ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು
ಕಲಬುರಗಿ: "ಕಾಂಗ್ರೆಸ್ ಪಕ್ಷವನ್ನು ವೆಲ್ಫೇರ್ ಪಾರ್ಟಿ ಬೆಂಬಲಿಸುತ್ತಿದೆ, ಈ ಪಕ್ಷದ ಉದ್ದೇಶ ಈ ದೇಶವನ್ನು 'ಇಸ್ಲಾಮಿಕ್ ಸ್ಟೇಟ್' ಮಾಡುವುದಾಗಿದೆ ಎಂದು ಕೇಂದ್ರ ಗೃಹ ಮಂತ್ರಿ ಅಮಿತ ಶಾ ಚುನಾವಣೆ ರ್‍ಯಾಲಿಯಲ್ಲಿ ನೀಡಿರುವ ಹೇಳಿಕೆ ವಿರುದ್ಧ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಇದರ ಮುಖಂಡರು ಚುನಾವಣೆ ಆಯೋಗಕ್ಕೆ ದೂರು ನೀಡಿದ್ದಾರೆ.
ಬುಧವಾರ ಕಲಬುರಗಿ ಚುನಾವಣಾಧಿಕಾರಿಗಳ ಮೂಲಕ ಮುಖ್ಯ ಚುನಾವಣಾ ಆಯೋಗಕ್ಕೆ ದೂರು ನೀಡಲಾಗಿದೆ. ಏಪ್ರಿಲ್ 24 ರಂದು ಕೇರಳದ ಆಲಪ್ಪುಝದಲ್ಲಿ ನಡೆದ ಚುನಾವಣಾ ರ್‍ಯಾಲಿಯಲ್ಲಿ ಪಕ್ಷದ ವಿರುದ್ಧ ಕೇಂದ್ರ ಗೃಹ ಸಚಿವರು ಸುಳ್ಳು ಆರೋಪ ಮಾಡಿ ಪಕ್ಷದ ವರ್ಚಸ್ಸಿಗೆ ಧಕ್ಕೆ ತಂದಿದ್ದು, ಮತದಾರರಲ್ಲಿ ಪಕ್ಷದ ಬಗ್ಗೆ ಗೊಂದಲ ಸೃಷ್ಟಿಸಿದ್ದಾರೆ ಎಂದು ಮನವಿಯಲ್ಲಿ ದೂರಿದ್ದಾರೆ.
ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಚುನಾವಣಾ ಆಯೋಗದಿಂದ ಅಧಿಕೃತವಾಗಿ ನೋಂದಾಯಿತ ಪಕ್ಷವಾಗಿದೆ. ಕಳೆದ 13 ವರ್ಷಗಳಿಂದ ಸಾಂವಿಧಾನಿಕವಾಗಿ ಕಾರ್ಯನಿರ್ವಹಿಸುತ್ತಿದೆ. ಕೇಂದ್ರ ಗೃಹ ಮಂತ್ರಿಗಳ ಈ ಹೇಳಿಕೆ ಮಾದರಿ ಚುನಾವಣಾ ನೀತಿ ಸಂಹಿತೆಯ ವಿರುದ್ಧವಾಗಿದ್ದು, ಈ ಬಗ್ಗೆ ಸೂಕ್ತ ಕ್ರಮ ಜರಗಿಸಬೇಕು ಎಂದು ಒತ್ತಾಯಿಸಿದ್ದಾರೆ.