ದೇಶದಲ್ಲಿ ಅಶಿಸ್ತಿನಿಂದ ಕೂಡಿದ ಪಕ್ಷ ಅಂದರೆ ಕಾಂಗ್ರೆಸ್: ಕೆ.ಎಸ್ ಈಶ್ವರಪ್ಪ
ಶಿವಮೊಗ್ಗ: ಕಾಂಗ್ರೆಸ್ ನಾಯಕರದ್ದು ಒಂದು ರೀತಿಯ ಜಿನ್ನಾ ಸಂಸ್ಕೃತಿ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದ್ದಾರೆ.
ಪ್ರಧಾನಿ ಮೋದಿ ಆಡಳಿತದ ಕೇಂದ್ರ ಸರಕಾರ ಪ್ರತ್ಯೇಕ ರಾಷ್ಟ್ರಕ್ಕೂ ಬೇಡಿಕೆ ಇಡುವಂತಹ ಅನಿವಾರ್ಯ ಪರಿಸ್ಥಿತಿ ನಮ್ಮ ಮೇಲೆ ಹೇರುತ್ತಿದೆ ಎಂಬ ಕಾಂಗ್ರೆಸ್ ಸಂಸದ ಡಿ.ಕೆ ಸುರೇಶ್ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಈಶ್ವರಪ್ಪ, ಡಿ.ಕೆ ಸಹೋದರರದ್ದು ಜಿನ್ನಾ ಸಂಸ್ಕೃತಿ ಎಂದು ವ್ಯಂಗ್ಯವಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಹಿಂದೂಸ್ತಾನ- ಪಾಕಿಸ್ತಾನ ಅಂತಾ ಒಡೆದು ಅಧಿಕಾರಕ್ಕಾಗಿ ದೇಶವನ್ನು ಎರಡು ಭಾಗ ಮಾಡಿದ್ದರು.ಹಿಂದೂ, ಮುಸ್ಲಿಂ ಎಲ್ಲರೂ ಒಟ್ಟಾಗಿ ಇದ್ದಾಗ ದೇಶ ವಿಭಜನೆ ಆಯ್ತು. ಹಿಂದೂಸ್ತಾನ- ಪಾಕಿಸ್ತಾನದ ಬಳಿಕ ಇದೀಗ ಅಖಂಡ ಭಾರತವನ್ನು ಎರಡು ಮಾಡಲು ಹೊರಟಿದ್ದಾರೆ ಎಂದರು.
ಕಾಂಗ್ರೆಸ್ ಪಕ್ಷದಲ್ಲಿ ನೂರು ಸಮಸ್ಯೆ ಇದೆ. ಆ ಸಮಸ್ಯೆಗಳ ಬಗ್ಗೆ ನಾನು ಮಾತಾಡಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಯಾರು ಎನು ಬೇಕಾದರೂ ಯಾರ ಬಗ್ಗೆಯಾದ್ರೂ ಮಾತಾಡಬಹುದು. ಅದು ಕಾಂಗ್ರೆಸ್ ಪಕ್ಷದ ನಾಯಕತ್ವ. ದೇಶದಲ್ಲಿ ಅಶಿಸ್ತಿನಿಂದ ಕೂಡಿದ ಪಕ್ಷ ಅಂದರೆ ಕಾಂಗ್ರೆಸ್ ಎಂದು ಲೇವಡಿ ಮಾಡಿದರು.
ರಾಜ್ಯಕ್ಕೆ ಬಜೆಟ್ ನಲ್ಲಿ ಎನು ಸಿಕ್ಕಿದೆ ಒಂದು ಬಾರಿ ನೋಡಲಿ. ರಸ್ತೆಯಲ್ಲಿ ಹೋಗೋ ದಾಸನ ತರ ಮಾತಾಡಿದ್ದಾರೆ.ಇಡೀ ದೇಶದಲ್ಲಿ ನಾನು ಒಬ್ಬ ರಾಜಕಾರಣಿ.ಬದುಕಿದ್ದೇನೆ ಎಂದು ತೋರಿಸಲು ಡಿ.ಕೆ.ಸುರೇಶ್ ಹೇಳಿಕೆ ನೀಡಿದ್ದಾರೆ. ಇವರಿಗೆ ದೇಶ ಎಂದರೇ ತಾಯಿ ಎನ್ನುವ ಮನೋಭಾವವಿಲ್ಲ ಎಂದು ಟೀಕಿಸಿದರು.