿಸಿದರು.

ಸಿಐಟಿಯು ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್, ಜಿಲ್ಲಾ ಉಪಾಧ್ಯಕ್ಷ ಹಾಗೂ ಬೀದಿಬದಿ ವ್ಯಾಪಾರಸ್ಥರ ಸಂಘದ ಗೌರವಾಧ್ಯಕ್ಷ ಬಿ.ಕೆ.ಇಮ್ತಿಯಾಝ್, ಸಿಐಟಿಯು ಜಿಲ್ಲಾ ನಾಯಕ ಯೋಗೀಶ್ ಜಪ್ಪಿನಮೊಗರು ಮಾತನಾಡಿದರು.

ಕಾರ್ಮಿಕರ ಹೋರಾಟವನ್ನು ಬೆಂಬಲಿಸಿ ರೈತ ಸಂಘದ ನಾಯಕರಾದ ಸದಾಶಿವದಾಸ್, ದಲಿತ ಹಕ್ಕುಗಳ ಸಮಿತಿ ಮುಖಂಡರಾದ ತಿಮ್ಮಯ್ಯ ಕೊಂಚಾಡಿ, ರಾಧಾಕ್ರೃಷ್ಣ ಬೊಂಡಂತಿಲ, ಡಿವೈಎಫ್‌ಐ ನಾಯಕರಾದ ಸಂತೋಷ್ ಬಜಾಲ್, ಯೋಗಿತಾ ಉಳ್ಳಾಲ ಭಾಗವಹಿಸಿದ್ದರು.

ಪ್ರತಿಭಟನೆಯ ನೇತೃತ್ವವನ್ನು ಸಿಐಟಿಯು ಜಿಲ್ಲಾ ನಾಯಕರಾದ ಜಯಂತಿ ಶೆಟ್ಟಿ, ವಸಂತಿ ಕುಪ್ಪೆಪದವು, ನೋಣಯ್ಯ ಗೌಡ,ಅಶೋಕ್ ಶ್ರೀಯಾನ್, ನಾಗೇಶ್ ಕೋಟ್ಯಾನ್, ಭವಾನಿ ವಾಮಂಜೂರು, ಲೋಲಾಕ್ಷಿ ಬಂಟ್ವಾಳ, ಮುಹಮ್ಮದ್ ಮುಸ್ತಾಫ, ಬೀದಿಬದಿ ವ್ಯಾಪಾರಸ್ಥರ ಸಂಘದ ಮುಖಂಡರಾದ ಅಬ್ದುರ್ರಹ್ಮಾನ್, ಮುಝಾಫರ್, ಆದಂ ಬಜಾಲ್, ಗಜಾನನ ವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News