ಪುತ್ರ ಶೋಕದಲ್ಲೂ ಮಗನ ಅಂಗಾಂಗ ದಾನ ಮಾಡಿದ ಮಂಗಳೂರಿನ ಆದರ್ಶ ದಂಪತಿ

Update: 2023-10-18 17:21 GMT

ಮಂಗಳೂರಿನ ಆಶಿಶ್ ಡಿಸೋಜಾ ಎಂಬ 13 ವರ್ಷದ ಬಾಲಕ ಡೆಂಗ್ಯೂ ಜ್ವರಕ್ಕೆ ತುತ್ತಾಗಿ ಸಾವನ್ನಪ್ಪಿದ್ದು, ಪುತ್ರ ಶೋಕದಲ್ಲೂ ಅಂಗಾಂಗ ದಾನ ಮಾಡುವ ಶ್ರೇಷ್ಠ ನಿರ್ಧಾರ ತೆಗೆದುಕೊಂಡ ಆಶಿಶ್ ತಂದೆ ಅಲ್ಫೋನ್ಸ್ ತಾಯಿ ಸೋನಿಯಾ ಡಿಸೋಜಾ ನಿಜಕ್ಕೂ ಆದರ್ಶ ದಂಪತಿಯಾಗಿದ್ದಾರೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ಅಗತ್ಯ ಚಿಕಿತ್ಸೆ ಪಡೆದ ಬಳಿಕ ಡೆಂಗ್ಯೂ ಜ್ವರದಿಂದ ಗುಣಮುಖರಾಗಿದ್ದ ಆಶಿಶ್, ಇನ್ನೇನು ಮನೆಗೆ ತೆರಳಲು ತಯಾರಿ ನಡೆಸುವ ಸಂದರ್ಭದಲ್ಲೇ ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪಿದ್ದರು.

ಆಶಿಶ್ ತಂದೆ ಅಲ್ಫೋನ್ಸ್, ತಾಯಿ ಸೋನಿಯಾ ಡಿಸೋಜಾ ತಮ್ಮ ಪುತ್ರರ ಎದುರು ಅಂಗಾಂಗ ದಾನದ ಮಹತ್ವದ ಬಗ್ಗೆ ಸದಾ ಮಾತನಾಡುತ್ತಿದ್ದರು. ತಾವು ನಿಧನರಾದರೆ ತಮ್ಮ ಅಂಗಾಂಗಗಳನ್ನ ದಾನ ಮಾಡುವಂತೆ ದಂಪತಿಗಳು ತಮ್ಮ ಮಕ್ಕಳಿಗೆ ಸೂಚನೆ ನೀಡಿದ್ದರು.

ದುರಾದೃಷ್ಟ ತಮ್ಮ ಕಣ್ಣೆದುರೇ ಪುತ್ರನ ಸಾವನ್ನ ನೋಡಬೇಕಾಗಿ ಬಂತು. ಅತ್ಯಂತ ನೋವಿನ ಸಂದರ್ಭದಲ್ಲೂ, ತಾವು ಪಾಲಿಸಬೇಕು ಎಂದುಕೊಂಡಿದ್ದ ಆದರ್ಶವನ್ನ ಮರೆಯದ ಅಲ್ಫೋನ್ ಮತ್ತು ಸೋನಿಯಾ ಡಿಸೋಜಾ, ಪುತ್ರ ಆಶಿಶ್ ಅಂಗಾಂಗ ದಾನ ಮಾಡುವ ನಿರ್ಧಾರ ತೆಗೆದುಕೊಂಡರು.

ಆಶಿಶ್ ಎರಡು ಕಣ್ಣುಗಳನ್ನ ದಾನ ಮಾಡುವುದರ ಜೊತೆಗೆ ದೇಹ ದಾನವನ್ನ ಕೂಡ ಮಾಡಿದ್ದರೆ. ದಂಪತಿಯ ಈ ಕಾರ್ಯ ರಾಜ್ಯಕ್ಕೆ ಮಾದರಿಯಾಗಿದ್ದು, ಇತರರಿಗೆ ಪ್ರೇರಣೆಯಾಗಲಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅಭಿಪ್ರಾಯ ಪಟ್ಟರು.

ಡಿಸೋಜಾ ದಂಪತಿಯವರ ಈ ಕಾರ್ಯ ಸನ್ಮಾನಕ್ಕೆ ಅರ್ಹವಾದದ್ದು. ಈ ನಿಟ್ಟಿನಲ್ಲಿ ಮಂಗಳೂರಿನಲ್ಲಿ ಕುಟುಂಬದ ಮನೆಗೆ ತೆರಳಿ, ಆಶಿಶ್ ತಂದೆ ತಾಯಿ ಇಬ್ಬರಿಗೂ ಸಾಂತ್ವಾನ ಹೇಳುವ ಜೊತೆಗೆ ಅವರ ಕಾರ್ಯವನ್ನ ಸನ್ಮಾನಿಸಿದರು.

ನೋವಿನ ಸಂದರ್ಭವಾದರೂ, ನಿಮ್ಮ ಕಾರ್ಯ ಇತರರಿಗೆ ಮಾದರಿ ಎಂದು ದಿನೇಶ್ ಗುಂಡೂರಾವ್ ಕೈ ಮುಗಿದರು.








 


 


 


Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News